ಕವಿತಾಳ: ‘ಹೈದರಾಬಾದ್– ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ವಶಪಡಿಸಿಕೊಂಡ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಮತ್ತು ಈಗಾಗಲೇ ಬಿತ್ತನೆ ಮಾಡಿದ ತೊಗರಿ ಮತ್ತಿತರ ಫಸಲು ಪಡೆದ ನಂತರ ಕಾಮಗಾರಿ ಆರಂಭಿಸಬೇಕು’ ಎಂದು ರೈತರು ಆಗ್ರಹಿಸಿದರು.
ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ಮಂಗಳವಾರ ಸಭೆ ನಡೆಸಿದ ಭೂ ಸಂತ್ರಸ್ತ ರೈತರು ಹೆಚ್ಚಿನ ಪರಿಹಾರ ಪಡೆಯುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಬಸವರಾಜ ಬುಂಕಲದೊಡ್ಡಿ ಮಾತನಾಡಿ, ‘ಪಾಮನಕಲ್ಲೂರು ಭಾಗದಲ್ಲಿ ಒಂದು ಎಕರೆ ಜಮೀನಿಗೆ ಕೇವಲ ₹80 ಸಾವಿರ ಪರಿಹಾರ ಹಣ ನೀಡಿದ್ದಾರೆ. ಕೆಲವು ರೈತರ ಜಮೀನುಗಳಲ್ಲಿ ಹೆದ್ದಾರಿ ಹಾಯ್ದು ಹೋಗುವ ಕುರಿತು ಗುರುತಿಸಿದ್ದು ಅವರಿಗೆ ಇದುವರೆಗೂ ಪರಿಹಾರ ಹಣ ನೀಡಿಲ್ಲ. ಒಂದೊಮ್ಮೆ ಕಾಮಗಾರಿ ಆರಂಭಕ್ಕೆ ಅನುವು ಮಾಡಿಕೊಟ್ಟರೆ ಪರಿಹಾರ ಮೊತ್ತಕ್ಕಾಗಿ ರೈತರು ಕೋರ್ಟ್, ಕಚೇರಿ ಅಲೆಯುವಂತಾಗುತ್ತದೆ. ಹೀಗಾಗಿ ಕಾಮಗಾರಿಗೆ ತಡೆಯೊಡ್ಡಿ ಪರಿಹಾರಕ್ಕೆ ಬೇಡಿಕೆ ಇಡುವ ಕುರಿತು ಆಲೋಚಿಸಲಾಗಿದೆ. ಈ ಬಗ್ಗೆ ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಹೋರಾಟ ನಡೆಸುವ ಕುರಿತು ಚರ್ಚಿಸಲಾಗಿದೆ’ ಎಂದು ಹೇಳಿದರು.
‘ರೈತರಿಂದ ಕಡಿಮೆ ಬೆಲೆಗೆ ಭೂಮಿ ಖರೀದಿಸಿದ ಕೆಲವರು ಕೈಗಾರಿಕಾ ಪ್ರದೇಶ ಎಂದು ಸರ್ಕಾರದಿಂದ ಹೆಚ್ಚಿನ ಪರಿಹಾರ ಪಡೆಯುತ್ತಿರುವ ಘಟನೆಗಳು ನಡೆಯುತ್ತಿವೆ. ಈ ರೀತಿ ರೈತರನ್ನು ವಂಚಿಸಲಾಗುತ್ತಿದ್ದು ಅಧಿಕಾರಿಗಳು ಗಮನ ಹರಿಸಬೇಕು’ ಎಂದು ರೈತ ಶರಣಪ್ಪ ಗೋನವಾರ ಆಗ್ರಹಿಸಿದರು.
ರೈತರಾದ ಆದನಗೌಡ ವಟಗಲ್, ಹನುಮರಡ್ಡೆಪ್ಪ, ಮಂಜುನಾಥ, ಹುಚ್ಚರೆಡ್ಡಿ, ಖಾಸೀಂ ಅಲಿ, ಸಿದ್ದಲಿಂಗಪ್ಪ ಸಾಹುಕಾರ, ಮಲ್ಲನಗೌಡ, ಶಿವಪ್ಪ ಕುರಿ, ಹುಚ್ಚುಸಾಬ, ಗಂಗಾಧರ, ಹುಚ್ಚರಡ್ಡಿ ಸೇರಿದಂತೆ ಅಮೀನಗಡ, ಕೊಟೇಕಲ್, ವಟಗಲ್ ಮತ್ತು ಆನಂದಗಲ್ ಗ್ರಾಮಗಳ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.