ಸೋಮವಾರ, ಜುಲೈ 4, 2022
21 °C

‘ಒಬ್ಬರೆ ದುಡಿದ್ರೆ ಸಾಕಾಗೊದಿಲ್ಲ’: ಕಟ್ಟಡ ಕಾರ್ಮಿಕರ ಬದುಕು–ಬವಣೆ

ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ’ನಾವು ಬಡವರು ಶಾಲೆಗೆ ಹೋಗಿಲ್ಲ ಅಕ್ಷರ ಓದಿಲ್ಲ. ಪತಿ ಕೂಡಾ ಕೂಲಿ ಕೆಲ್ಸಾ ಮಾಡ್ತಾರ. ಒಬ್ಬರ ಕೂಲಿಯಿಂದ ಸಂಸಾರ ನಡಿಸೋಕಾಗಲ್ಲ. ಆತನ ಜೊತಿಗಿ ನಾನು ಮೇಸನ್ ಕೆಲ್ಸ ಮಾಡಿ ಮಕ್ಕಳಿಗೆ ಓದಾಕ ಹಚ್ಚಿವಿ. ಸಂಸಾರದ ಬಂಡಿ ತಳ್ಳಿಕೊಂಡು ಹೋಗಾಕತೀವಿ’

ಇದು ಸಿಂಧನೂರು ನಗರದ ಸುಕಾಲಪೇಟೆ ನಿವಾಸಿ ಕಟ್ಟಡ ಕಾರ್ಮಿಕ ಮಹಿಳೆ ಲಕ್ಷ್ಮಿ ಮುದುಕಪ್ಪ ಅವರ ಬದುಕಿನ ಭವಣೆಯ ಮಾತುಗಳು.

ಕೂಲಿ ಕೆಲಸದಿಂದ ಉಪಜೀವನ ಸಾಗಿಸಿಕೊಂಡು ಇಬ್ಬರು ಹೆಣ್ಣು ಮಕ್ಕಳಿಗೆ ನೆರವಾಗುತ್ತಿದ್ದಾರೆ. 20 ವರ್ಷಗಳಿಂದಲೂ ಕಟ್ಟಡ ನಿರ್ಮಾಣ ಕೆಲಸವನ್ನೆ ಬದುಕಿಗೆ ಆಧಾರ ಮಾಡಿಕೊಂಡಿದ್ದಾರೆ. ಕೂಲಿ ಹಣವನ್ನೆ ಜಮಾಯಿಸಿಕೊಂಡು ಮಗಳ ಮದುವೆ ಮಾಡಿದ್ದಾರೆ. ಇನ್ನೊಬ್ಬ ಮಗಳ ಮದುವೆ ಜವಾಬ್ದಾರಿ ಇದೆ. ಸಾಧ್ಯವಾದಷ್ಟು ದುಡಿದು ಹಣ ಕೂಡಿಸುತ್ತಿದ್ದೇವೆ ಎಂದರು.

ಸರ್ಕಾರದವರು ಲಾಕ್‍ಡೌನ್ ಅಂತ ಮಾಡ್ಯಾರ. ಆದ್ರೂ ಪ್ರತಿನಿತ್ಯ ಮೇಸನ್ ಕೆಲಸಕ್ಕೆ ಹೋಗಿ ಕೂಲಿ ಮಾಡುತ್ತಿದ್ದೇನೆ. ಒಂದು ವೇಳೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಕುಂತಿದ್ದರೆ ಉಪವಾಸ ಇರಬೇಕಾಗುತ್ತಿತ್ತು ಎಂದು ಸಂಕಷ್ಟ ಹಂಚಿಕೊಂಡರು.

ಸರ್ಕಾರದವರು ನಮ್ಮಂತ ಕೆಲ್ಸ ಮಾಡೋರಿಗೆ ತಿಂಗಳಿಗೆ ₹2 ಸಾವಿರ ಬ್ಯಾಂಕಿಗೆ ಹಾಕತೀವಿ ಅಂತ ಹೇಳಿದ್ದರು. ಅದನ್ನು ಇನ್ನು ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿನಿತ್ಯ ಇಟ್ಟಿಗೆ ಹೋರುತ್ತೇನೆ, ಉಸುಕು ಜರಡಿ ಹಿಡಿಯುತ್ತೇನೆ, ಉಸುಕು-ಸಿಮೆಂಟ್ ಕಲಿಸಿ ಕೊಡುತ್ತೇನೆ. ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕೆಲ್ಸ ಮಾಡಿದರೆ ₹200 ಕೂಲಿ ಕೊಡುತ್ತಾರೆ. ಅದರಲ್ಲಿ ₹50 ರಿಂದ ₹80 ಅಡುಗೆಗೆ ಬಳಸಿ ಉಳಿದಿದ್ದು ಜಮಾಯಿಸಿ, ವಾರದ ಗುಂಪಿನ ಸಾಲ ಕಟ್ಟುತೀನಿ. ಇನ್ನೂ ನನ್ನ ಮೈಯಾಗ ಶಕ್ತಿ ಐತಿ. ದುಡಿದು ತಿಂದು ಸಂಸಾರ ನಡೆಸುತ್ತೇನೆ’ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು