ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣ ವಿರೋಧಿಸುವವರು ಪಾಕ್‌ಗೆ ಹೋಗಲಿ: ಉತ್ತರ ಪ್ರದೇಶ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ಹೇಳಿಕೆ

Last Updated 3 ಫೆಬ್ರುವರಿ 2018, 4:32 IST
ಅಕ್ಷರ ಗಾತ್ರ

ಫೈಜಾಬಾದ್ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಬೇಕು ಅಥವಾ ಸಿರಿಯಾದಲ್ಲಿ ಐಸಿಸ್ ಸೇರಲಿ ಎಂದು ಉತ್ತರ ಪ್ರದೇಶದ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಾಸೀಮ್ ರಿಜ್ವಿ ಹೇಳಿದ್ದಾರೆ.

ವಾಸೀಮ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ತಕ್ಷಣವೇ ಅವರನ್ನು ಬಂಧಿಸಬೇಕು ಎಂದು ಶಿಯಾ ಧರ್ಮಗುರುಗಳು ಆಗ್ರಹಿಸಿದ್ದಾರೆ.

ಬಾಬ್ರಿ ಮಸೀದಿ–ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಇದೇ 8ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ವಿಚಾರಣೆಗೆ ಕೆಲವೇ ದಿನಗಳಿರುವಾಗ ರಿಜ್ವಿ ಈ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿ ‘ಶುಕ್ರವಾರದ ಪ್ರಾರ್ಥನೆ’ ಸಲ್ಲಿಸಿದ್ದ ರಿಜ್ವಿ, ನಂತರ ರಾಮ ಜನ್ಮಭೂಮಿಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿ ಮಾಡಿದ್ದರು.

ರಿಜ್ವಿ ಹೇಳಿದ್ದೇನು?: ‘ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವನ್ನು ವಿರೋಧಿಸುವವರು ಮತ್ತು ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಬೇಕು ಎಂದು ಯಾರು ಆಗ್ರಹಿಸುತ್ತಾರೋ, ಅಂಥ ಮೂಲಭೂತವಾದಿಗಳು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲಿ. ಅಂತಹ ಮುಸ್ಲಿಮರಿಗೆ ಭಾರತದಲ್ಲಿ ಜಾಗವಿಲ್ಲ. ಮಸೀದಿಯ ಹೆಸರಿನಲ್ಲಿ ಜಿಹಾದ್ ಅನ್ನು ಹರಡುವವರು ಸಿರಿಯಾಕ್ಕೆ ಹೋಗಿ ಐಸಿಸ್ ಮುಖ್ಯಸ್ಥ ಅಬು ಬಕರ್ ಬಾಗ್ದಾದಿ ಜತೆ ಸೇರಿಕೊಳ್ಳಲಿ’ ಎಂದು ವಾಸೀಮ್ ರಿಜ್ವಿ ಹೇಳಿದ್ದಾರೆ.

ಅಲ್ಲದೆ, ಮೂಲಭೂತವಾದಿ ಮುಸ್ಲಿಂ ಧರ್ಮಗುರುಗಳು ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಅವರೆಲ್ಲ ಪಾಕಿಸ್ತಾನಕ್ಕೋ ಆಫ್ಗಾನಿಸ್ತಾನಕ್ಕೋ ಹೋಗಬೇಕು ಎಂದು ಹೇಳಿದ್ದಾರೆ.

ತೀವ್ರ ವಿರೋಧ: ರಿಜ್ವಿ ಹೇಳಿಕೆಗೆ ಶಿಯಾ ಧರ್ಮಗುರುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಿಜ್ವಿ ಅವರು ಕೋಮಿನ ಆಧಾರದಲ್ಲಿ ಪರಿಸ್ಥಿತಿಯನ್ನು ಹದಗೆಡಿಸುತ್ತಿದ್ದಾರೆ ಎಂದು ಹೇಳಿರುವ ಶಿಯಾ ಧರ್ಮಗುರುಗಳು ತಕ್ಷಣವೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ರಿಜ್ವಿ ನಾಟಕ: ‘ವಕ್ಫ್ ಆಸ್ತಿಯನ್ನು ಅಕ್ರಮ ಮಾರಾಟ ಮಾಡಿದ ಪ್ರಕರಣದಲ್ಲಿ ರಿಜ್ವಿ ಪ್ರಮುಖ ಆರೋಪಿ ಎಂದು ಶಿಯಾ ಉಲೇಮ ಮಂಡಳಿಯ ಮೌಲಾನಾ ಇಫ್ತಿಕಾರ್ ಹುಸೇನ್ ಇನ್‌ಕ್ವಿಲಾಬಿ ಹೇಳಿದ್ದಾರೆ.

‘ರಿಜ್ವಿ ವಿರುದ್ಧ ಕ್ರೈಂಬ್ರ್ಯಾಂಚ್ ಮತ್ತು ಸಿಐಡಿಗಳು ದೋಷಾರೋಪ ಹೊರಿಸಿವೆ. ಇದೀಗ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಆಡಳಿತದ ಸಂದರ್ಭದಲ್ಲಿ ಮುಲಾಯಂ ಸಿಂಗ್, ನಂತರ ಆಗಿನ ಸಚಿವ ಆಜಂ ಖಾನ್ ಪರ ಇದ್ದ ರಿಜ್ವಿ ಈಗ ಬಿಜೆಪಿ ಸರ್ಕಾರದ ಒಲವು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಇನ್‌ಕ್ವಿಲಾಬಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT