ಗುರುವಾರ , ನವೆಂಬರ್ 21, 2019
23 °C

ಕೆಪಿಎಸ್‌ಸಿ ಪ್ರಕರಣ: ತನಿಖೆಗೆ ಆಗ್ರಹ

Published:
Updated:

ಲಿಂಗಸುಗೂರು: ಕೆಪಿಎಸ್‌ಸಿ ಮೂಲಕ ಸರ್ಕಾರಿ ಹುದ್ದೆಗೆ ನೇಮಕ ಮಾಡಿಸುವುದಾಗಿ ಹೇಳಿ ಜನರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಪಟ್ಟಣದ ಮೂವರು ಆರೋಪಿಗಳ ವಿರುದ್ಧ  2018 ಡಿಸೆಂಬರ್‌ 28ರಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಗೆ ಹೊಸ ತಿರುವು ಬಂದಿದ್ದು, ಆರೋಪಿಗಳ ಬಳಿ ದೊರೆತಿದ್ದ ಒಎಂಆರ್‌ ಉತ್ತರ ಪತ್ರಿಕೆಗಳು ಕೆಪಿಎಸ್‌ಸಿಗೆ ಸಂಬಂಧಿಸಿದ್ದಾಗಿವೆ ಎಂದು ಪರೀಕ್ಷಾ ನಿಯಂತ್ರಕಿ ವಿ.ವಿ. ಜೋತ್ಸ್ನಾ ಅವರು ಪೊಲೀಸರಿಗೆ ದೃಢಪಡಿಸಿದ್ದಾರೆ. 

2018ರ ಫೆಬ್ರುವರಿ 11ರಂದು ಎಸ್‌ಡಿಎ ಹಾಗೂ ಫೆಬ್ರುವರಿ 25 ಕ್ಕೆ ನಡೆದ ಎಫ್‌ಡಿಎ ಪರೀಕ್ಷೆಗಳ ಒಎಂಆರ್‌ ಉತ್ತರ ಪತ್ರಿಕೆಗಳನ್ನು ನೇರವಾಗಿ ಕೆಪಿಎಸ್‌ಸಿ ಕಚೇರಿ ಸಿಬ್ಬಂದಿ ಸಹಕಾರದಿಂದ ತಂದಿದ್ದೇವೆ ಎಂದು ಆರೋಪಿಗಳಾದ ದೇವಪ್ಪ ಹೊನ್ನಳ್ಳಿ, ಅಜಯಕುಮಾರ ಲಿಂಗಸುಗೂರು ಒಪ್ಪಿಕೊಂಡಿದ್ದರು. ಆದರೂ ಕೆಲ ರಾಜಕೀಯ ಪ್ರಭಾವಕ್ಕೆ ಹಿಂಜರಿದಿದ್ದ ಪೊಲೀಸ್‌ ಅಧಿಕಾರಿಗಳು, ಸಂಶಯಾಸ್ಪದ ಉತ್ತರ ಪತ್ರಿಕೆಗಳು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಗಳು ಎಸ್‌ಡಿಎ ಹುದ್ದೆಗೆ ₹ 5 ಲಕ್ಷ ಎಂದು ನಿಗದಿ ಮಾಡಿದ್ದರು. ಒಎಂಆರ್‌ ಭರ್ತಿ ಮಾಡುವುದಕ್ಕೆ ಮೊದಲ ಕಂತು ₹ 2.5ಲಕ್ಷ ನೀಡಬೇಕು. ಫಲಿತಾಂಶ ಬಂದ ನಂತರ ಇನ್ನುಳಿದ ₹ 2.5ಲಕ್ಷ ಹಣ ನೀಡಬೇಕು. ಎಫ್‌ಡಿಎ ಹುದ್ದೆಗೆ ₹ 7ಲಕ್ಷ ನಿಗದಿ ಮಾಡಿದ್ದ ಆರೋಪಿಗಳು ಒಎಂಆರ್‌ ಶೀಟ್‌ ತುಂಬುವಾಗ ₹ 4ಲಕ್ಷ, ಫಲಿತಾಂಶ ಬಂದ ನಂತರದಲ್ಲಿ ₹ 3 ಲಕ್ಷ ನೀಡುವುದಕ್ಕೆ ಮಾತುಕತೆ ಮಾಡುತ್ತಿದ್ದರು.

ಆರೋಪಿ ದೇವಪ್ಪ ನೀರಲಕೇರಿ ಸಂಪರ್ಕದಲ್ಲಿರುವ ಬೆಂಗಳೂರು ಮೂಲದ ತಿಮ್ಮೆಶಿ ಮೂಲಕ ಒಎಂಆರ್‌ ಉತ್ತರ ಪತ್ರಿಕೆಗಳನ್ನು ತಂದಿರುವ ವಿಷಯವನ್ನು ವಿಚಾರಣೆ ಹಂತದಲ್ಲಿ ಆರೋಪಿತರು ಒಪ್ಪಿಕೊಂಡಿದ್ದಾರೆ.

ಪುತ್ರಿಗೆ ಸರ್ಕಾರಿ ಹುದ್ದೆ ದೊರಕಿಸಲು ಲಿಂಗಸುಗೂರು ಪಟ್ಟಣದ ವ್ಯಕ್ತಿಯೊಬ್ಬರು ಆರೋಪಿಗಳಿಗೆ ಅರ್ಧದಷ್ಟು ಹಣ ನೀಡಿದ್ದರು. ಆನಂತರ ಹಣ ನೀಡಿದ ವಿಷಯ ಪುತ್ರಿಗೆ ತಿಳಿಯುತ್ತಿದ್ದಂತೆ, ಈ ಬಗ್ಗೆ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಇದರಿಂದಾಗಿ ಆರೋಪಿಗಳು ಸಿಕ್ಕಿಬಿದ್ದಿದ್ದರು.

ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)