ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಭೀಮನಗೌಡ, ರಂಗಣ್ಣ ನೇರ ಹಣಾಹಣಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ: 21 ರಂದು ಮತದಾನ
Last Updated 18 ನವೆಂಬರ್ 2021, 13:23 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯು ಅಂತಿಮ ಹಂತಕ್ಕೆ ತಲುಪಿದ್ದು, ನವೆಂಬರ್‌ 21 ರಂದು ಮತದಾನ ನಡೆಯುವುದಕ್ಕೆ ಎರಡು ದಿನಗಳು ಬಾಕಿ ಇವೆ.

ಪುಸ್ತಕಗಳ ಪ್ರಕಾಶನ ಹಾಗೂ ಸಾಹಿತ್ಯ ವಲಯದ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಜನರಿಗೆ ಚಿರಪರಿಚಿತರಾದ ರಾಯಚೂರು ನಿವಾಸಿ ಭೀಮನಗೌಡ ಇಟಗಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಪ್ರಭಾವಲಯ ಹೊಂದಿರುವ ದೇವದುರ್ಗ ನಿವಾಸಿ ರಂಗಣ್ಣ ಪಾಟೀಲ ಅಳ್ಳುಂಡಿ ಅವರ ಮಧ್ಯೆ ಅಧ್ಯಕ್ಷ ಸ್ಥಾನಕ್ಕಾಗಿ ನೇರ ಹಣಾಹಣಿ ಏರ್ಪಟ್ಟಿದೆ.

ಜಿಲ್ಲೆಯಾದ್ಯಂತ ಬಿರುಸಿನ ಪ್ರವಾಸ ಕೈಗೊಂಡಿರುವ ಇಬ್ಬರು ಅಭ್ಯರ್ಥಿಗಳು ಮತದಾರರಿಗೆ ಹಲವು ವಿಷಯಗಳನ್ನು ಮನವರಿಕೆ ಮಾಡುತ್ತಿದ್ದಾರೆ. ಪ್ರತ್ಯೇಕ ಪ್ರಣಾಳಿಕೆ ಹಾಗೂ ಬದ್ಧತೆ ಹೊಂದಿರುವ ಇಬ್ಬರಿಗೂ ಸಾಕಷ್ಟು ಮತದಾರರು ಬೆಂಬಲ ಸೂಚಿಸುತ್ತಿದ್ದಾರೆ. ಸ್ಪರ್ಧೆ ನೇರವಾಗಿ ಇರುವುದರಿಂದ ಮತದಾರರು ಒಲವು ಯಾರ ಕಡೆಗೆ ಹೆಚ್ಚಾಗಿದೆ ಎಂದು ಹೇಳುವುದು ದುಸ್ತರ. ಇನ್ನೂ ಎರಡು ದಿನಗಳಲ್ಲಿ ಮತದಾನ ನಡೆಯುವುದರಿಂದ ಅಂತಿಮವಾಗಿ ಮತದಾರರನ್ನು ಮನವೊಲಿಸುವ ಕಾರ್ಯದಲ್ಲಿ ಇಬ್ಬರು ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದಾರೆ.

ಆರಂಭದಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ರಾಮಣ್ಣ ಆರ್.ಎಚ್.ಜೆ ಹಾಗೂ ಮಲ್ಲಿಕಾರ್ಜುನಸ್ವಾಮಿ ಶಿಖರಿಮಠ ಕೂಡಾ ಅಧ್ಯಕ್ಷ ಸ್ಥಾನದ ಪೈಪೋಟಿಗೆ ಇಳಿಯುವ ಮುನ್ಸೂಚನೆ ನೀಡಿದ್ದರು. ಇದೀಗ ಮಲ್ಲಿಕಾರ್ಜುನಸ್ವಾಮಿ ಶಿಖರಿಮಠ ಅವರು ಭೀಮನಗೌಡ ಅವರಿಗೆ ಬೆಂಬಲ ಸೂಚಿಸಿ ನಾಮಪತ್ರ ಹಿಂಪಡೆದಿದ್ದಾರೆ. ರಾಮಣ್ಣ ಅವರು ಪ್ರಚಾರ ಕೈಗೊಳ್ಳದೆ ತಟಸ್ಥ ಧೋರಣೆ ಅನುಸರಿಸಿದ್ದಾರೆ. ಹೀಗಾಗಿ ಕಣದಲ್ಲಿ ಇಬ್ಬರ ಮಧ್ಯೆಯೇ ನೇರ ಹಣಾಹಣಿ ಏರ್ಪಟ್ಟಿದೆ.

ಜಿಲ್ಲೆಯ ಮತದಾರರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಒಟ್ಟು 6,084 ಅಜೀವ ಸದಸ್ಯರಿದ್ದಾರೆ. ಜಿಲ್ಲಾ ಕೇಂದ್ರದಲ್ಲೇ ಅತಿಹೆಚ್ಚು 1,400 ಮತದಾರರು, ಸಿಂಧನೂರಿನಲ್ಲಿ 1,000, ಮಾನ್ವಿಯಲ್ಲಿ 1,300, ಲಿಂಗಸುಗೂರಿನಲ್ಲಿ 800, ದೇವದುರ್ಗದಲ್ಲಿ 660, ಸಿರವಾರದಲ್ಲಿ 480 ಹಾಗೂ ಮಸ್ಕಿಯಲ್ಲಿ 300 ಮತದಾರರು ಇದ್ದಾರೆ.

ಮತದಾನಕ್ಕಾಗಿ ಜಿಲ್ಲೆಯಾದ್ಯಂತ ಒಟ್ಟು ಒಂಭತ್ತು ಮತಗಟ್ಟೆಗಳನ್ನು ಆರಂಭಿಸುವುದಕ್ಕೆ ಯೋಜಿಸಲಾಗಿದೆ. ರಾಯಚೂರು ತಹಶೀಲ್ದಾರ್‌ ಕಚೇರಿಯಲ್ಲಿ ಎರಡು, ದೇವದುರ್ಗ, ಮಾನ್ವಿ, ಪೋತ್ನಾಳ, ಹಿರೇಕೊಟ್ನೆಕಲ್‌, ಸಿಂಧನೂರು, ಮಸ್ಕಿ, ಲಿಂಗಸುಗೂರು ಹಾಗೂ ಸಿರವಾರದಲ್ಲಿ ತಲಾ ಒಂದು ಮತದಾನ ಕೇಂದ್ರ ತೆರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT