ಬುಧವಾರ, ಆಗಸ್ಟ್ 21, 2019
27 °C

ಕೃಷ್ಣಾ, ಭೀಮಾ, ತುಂಗಾದಲ್ಲಿ ಪ್ರವಾಹ ಇಳಿಮುಖ

Published:
Updated:

ರಾಯಚೂರು: ಜಿಲ್ಲೆಯ ಗಡಿಭಾಗದಲ್ಲಿರುವ ನದಿತೀರ ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ್ದ ಕೃಷ್ಣಾ, ಭೀಮಾ ಹಾಗೂ ತುಂಗಾಭದ್ರಾ ನದಿಗಳಿಗೆ ಜಲಾಶಯಗಳಿಂದ ಹರಿದುಬಿಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.

ಮುನ್ನಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದ್ದ ನದಿತೀರದ 36 ಗ್ರಾಮಗಳ ಜನರು ಪರಿಹಾರ ಕೇಂದ್ರಗಳಿಂದ ಕೆಲವರು ಗ್ರಾಮಕ್ಕೆ ವಾಪಸಾಗುತ್ತಿದ್ದಾರೆ. ಸಂಪೂರ್ಣ ಸ್ಥಳಾಂತರಿಸಲಾಗಿದ್ದ 13 ಗ್ರಾಮಗಳ ಜನರು ಇನ್ನೂ ಪರಿಹಾರ ಕೇಂದ್ರದಲ್ಲಿದ್ದು, ಜಲಾವೃತವಾಗಿರುವ ಮನೆಯಿಂದ ನೀರು ಹಿಂದೆ ಸರಿಯುವುದನ್ನು ಕಾಯುತ್ತಿದ್ದಾರೆ.

ಕೃಷ್ಣಾನದಿದಲ್ಲಿ ಪ್ರವಾಹ ಯಥಾಸ್ಥಿತಿ ಇದ್ದು, ನಾರಾಯಣಪುರ ಜಲಾಶಯದ ಹೊರಹರಿವು 6.50 ಲಕ್ಷ ಕ್ಯೂಸೆಕ್‌ನಿಂದ 5.9 ಲಕ್ಷ ಕ್ಯೂಸೆಕ್‌ ಇಳಿಕೆಯಾಗಿದೆ. ಇದರಿಂದ ಗ್ರಾಮಗಳಿಗೆ ಮತ್ತು ಕೃಷಿ ಜಮೀನುಗಳಿಗೆ ನುಗ್ಗಿದ್ದ ನೀರು ಸ್ವಲ್ಪಮಟ್ಟಿಗೆ ಹಿಂದಕ್ಕೆ ಸರಿದಿದೆ. ರಾಯಚೂರು ಗಡಿಭಾಗದಲ್ಲಿ ಕೃಷ್ಣಾನದಿಯೊಂದಿಗೆ ಸಂಗಮಗೊಳ್ಳುವ ಭೀಮಾನದಿ ಪ್ರವಾಹವು ₹2.85 ಲಕ್ಷ ಕ್ಯೂಸೆಕ್‌ನಿಂದ 95 ಸಾವಿರ ಕ್ಯೂಸೆಕ್‌ಗೆ ಇಳಿಮುಖವಾಗಿದೆ.

ತುಂಗಭದ್ರಾ ಜಲಾಶಯದಲ್ಲಿ ಒಳಹರಿವು 2.34 ಲಕ್ಷ ಇದ್ದು, ಹೊರಹರಿವು 1.15 ಲಕ್ಷ ಕ್ಯೂಸೆಕ್‌ ಇದೆ. ಹೊರಹರಿವು ಪ್ರಮಾಣವನ್ನು 2.25 ಲಕ್ಷ ಕ್ಯೂಸೆಕ್‌ನಿಂದ ಕಡಿಮೆ ಮಾಡಿರುವುದರಿಂದ ನದಿತೀರದಲ್ಲಿ ಮಂಗಳವಾರ ಪ್ರವಾಹ ಏರಿಕೆಯಾಗಿಲ್ಲ. ಆದರೂ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳ ನದಿತೀರಗಳಲ್ಲಿ ಕಟ್ಟೆಚ್ಚರ ಮುಂದುವರಿಸಲಾಗಿದೆ.

ಮುನ್ನಚ್ಚರಿಕೆ ಕ್ರಮವಾಗಿ ಕೃಷ್ಣಾನದಿ ತೀರದ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲ್ಲೂಕುಗಳಲ್ಲಿ ಪರಿಹಾರ ಕೇಂದ್ರಗಳನ್ನು ಮುಂದುವರಿಸಲಾಗಿದೆ. ತುಂಗಭದ್ರಾ ನದಿತೀರದ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕು ಕೇಂದ್ರಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯುವುದಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ.

Post Comments (+)