ಶನಿವಾರ, ಜನವರಿ 22, 2022
16 °C

ರಾಯಚೂರು: ವಿವಿಧ ಬೇಡಿಕೆ: ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಎಲ್ಲಾ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಾಕ್‌ಡೌನ್ ಪರಿಹಾರ ನೀಡಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಹಾಯಧನ ತಂತ್ರಾಂಶ ಕೂಡಲೇ ಆರಂಭಿಸಿ ಅರ್ಜಿಗಳನ್ನು ವಿಲೆವಾರಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಕಾರ್ಮಿಕರ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಇಲಾಖೆಯ ಅಧಿಕಾರಿಯ ಮೂಲಕ ಕಾರ್ಮಿಕ ಸಚಿವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ನೋಟು ಅಮಾನ್ಯೀಕರಣ ಬಳಿಕ ಜಾರಿ ಮಾಡಲಾದ ಸರಕು ಸೇವಾ ತೆರಿಗೆ ನೀತಿಯಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ನಂತರ ಕೋವಿಡ್‌ನಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ತೈಲ ಬೆಲೆಗಳ ಏರಿಕೆ ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಲಕ್ಷಾಂತರ ಉದ್ಯೋಗ ನಾಶವಾಗಿದೆ ಎಂದು ದೂರಿದರು.

ದೇಶದಾದ್ಯಂತ ಕಾನೂನುಬದ್ಧವಾಗಿ ರಚನೆಯಾಗಿರುವ ಕಲ್ಯಾಣ ಮಂಡಳಿ ಉಳಿಯಬೇಕು. ಕಟ್ಟಡ ಉದ್ಯಮವನ್ನು ರಕ್ಷಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾನೂನು 1996 ಹಾಗೂ ಸೆಸ್ ಕಾನೂನನ್ನು ಪುನಃ ಸ್ಥಾಪಿಸಬೇಕು. ಅಪಘಾತದಲ್ಲಿ ಸಾವನ್ನಪಿದ ಸಂತ್ರಸ್ಥ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತ ₹10 ಲಕ್ಷಕ್ಕೆ ಹೆಚ್ಚಿಸಬೇಕು. ತೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು. ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ವೈದ್ಯಕೀಯ ಅರ್ಜಿಗಳು ಇತ್ಯರ್ಥಪಡಿಸಬೇಕು. ರೇಷನ್ ಕಿಟ್, ಟೂಲ್‍ಕಿಟ್, ಸುರಕ್ಷಾ ಕಿಟ್, ಬೂಸ್ಟರ್ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಮಂಡಳಿಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಕಾರ್ಮಿಕ ಇಲಾಖೆ ನಿರ್ದೇಶನ ಉಲ್ಲಂಘನೆಯ ತನಿಖೆ ನಡೆಸಬೇಕು. ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಸಂಚಾಲಕ ಡಿ.ಎಸ್.ಶರಣಬಸವ, ಸದಸ್ಯೆ ಆಶಮ್ಮ, ಪಾರ್ವತಿ, ಲಕ್ಷ್ಮೀ, ಮುನಿಯಮ್ಮ, ಗೌರಮ್ಮ, ರಂಗಮ್ಮ ಅನ್ವರ್, ಮಾರೆಮ್ಮ, ತಿಮಲಮ್ಮ, ಬಸಮ್ಮ, ಪುಷ್ಪ, ಪದ್ಧಮ್ಮ, ಸುಲೋಚನಾ ಸಿಐಟಿಯು ಜಿಲ್ಲಾಧ್ಯಕ್ಷೆ ವರಲಕ್ಷ್ಮೀ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು