ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಕಾಂಗ್ರೆಸ್ ಟಿಕೆಟ್ ಯಾರಿಗೆ?

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಮಾತುಕತೆ
Last Updated 28 ನವೆಂಬರ್ 2022, 7:30 IST
ಅಕ್ಷರ ಗಾತ್ರ

ಲಿಂಗಸುಗೂರು: ಕಲ್ಯಾಣ ಕರ್ನಾಟಕ ಪ್ರದೇಶದ ಪರಿಶಿಷ್ಟ ಜಾತಿಗೆ ಮೀಸಲಿರುವ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಲಿಂಗಸುಗೂರು ವಿಧಾನಸಭಾ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರದ ಟಿಕೆಟ್‍ ಆಕಾಂಕ್ಷಿಗಳು ಬಹುತೇಕರು ‘ಬಿ’ ಫಾರ್ಮ್‌ ತಮಗೇ ಖಚಿತ ಎಂದುಕೊಂಡು ಸ್ಥಳೀಯ ಶಾಸಕ, ಎಡಗೈ, ಬಲಗೈ ಹೆಸರಲ್ಲಿ ಕಾಂಗ್ರೆಸ್‍ ಟಿಕೆಟ್‍ ಪಡೆಯಲು ಬಣದ ರಾಜಕೀಯ ತಾರ್ಕಿಕ ಹಂತಕ್ಕ ತಲುಪಿದೆ.

ಶಾಸಕ ಡಿ.ಎಸ್‍ ಹೂಲಗೇರಿ, ಬಂಜಾರ ಸಮಾಜದ ಚಂದ್ರಶೇಖರ ನಾಯ್ಕ, ಎಡಗೈ ಬಣದಿಂದ ಎಚ್‍.ಬಿ. ಮುರಾರಿ, ಪಾಮಯ್ಯ ಮುರಾರಿ, ಹನುಮಂತಪ್ಪ ಆಲ್ಕೋಡ್‍, ಕಿರಿಲಿಂಗಪ್ಪ ಕವಿತಾಳ, ಅಂಜನಪ್ಪ ರಾಯಚೂರು, ಬಲಗೈ ಬಣದ ಆರ್.ರುದ್ರಯ್ಯ, ರಾಜಶೇಖರ ರಾಮಸ್ವಾಮಿ ಟಿಕೆಟ್‍ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

ಶಾಸಕ ಡಿ.ಎಸ್‍. ಹೂಲಗೇರಿಗೆ ಟಿಕೆಟ್‍ ಸಿಗುವುದಿಲ್ಲ. ಹೈಕಮಾಂಡ್‍ ಪರ್ಯಾಯ ಅಭ್ಯರ್ಥಿ ಗುರುತಿಸಿದೆ ಎಂಬುದನ್ನು ಅದೇ ಪಕ್ಷದ ಮುಖಂಡರು ಬಹಿರಂಗವಾಗಿ ಚರ್ಚಿಸುತ್ತಿದ್ದಾರೆ. ನಿವೃತ್ತ ಎಂಜಿನಿಯರ್ ಆರ್.ರುದ್ರಯ್ಯ ಬೆಂಬಲಿಗರು ತಮಗೆ ಟಿಕೆಟ್‍ ಖಚಿತವಾಗಿದೆ ಎನ್ನುತ್ತಿದ್ದರೆ, ಎಚ್‍.ಬಿ. ಮುರಾರಿ ಭಾರತ ಜೋಡೊ ಹೆಸರಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ.

ಈ ಮಧ್ಯೆ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮಕ್ಷಮದಲ್ಲಿ ತೀವ್ರ ಪೈಪೋಟಿ ಹಂತದಲ್ಲಿರುವ ಅಭ್ಯರ್ಥಿಗಳಾದ ಶಾಸಕ ಡಿ.ಎಸ್‍. ಹೂಲಗೇರಿ, ಆರ್.ರುದ್ರಯ್ಯ ಕಾಂಗ್ರೆಸ್‍ ಪಕ್ಷದ ಹಿರಿಯ ಮುಖಂಡ ಅಮರಗುಂಡಪ್ಪ ಮೇಟಿ ಜೊತೆ ಮಾತುಕತೆ ನಡೆಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ.

ಆಕಾಂಕ್ಷಿ ಅಭ್ಯರ್ಥಿ ಆರ್‌.ರುದ್ರಯ್ಯ ಅವರನ್ನು ಸಂಪರ್ಕಿಸಿದಾಗ, ‘ಕೆಪಿಸಿಸಿ ಅಧ್ಯಕ್ಷರ ಆಹ್ವಾನ ಮೇರೆಗೆ ನಾನು ಮತ್ತು ಹೂಲಗೇರಿ ಹೋಗಿದ್ದು ನಿಜ. ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. ಬಣ ಕಟ್ಟಿಕೊಂಡು ರಾಜಕೀಯ ಮಾಡುವುದರಿಂದ ಪಕ್ಷಕ್ಕೆ ನಷ್ಟ ಆಗಲಿದೆ. ಟಿಕೆಟ್‍ ನೀಡುವಾಗ ಸಾಮಾಜಿಕ ನ್ಯಾಯದಡಿ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಶಾಸಕ ಡಿ.ಎಸ್‍ ಹೂಲಗೇರಿ ಮಾತನಾಡಿ, ‘ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಆರ್.ರುದ್ರಯ್ಯ ಮತ್ತು ನಾನು ಹೋಗಿದ್ದು ನಿಜ. ಬಣ ರಾಜಕೀಯ ಮಾಡುವುದು ಶೋಭೆಯಲ್ಲ. ಡಿ.ಎಸ್‍.ಹೂಲಗೇರಿ ಅವರು ಶಾಸಕರಾಗಿದ್ದು, ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಾಸಕರ ಟಿಕೆಟ್‍ ಕಟ್‍ ಮಾಡುವುದು ಕಷ್ಟದ ಕೆಲಸ. ಒಂದಾಗಿ ಕೆಲಸ ಮಾಡಿ ಪಕ್ಷ ಗೆಲ್ಲಿಸಿ’ ಎಂದು ಬುದ್ಧಿವಾದ ಹೇಳಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT