ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 'ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರ'

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ: ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಅಭಿಮತ
Last Updated 28 ಜೂನ್ 2022, 5:18 IST
ಅಕ್ಷರ ಗಾತ್ರ

ರಾಯಚೂರು: ‘ಕನ್ನಡ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಗ್ರಾಮೀಣ ಪ್ರದೇಶದ ಜನರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸಿ ನಾಡಿನ ಸಮಸ್ತ ಜನರ ಮನ ಗೆದ್ದವರು’ ಎಂದು ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ನಡೆದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಠ್ಯಪುಸ್ತಕದಲ್ಲಿನ ಅಂಶವನ್ನು ಸರಿಯಾಗಿ ಅಧ್ಯಯನ ಮಾಡಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉನ್ನತ ಸ್ಥಾನವನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಉಪನ್ಯಾಸಕ ಮಂಜುನಾಥ ಐಲಿ ಮಾತನಾಡಿ,‘ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಜತೆಗೆ ಜನ ಸಾಮಾನ್ಯರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಮರ–ಗಿಡಗಳನ್ನು ಬೆಳೆಸಿದ್ದಾರೆ. ವ್ಯವಸಾಯಕ್ಕೆ ಒತ್ತು ನೀಡಿದ್ದರು. ಅವರು ಕಟ್ಟಿದ ಕೆರೆ ಕಟ್ಟೆಗಳನ್ನು, ಕಟ್ಟಡಗಳನ್ನು ಉಳಿಸುವ ಕಾರ್ಯ ಆಗಬೇಕು. ವ್ಯವಸಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕು’ ಎಂದು ಹೇಳಿದರು.

ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದರು. ಎಲ್ಲ ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಲೆಗಳ ಬೆಳವಣಿಗೆ ಜತೆಗೆ ಎಲ್ಲ ಸಮುದಾಯದವರಿಗೆ ಅಧಿಕಾರ, ಶಿಕ್ಷಣ, ಸವಲತ್ತುಗಳನ್ನು ನಾಡಪ್ರಭು ಕೆಂಪೇಗೌಡರು ನೀಡಿದ್ದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ವಿ.ನಾಯ್ಕ್ ಮತ್ತಿತರರು ಇದ್ದರು.

‘ಕೊಡುಗೆ ತಿಳಿಸಿ’

ಸಿಂಧನೂರು: ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.

ಸಮಾರಂಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ,‘ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕೊಡುಗೆಯನ್ನು ಜಗತ್ತಿಗೆ ತಿಳಿಸಬೇಕು. ಕೆಂಪೇಗೌಡರು ಯುದ್ಧಪ್ರಿಯ ರಾಜನಾಗಿರಲಿಲ್ಲ. ಧರ್ಮ ಪ್ರಭುವಾಗಿದ್ದರು. ತಮ್ಮ ಸಾಮಾಜಿಕ ಸೇವೆಯಿಂದಲೇ ನಾಡಿನಾದ್ಯಂತ ಮನೆ ಮಾತಾದವರು’ ಎಂದು ಹೇಳಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ,‘ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರು ನೀಡಿದ ಕೊಡುಗೆಯನ್ನು ಈ ರಾಜ್ಯದ ಯಾವೊಬ್ಬ ಪ್ರಜೆಯೂ ಮರೆಯುವಂತಿಲ್ಲ. ಅಂದಿನ ಅವರ ಶ್ರಮ ಇಂದು ಹೆಮ್ಮರವಾಗಿ ಬೆಳೆದು ಬೆಂಗಳೂರು ವಿಶ್ವದ ಭೂಪಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ’ ಎಂದರು.

ತಹಶೀಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ಜೆಡಿಎಸ್ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಮುಖಂಡರಾದ ಶಿವಶಂಕರ ವಕೀಲ, ಅಶೋಕಗೌಡ ಗದ್ರಟಗಿ, ಸರಸ್ವತಿ ಪಾಟೀಲ, ಧರ್ಮನಗೌಡ ಮಲ್ಕಾಪುರ, ಚಂದ್ರಶೇಖರ ಮೈಲಾರ, ನಿರುಪಾದೆಪ್ಪ ನಾಗಲಾಪೂರ, ಅಜಯ್ ದಾಸರಿ, ಶಂಕ್ರಗೌಡ ಎಲೆಕೂಡ್ಲಿಗಿ, ಲಕ್ಷ್ಮಿ ಪತ್ತಾರ, ಸೈಯ್ಯದ್ ಆಸೀಫ್, ಚಂದ್ರಶೇಖರ ಹಾಗೂ ಮಹಾಂತೇಶ ಇದ್ದರು.

ಪುರಸಭೆ ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ

ಮುದಗಲ್: ಪುರಸಭೆ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.

ಬಿಜೆಪಿ ಮುಖಂಡ ಅಯ್ಯಪ್ಪಯ್ಯ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪುರಸಭೆ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಬಾಬು ಉಪ್ಪಾರ, ಮುಖ್ಯಾಧಿಕಾರಿ ಮರಿಲಿಂಗಪ್ಪ, ಸಮುದಾಯ ಸಂಘಟನೆ ಅಧಿಕಾರಿ ಚನ್ನಮ್ಮ ದಳವಾಯಿ ಮಠ, ವ್ಯವಸ್ಥಾಪಕ ಮಲ್ಲಿಕಾರ್ಜುನ, ಕುಪ್ಪಣ್ಣ, ಮಹೇಂದ್ರಕುಮಾರ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮುನ್ನ ಮುದಗಲ್, ಬಾಷಾ ಜಂಬಾಳಿ, ಸಂಜೀವಪ್ಪ, ನಾಗರಾಜ ತಳವಾರ ಹಾಗೂ ಕರಿಯಪ್ಪ ಯಾದವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT