ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 12ರಿಂದ 14ರವರೆಗೆ ಹಾಲುಮತ ಸಾಂಸ್ಕೃತಿಕ ವೈಭವ

Last Updated 6 ಜನವರಿ 2022, 14:08 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ದೇವದುರ್ಗದ ತಿಂಥಣಿ ಬ್ರಿಡ್ಜ್‌ ಪಕ್ಕದ ಕನಕ ಗುರುಪೀಠ– ಹಾಲುಮತ ಕೇಂದ್ರದಲ್ಲಿ ಕೋವಿಡ್‌ ನಿಯಮಾವಳಿ ‍ಪಾಲನೆಯೊಂದಿಗೆ ಜನವರಿ 12ರಿಂದ 14ರವರೆಗೆ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಾಲುಮತ ಕೇಂದ್ರದ ಮುಖ್ಯಸ್ಥ ಸಿದ್ದರಾಮಾನಂದಪುರಿ ಸ್ವಾಮಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 12ರಂದು ಬೆಳಿಗ್ಗೆ 8 ಗಂಟೆಗೆ ತಿಂಥಣಿ ಬ್ರಿಡ್ಜ್‌, ಶಾಂತಪುರ, ಬುಂಕಲದೊಡ್ಡಿ, ಹುಣಸಿಹೊಳೆಯಿಂದ ಭಕ್ತರು ಬೀರದೇವರ ಹೊಳೆ ಪೂಜೆ ಪಲ್ಲಕ್ಕಿ ಮೆರವಣಿಗೆ ನಡೆಸುವರು. ಮಹಾದ್ವಾರ ಉದ್ಘಾಟನೆ ಹಾಗೂ ಮಠದ ಆವರಣದಲ್ಲಿ ಕನಕದಾಸ, ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್, ಗಾಂಧೀಜಿ, ವಿವೇಕಾನಂದರ ಮೂರ್ತಿ ಉದ್ಘಾಟನೆ ಮಾಡಲಾಗುವುದು. ರಾಜ್ಯ ಕುರಿ ಮತ್ತು ಉಣ್ಣೆ ನೇಕಾರರ ಸಮಾವೇಶ ನಡೆಸಲಾಗುವುದು ಹಾಗೂ ಅದೇ ದಿನದಂದು ಸಂಜೆ 4ಕ್ಕೆ ಟಗರುಗಳ ಕಾಳಗ ನಡೆಯಲಿದೆ ಎಂದರು.

ಜನವರಿ 13ರಂದು ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಕೇಂದ್ರ ಸಚಿವ ಫೀದೋಸಿಂಗ್ ಖುಲಾಸ್ತೆ ಅವರ ನೇತೃತ್ವದಲ್ಲಿ ಕರ್ನಾಟಕ ಆದಿವಾಸಿ ಗೊಂಡ್ ಸಂಘ ಉದ್ಘಾಟನೆ ನಡೆಯಲಿದೆ. ಸಮಾಜ ಸೇವೆ, ಸಾಹಿತ್ಯ, ಕಲೆ ಹಾಗೂ ಇತರೆ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ₹50, ಸಾವಿರ ಮೊತ್ತದೊಂದಿಗೆ ಶ್ರೀಮಠದಿಂದ ಹಾಲುಮತ ಭಾಸ್ಕರ, ಕನಕ ರತ್ನ, ಸಿದ್ಧಶ್ರೀ ಪ್ರಶಸ್ತಿ ನೀಡಲಾಗುವುದು.

ಜನವರಿ 14ರಂದು ರಾಜ್ಯ ಕುರುಬ ಸಂಘಟನೆಗಳ ಸಹಯೋಗದಲ್ಲಿ ಯುವಜನ ಸಮಾವೇಶ ಆಯೋಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಾಟಕ, ಸಂಗೀತ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರನ್ನು ಆಹ್ವಾನ ಮಾಡಿದ್ದು, ಕೋವಿಡ್ ಇರುವ ಕಾರಣ ಬರುವುದು ವಿರಳವಾಗಿದೆ ಎಂದು ಹೇಳಿದರು.

ಹಾಲುಮತ ಎನ್ನುವ ಪದ ಹಲವು ಜಾತಿ ಸಮೂಹವನ್ನು ಪ್ರತಿನಿಧಿಸುವ ಪದ, ಇದು ಸಮಾಜವಲ್ಲ. ಶೈವ ಸಂಸ್ಕೃತಿ ಒಳಗೊಂಡ ಪದವಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೋವಿಡ್‌ನಿಂದ ಕುರಿಗಾರಿಕೆ ಹಾಗೂ ಉಣ್ಣೆ ಉದ್ಯಮಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು ಸರ್ಕಾರ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಕುರಿಗಳು ಸಾವನ್ನಪಿದರೆ ನೀಡುವ ಪರಿಹಾರ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಕುರುಬ ಸಮಾಜದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ರಾಜ್ಯ ನಿರ್ದೇಶಕ ಮಹಾದೇವಪ್ಪ ಮಿರ್ಜಾಪುರು, ಬಿ.ಜಿ.ಹುಲಿ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT