ಶನಿವಾರ, ಜನವರಿ 23, 2021
19 °C
ರಾಯಚೂರು ಗ್ರಾಮೀಣ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ವಸತಿನಿಲಯಗಳನ್ನು ಸರ್ಕಾರಿ ಕಟ್ಟಡದಲ್ಲಿ ನಡೆಸಲು ಮುಂದಾಗಬೇಕು.  ತಾಲ್ಲೂಕಿನ ವಿವಿಧೆಡೆ ನೆಡಲಾದ ಸಸಿಗಳಿಗೆ ಸಕಾಲಕ್ಕೆ ನೀರುಣಿಸಿ ಪೋಷಿಸಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಮಾಸ್ಕ್ ಹಾಗೂ ಸುರಕ್ಷತಾ ಕ್ರಮವಹಿಸಿ ಕಾಳಜಿವಹಿಸಬೇಕು ಎಂದು ಶಾಸಕ ದದ್ದಲ ಬಸನಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 8ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯ ಆರಂಭದಲ್ಲಿ ಪಂಚಾಯತ್‌ರಾಜ್‌ ಇಲಾಖೆ, ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರುಹಾಜರಿ ಇರುವುದನ್ನು ಗಮನಿಸಿದ ಶಾಸಕರು, ಹಲವಾರು ತಿಂಗಳ ಬಳಿಕ ಸಭೆ ನಡೆಯುತ್ತಿದ್ದು ಸಭೆಯ ಗಂಭೀರ್ಯತೆ ಇಲ್ಲ. ಪದೆಪದೇ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗುತ್ತಿದ್ದರೂ ಕೂಡ ಯಾವ ಅಧಿಖಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕೇವಲ ನೋಟಿಸ್ ನೀಡಿದರೆ ಸಾಲದು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಭೆ ನಡೆಸುವ ಉದ್ದೇಶವೇನು. ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕು ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಅವರಿಗೆ ಎಚ್ಚರಿಕೆ ನೀಡಿದರು.

ಅನುಪಾಲನ ವರದಿ ಕುರಿತು ಚರ್ಚೆ ನಡೆಯಿತು. ದಾನಿಗಳು ಶಾಲೆಗಳಿಗೆ ನೀಡಿದ ಜಾಗದ ಸಂಬಂಧ ದಾನಿಗಳ ಸಂಬಂಧಿಕರು ವಾಪಸ್ ಪಡೆಯಲು ತೀರ್ಮಾನಿಸಿದ ಘಟನೆಗಳು ನಡೆಯುತ್ತಿವೆ. ಇಲಾಖೆಯಿಂದ ದಾನಿಗಳು ನೀಡಿದ ಜಾಗವನ್ನು ಶಾಲೆಯ ಹೆಸರಿಗೆ ಮಾಡಿಕೊಂಡು ದಾಖಲೆ ಮಾಡಿಕೊಳ್ಳುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬುದು ಪ್ರಸ್ತಾಪವಾಯಿತು.

ಸಭೆಯಲ್ಲಿ ಮಾಡಿದ ಚರ್ಚೆಯ ವಿಷಯಗಳ ದಾಖಲೀಕರಣ ಸರಿಯಾಗಿ ಆಗುತ್ತಿಲ್ಲ ಎಂದು ಶಾಸಕರು ಅಸಮಧಾನಗೊಂಡರು. ಇದಕ್ಕೆ ತಾಲ್ಲೂಕು ಪಂಚಾಯಿತಿ ಇ.ಓ ರಾಮರೆಡ್ಡಿ ಸಭೆಯ ದಾಖಲಿಕರಣ ವಾಯ್ಸ್ ರೆಕಾರ್ಡ್ ಮಾಡಲಾಗಿದೆ ಎಂದಾಗ ಆಕ್ಷೇಪಿಸಿದ ಶಾಸಕ ಚರ್ಚಾ ವಿಷಯ, ದಾಖಲೆಗಳನ್ನು ದೃಶ್ಯ, ಆಡಿಯೋ, ಗಣಕಯಂತ್ರ, ಮುದ್ರಿತ ಸಾಮಾಗ್ರಿಗಳ ಮೂಲಕ ದಾಖಲಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಅರಣ್ಯ ಇಲಾಖೆಯ ಕುರಿತು ಅಧಿಕಾರಿ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಕಳೆದ ವರ್ಷ 13 ಸಾವಿರ ಸಸಿ ನೆಡಲಾಗಿದೆ. ರೈತರಿಗೆ ರಕ್ತ ಚಂದನ ಹಾಗೂ ಗಂಧದ ಗಿಡಗಳನ್ನು ನೀಡಲಾಗಿದೆ. ವಿವಿಧ ಯೋಜನೆಯಡಿ ರೈತರಿಗೆ ಪ್ರಮಾಣ ಪತ್ರ ನೀಡಲಾಗಿದೆ ಎಂದರು.

ಇದಕ್ಕೆ ಶಾಸಕ ಪ್ರತಿಕ್ರಿಯಿಸಿ, ಪ್ರತಿ ವರ್ಷ ಸಾವಿರಾರು ಸಸಿಗಳನ್ನು ನೆಡಲಾಗುತ್ತಿದೆ. ಈವರೆಗೆ ಲಕ್ಷಾಂತರ ಗಿಡ ಬೆಳೆಯಬೇಕಿತ್ತು. ಸಸಿಗಳನ್ನು ನೆಟ್ಟಿದರೆ ಸಾಲದು ಪೋಷಣೆ ಮಾಡಬೇಕು. ಗಿಡಗಳು ಕಾಗದ ಹೊರತಾಗಿ ಸ್ಥಳದಲ್ಲಿ ಗುರುತಿಸುವಂತಾಗಬೇಕು ಎಂದು ಎಚ್ಚರಿಕೆ ನೀಡಿದರು.

ಅಬಕಾರಿ ಇಲಾಖೆಯ ಪ್ರಗತಿಯ ಕುರಿತು ಅಧಿಕಾರಿಯಿಂದ ಮಾಹಿತಿ ಪಡೆದ ಶಾಸಕರು, ಅನಧಿಕೃತ ಮದ್ಯ ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಉದ್ಭವಿಸಿದೆ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಯ್ಯ ಸಾಹುಕಾರ, ತಹಸೀಲ್ದಾರ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಶಿವಜ್ಯೋತಿ, ಹಂಪನಗೌಡ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು