ಲಿಂಗಸುಗೂರು: ಪೌರಾಡಳಿತ ಸಚಿವಾಲಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಿಸಿಯಾಗಿದೆ. ಸ್ಥಳೀಯ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದೃಷ್ಟ ಯಾವ ಪಕ್ಷಕ್ಕೆ ಒಲೆಯುವುದು ಎಂಬುದು ನಿಗೂಢವಾಗಿದೆ.
ಪುರಸಭೆ ಅಧ್ಯಕ್ಷ ಸಾಮಾನ್ಯ ಮತ್ತು ಉಪಾಧ್ಯಕ್ಷ ಹಿಂದುಳಿದ ವರ್ಗ (ಅ)ಕ್ಕೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಆಗಿದ್ದರಿಂದ ಆಕಾಂಕ್ಷಿಗಳ ಪಟ್ಟಿ ಏರಿಕೆಯಾಗುತ್ತಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರೇ ಆಡಳಿತ ಚುಕ್ಕಾಣಿ ಹಿಡಿಯುವುದು ಸ್ಪಷ್ಟವಾಗಿದೆ. ಮುಖಂಡರ ಒಳ ಒಪ್ಪಂದ ನಡೆದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಬಹುದಾಗಿದೆ.
23 ವಾರ್ಡ್‍ಗಳ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 02, ಜೆಡಿಎಸ್ 04, ಪಕ್ಷೇತರರು 04 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಸ್ಪಷ್ಟ ಬಹುಮತ ಹೊಂದಿದ್ದ ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ದೂರಿನ ಮೇಲೆ ನಾಲ್ವರು ಸದಸ್ಯರು ಅನರ್ಹಗೊಂಡಿದ್ದು ಸಂಖ್ಯಾಬಲ 9ಕ್ಕೆ ಕುಸಿದಿದೆ.
ಬಿಜೆಪಿ ಇಬ್ಬರ ಸದಸ್ಯ ಬಲ ಹೊಂದಿದ್ದರೂ ಜೆಡಿಎಸ್ 03 ಹಾಗೂ ಒಬ್ಬ ಪಕ್ಷೇತರರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರಿಂದ ಸಂಖ್ಯಾಬಲ 06ಕ್ಕೆ ಏರಿಕೆ ಆಗಿದೆ. ಕಾಂಗ್ರೆಸ್ ಪಕ್ಷದ ಬಯ್ಯಾಪುರ, ಹೂಲಗೇರಿ ಅವರ ವ್ಯಕ್ತಿಗತ ಪ್ರತಿಷ್ಠೆ ಬಿಜೆಪಿಗೆ ಲಾಭ ತರಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಬಯ್ಯಾಪುರ ಅವರ ನಿಲುವು ಕಾಂಗ್ರೆಸ್‍ಗೆ ವರವೋ? ಶಾಪವೋ? ಎಂಬ ಜಿಜ್ಞಾಸೆ ಮೂಡಿಸಿದೆ.
ಕಾಂಗ್ರೆಸ್ 9 ಸದಸ್ಯರ ಜೊತೆ ಪಕ್ಷೇತರ (02), ಜೆಡಿಎಸ್ (01) ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದರಿಂದ ಸ್ಪಷ್ಟ ಬಹುಮತ ಹೊಂದಿದೆ. ವಿಧಾನ ಪರಿಷತ್ ಮತ್ತು ಲೋಕಸಭಾ ಸದಸ್ಯರ ಮತಬಲದ ಮೇಲೆಯೂ ನಂಬಿಕೆ ಇಟ್ಟಿದ್ದು, 14 ಮತದ ಸಂಖ್ಯಾಬಲದಿಂದ ಸುಲಭವಾಗಿ ಗೆಲುವು ಸಾಧ್ಯತೆ ಲೆಕ್ಕಾಚಾರ ನಡೆದರೂ ವಿಶ್ವಾಸ ಇಲ್ಲದಂತಾಗಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ಮೇಟಿ ಬಿಜೆಪಿ ಸೇರ್ಪಡೆ ಆಗಿದ್ದರಿಂದ ಅವರ ಪುತ್ರ ಯಾವ ಪಕ್ಷದತ್ತ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬಯ್ಯಾಪುರ ಬಣದಲ್ಲಿ ಭೂಪನಗೌಡ ಗುರುತಿಸಿಕೊಂಡಿದ್ದು, ಅವರ ಅಳಿಯನ ನಿಲುವು ನಿಗೂಢವಾಗಿದೆ. ಬೆಂಬಲಿಸದೆ ಹೋದರೂ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂಬುದು ಚರ್ಚಿತ ಸಂಗತಿ.
ಪಕ್ಷೇತರ ಸದಸ್ಯ ದೊಡ್ಡನಗೌಡ ಪಾಟೀಲ, ಕಾಂಗ್ರೆಸ್ ಸದಸ್ಯರಾದ ಬಾಬುರೆಡ್ಡಿ ಮುನ್ನೂರು, ರೌಫ್ ಗ್ಯಾರಂಟಿ, ಎಂ.ಡಿ.ರಫಿ ಹಾಗೂ ಬಿಜೆಪಿ ಪಕ್ಷದಿಂದ ಗಿರಿಜಮ್ಮ ವಿರೂಪಾಕ್ಷಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಸಾಮಾನ್ಯ ಮೀಸಲು ಬಂದಿದ್ದು, ವೀರಶೈವ ಲಿಂಗಾಯತರಿಗೆ ಅವಕಾಶ ಸಿಗಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ,‘ನಮ್ಮ ಪಕ್ಷಕ್ಕೆ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತವಿದೆ. ಈಗಾಗಲೇ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಸೇರಿದಂತೆ ಪಕ್ಷದ ಹಿರಿಯರ ಜೊತೆ ಅಭ್ಯರ್ಥಿ ಆಯ್ಕೆ ಚರ್ಚೆಗಳು ನಡೆದಿವೆ. ದಿನಾಂಕ ನಿಗದಿ ನಂತರದಲ್ಲಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ’ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು ಮಾತನಾಡಿ, ‘ನಮ್ಮಲ್ಲಿ ಸ್ಪಷ್ಟ ಬಹುಮತಕ್ಕೆ ಬೇಕಾಗಬಹುದಾದ ಸಂಖ್ಯಾಬಲ ಇಲ್ಲ. ಆದರೆ, ಇತರೆ ಪಕ್ಷದ ಸದಸ್ಯರು ಪರೋಕ್ಷವಾಗಿ ಬೆಂಬಲಿಸುವ ಸಾಧ್ಯತೆಗಳಿವೆ. ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲಿದ್ದೇವೆ. ಶಾಸಕ ಮಾನಪ್ಪ ವಜ್ಜಲರ ತೀರ್ಮಾನವೇ ಅಂತಿಮ’ ಎಂದರು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಮಾತನಾಡಿ,‘ಮೀಸಲಾತಿ ಘೋಷಣೆ ಆಗಿದೆ. ನಮ್ಮ ಪಕ್ಷದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ವ ಸದಸ್ಯರ ಅಭಿಪ್ರಾಯ ಪಡೆದು, ನಂತರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳ ಆಯ್ಕೆ ನಡೆಸುತ್ತೇವೆ. ಸದಸ್ಯರ ನಿರ್ಣಯ ಅಂತಿಮವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.