ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡಾಡಿ ದನಗಳ ಹಾವಳಿಗೆ ಬೇಸತ್ತ ಜನ

ವಿಭಜಕದ ಮೇಲಿಂದ ಬೈಕ್‌ ಸವಾರರ ಮೇಲೆ ಜಿಗಿಯುವ ದನಗಳು
ಮಂಜುನಾಥ ಎನ್‌ ಬಳ್ಳಾರಿ
Published : 15 ಸೆಪ್ಟೆಂಬರ್ 2024, 5:09 IST
Last Updated : 15 ಸೆಪ್ಟೆಂಬರ್ 2024, 5:09 IST
ಫಾಲೋ ಮಾಡಿ
Comments

ಕವಿತಾಳ: ಹದಗೆಟ್ಟ ಮುಖ್ಯ ರಸ್ತೆ, ವಾಹನಗಳು ಸಂಚರಿಸಿದಂತೆಲ್ಲಾ ಮುಖಕ್ಕೆ ಹರಡುವ ವಿಪರೀತ ದೂಳು, ಹಗಲು, ರಾತ್ರಿ ಎನ್ನದೇ ಬಿಡಾಡಿ ದನಗಳು ಮತ್ತು ಬೀದಿ ನಾಯಿಗಳ ಕಾಟ, ಬೈಕ್‌ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಇದು ಅಂದಾಜು 25 ಸಾವಿರ ಜನಸಂಖ್ಯೆ ಹೊಂದಿದ ಪಟ್ಟಣದ ದುರವಸ್ಥೆ.

ಇಲ್ಲಿನ ಆನ್ವರಿ ಕ್ರಾಸ್‌ನಿಂದ ಸರ್ಕಾರಿ ಕಾಲೇಜಿನವರೆಗೆ ವಿಭಜಕದ ಮೇಲೆ ನಿಲ್ಲುವ ಬಿಡಾಡಿ ದನಗಳು ಬೈಕ್‌ ಸವಾರರ ಮೇಲೆ ಎರಗುತ್ತವೆ ಮತ್ತು ರಾತ್ರಿ ವೇಳೆ ರಸ್ತೆಯಲ್ಲಿಯೇ ಮಲಗುವ ಎಮ್ಮೆಗಳು ಬೈಕ್‌ ಸವಾರರ ಪ್ರಾಣ ಬಲಿಗೆ ಕಾಯುತ್ತಿರುತ್ತವೆ.

ಸಿರವಾರ ತಾಲ್ಲೂಕು ವ್ಯಾಪ್ತಿಯ ಪ್ರಮುಖ ಪಟ್ಟಣ ಎನಿಸಿಕೊಂಡ ಕವಿತಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂದು ಈ ಹಿಂದೆ ಹೋರಾಟ, ಪ್ರತಿಭಟನೆಗಳು ನಡೆದಿದ್ದವು. ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಲಾಯಿತು ಅದನ್ನು ಇಲ್ಲಿನ ಜನರು ಸಂಭ್ರಮಿಸಿದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಹಲವು ಸಮಸ್ಯೆಗಳು ಕಾಡುತ್ತಿದ್ದು ‘ಈ ಊರಲ್ಲಿ ಯಾರೂ ಹೇಳೋರಿಲ್ಲ ಕೇಳೋರಿಲ್ಲ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಬಸ್‌ ನಿಲ್ದಾಣ, 110 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರ, ಜಲ ಸಂಪನ್ಮೂಲ ಇಲಾಕೆ ಕಚೇರಿ, ಪಟ್ಟಣ ಪಂಚಾಯಿತಿ, 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರ, ನೆಮ್ಮದಿ ಕೇಂದ್ರ, ಕೃಷಿ ಉತ್ಪನ್ನ ಉಪ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ, ಪೊಲೀಸ್‌ ಠಾಣೆ, ವಸತಿ ಸಹಿತ ಪದವಿ ಕಾಲೇಜು, ಸರ್ಕಾರಿ ಪಿಯು ಕಾಲೇಜು, ಪ್ರೌಢಶಾಲೆಗಳನ್ನು ಹೊಂದಿದೆ. ಸಿರವಾರ, ಮಾನ್ವಿ ಮತ್ತು ಮಸ್ಕಿ ತಾಲ್ಲೂಕು ವ್ಯಾಪ್ತಿಯ ಅಂದಾಜು 48 ಹಳ್ಳಿಗಳು ಠಾಣೆ ವ್ಯಾಪಿಗೆ ಒಳಪಟ್ಟಿದ್ದು ವಿವಿಧ ಕಚೇರಿ ಕೆಲಸ ಮತ್ತು ಮಾರುಕಟ್ಟೆಗೆ ಮತ್ತಿತರ ಕಾರ್ಯಗಳಿಗೆ ನಿತ್ಯ ನೂರಾರು ಜನರು ಬಂದು ಹೋಗುತ್ತಾರೆ.

‘ಸರಿಯಾದ ರಸ್ತೆ, ಚರಂಡಿ, ಮೂತ್ರಾಲಯ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಇದೆ, ಸೊಳ್ಳೆಗಳ ಕಾಟ ಮಿತಿ ಮೀರಿದ್ದು ಫಾಗಿಂಗ್‌ ಮಾಡುವಲ್ಲಿ ಸ್ಥಳೀಯ ಆಡಳಿತ ಗಮನಹರಿಸುತ್ತಿಲ್ಲ’ ಎಂದು ಕಾರ್ಮಿಕ ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT