ಭಾನುವಾರ, ಜುಲೈ 3, 2022
27 °C

‘ಹೊಟ್ಟಿ ತುಂಬ್ಸಿಕೊಳ್ಳಾಕ್‌ ಕೆಲ್ಸಾ ಮಾಡ್ಲೆಬೇಕು’

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಖಾಲಿ ಕುಂತ್ರ ಏನು ನಡೆಯೋದಿಲ್ಲ. ಹೊಟ್ಟಿ ತುಂಬ್ಸಿಕೊಳ್ಳಾಕ್‌ ಏನಾದ್ರೂ ಕೆಲ್ಸ ಮಾಡ್ಲೇಬೇಕು. ನಾಲ್ಕು ಮಂದಿ ಗಂಡ್ಸ್‌ ಮಕ್ಳು ಅದಾರ್ರಿ. ಕೆಲ್ಸಾ ಯಾಕ್‌ ಮಾಡ್ತಿ ಮನ್ಯಾಗ ಇರು ಅಂಥಾರ. ಆದ್ರೂ.. ಖಾಲಿ ಕುಂತ ಏನೋ ಮಾಡೋದು ಅಂಥ, ಈ ಕೆಲ್ಸಾ ಮಾಡ್ಲಾಕತೀನಿ’

ಲಾಕ್‌ಡೌನ್‌ ದಿನಗಳಲ್ಲಿಯೂ ಪಾದರಕ್ಷೆಗಳನ್ನು ದುರಸ್ತಿ, ಪಾಲಿಶ್‌ ಮಾಡುತ್ತಲೇ ತನ್ನ ಸಮಯ ಕಳೆಯುತ್ತಿರುವ ಶ್ರಮಜೀವಿ ರಾಮಚಂದ್ರ ಅವರು ಹೇಳಿದ ಮಾತುಗಳಿವು.

ನಗರದ ಆಶಾಪುರ ರಸ್ತೆ ಮಟಮಾರಿ ಕಾಂಪ್ಲೆಕ್ಸ್‌ ಹತ್ತಿರ ಸಣ್ಣ ಮರದ ಕೆಳಗೆ ಪೆಟ್ಟಿಗೆಯೊಂದನ್ನು ಇಟ್ಟುಕೊಂಡು ಇಳಿವಯಸ್ಸಿನಲ್ಲೂ ಕಾಯಕನಿಷ್ಠೆ ಮೆರೆಯುತ್ತಿರುವುದು, ಕಾರ್ಮಿಕರ ದಿನಾಚರಣೆ ಮುನ್ನಾದಿನ ಗುರುವಾರ ಗಮನ ಸೆಳೆಯಿತು.

ಸಮಾಜದ ಸೇವೆಯಲ್ಲಿ ಮುಳುಗಿದ ಶ್ರಮಜೀವಿ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು. ಪಾದರಕ್ಷೆ ದುರಸ್ತಿ ಕೆಲಸ ಆರಂಭಿಸಿದ್ದು 2002 ರಲ್ಲಿ. ನಿಜಲಿಂಗಪ್ಪ ಕಾಲೋನಿಯ ಎಟಿಎಂ ಸರ್ಕಲ್‌ನಲ್ಲಿ ಸಣ್ಣ ಅಂಗಡಿ ಹಾಕಿಕೊಂಡು 18 ವರ್ಷ ಸವೆಸಿದ್ದಾರೆ. ಮನೆಯಿಂದ ಹೋಗಿ ಬರುವುದು ಕಷ್ಟವಾಗಿ ಎರಡು ತಿಂಗಳುಗಳಿಂದ ಆಶಾಪುರ ರಸ್ತೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ.

65 ವರ್ಷದ ರಾಮಚಂದ್ರ ಅವರು, ಕುಟುಂಬ ಸಮೇತ ಮುಂಬೈಗೆ ವಲಸೆ ಹೋಗಿದ್ದರು. ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದಾಗಲೇ ಬಣ್ಣದ ಒಡನಾಟ ಬೆಳೆಯಿತು. ಇದನ್ನು ಆಧಾರವಾಗಿಟ್ಟುಕೊಂಡು, ಅಲ್ಲೇ ಪಾದರಕ್ಷೆ ಪಾಲಿಶ್‌ ಶುರು ಮಾಡಿ ಉಪಜೀವನ ಸಾಗಿಸಿದರು. ರಾಯಚೂರು ನಗರಸಭೆಯಲ್ಲಿ ಕಸ ವಿಲೇವಾರಿ ಕೆಲಸ ಕೊಡಿಸುವ ಭರವಸೆ ಸಿಕ್ಕಿದ್ದರಿಂದ ವಾಪಸಾದರು. ಮೂರು ತಿಂಗಳಾದರೂ ವೇತನ ಕೊಡದೆ ಇದ್ದಾಗ, ಬೇಸತ್ತು. ಪಾದರಕ್ಷೆ ದುರಸ್ತಿ ಕಾಯಕವನ್ನು ಮರು ಆಯ್ಕೆ ಮಾಡಿಕೊಂಡಿದ್ದಾರೆ.

ಪತ್ನಿ ತೀರಿಹೋಗಿ ನಾಲ್ಕು ವರ್ಷಗಳಾಗಿದೆ. ನಾಲ್ಕು ಜನ ಗಂಡು ಮಕ್ಕಳಲ್ಲಿ ಇಬ್ಬರು ಆಟೊ ಚಾಲಕರು, ಒಬ್ಬರು ಕಟ್ಟಡ ಕಾರ್ಮಿಕ ಹಾಗೂ ಇನ್ನೊಬ್ಬರು ಶಿಕ್ಷಣ ಸಂಸ್ಥೆಯಲ್ಲಿ ಕಾವಲುಗಾರ.

‘ಬಡವರು ಎಲ್ಲಿಗೆ ಹೋಗಬೇಕು. ಕಠಿಣ ಪರಿಸ್ಥಿತಿಯೊಳಗ ಏನಾದ್ರೂ ಕೆಲ್ಸಾ ಮಾಡ್ಕೊಂಡು ಹೊಟ್ಟಿ ತುಂಬಿಸಿಕೊಳ್ಳಬೇಕು. ರಾಯಚೂರಿನಲ್ಲೇ ಹುಟ್ಟಿ ಬೆಳೆದಿದ್ದೇನೆ. ಇಲ್ಲೇ ರಾಗಿಮಾನಗುಡ್ಡದಲ್ಲಿ ಮನೆ ಐತಿ. ರೊಕ್ಕ ಎಷ್ಟಾದ್ರೂ ಸಿಗಲಿ, ಚಿಂತೆಯಿಲ್ಲ. ಕೆಲ್ಸಾ ಮಾತ್ರ ನಿಲ್ಸೊದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು