ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ ಕುರಿತು ಮುನ್ನೆಚ್ಚರಿಕೆ ವಹಿಸಿ: ಶಾಸಕ ಡಿ.ಎಸ್‍.ಹೂಲಗೇರಿ

Last Updated 9 ಮಾರ್ಚ್ 2022, 6:23 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಬೇಸಿಗೆ ಆರಂಭಗೊಂಡಿದ್ದು, ಕುಡಿವ ನೀರಿನ ಕೆರೆ ಭರ್ತಿ ಮಾಡಿಕೊಳ್ಳಿ. ಪುರಸಭೆ ವ್ಯಾಪ್ತಿ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಈಗಲೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಶಾಸಕ ಡಿ.ಎಸ್‍.ಹೂಲಗೇರಿ ಎಚ್ಚರಿಕೆ ನೀಡಿದರು.

ಸೋಮವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆ ಈ ಬಾರಿ ಆಗಬಾರದು. ಸರ್ವ ಸದಸ್ಯರು, ಸಿಬ್ಬಂದಿ ಪರಸ್ಪರ ಸಹಕಾರ ಮೂಲಕ ನಾಗರಿಕರ ಹಿತರಕ್ಷಣೆಗೆ ಮುಂದಾಗಬೇಕು. ಅದೇ ಸಮಸ್ಯೆ ಮರುಕಳಿಸಿದರೆ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆ ಕಾಮಗಾರಿಗಳಿಗೆ ಅನುಮೋದನೆ, ಕುಡಿವ ನೀರು ಪೂರೈಕೆ ಪೈಪಲೈನ್‍, ಪಂಪ್‍ಗಳ ದುರಸ್ತಿ, ಕಿರು ನೀರು ಸರಬರಾಜು ವ್ಯವಸ್ಥೆ, ಕುಡಿವ ನೀರಿನ ಕೆರೆಗೆ ನೀರು ಭರ್ತಿ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಅನುಮೋದನೆ ನೀಡಲು ಅಧ್ಯಕ್ಷೆ ಸುನಿತಾ ಕೆಂಭಾವಿ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಪುರಸಭೆ ವ್ಯಾಪ್ತಿಯ ಕರಡಕಲ್ಲ, ಕಸಬಾ ಲಿಂಗಸುಗೂರು, ಲಿಂಗ ಸುಗೂರು, ಹುಲಿಗುಡ್ಡಗಳ ಹೈಟೆಕ್‍ ಶೌಚಾಲಯಗಳು, ಚರಂಡಿ ಮತ್ತು ಅಲ್ಲಲ್ಲಿ ಘನತ್ಯಾಜ್ಯ ಹಾಕುವ ಹಾಗೂ ಮೂತ್ರ ವಿಸರ್ಜನೆ ಸ್ಥಳಗಳ ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತಿವೆ. ಬ್ಲಿಚಿಂಗ್‍ ಪೌಡರ್ ಖರೀದಿ ಮತ್ತು ಬಳಕೆ ಬಗ್ಗೆ ಸಭೆ ಗಮನಕ್ಕೆ ತರುವಂತೆ ಸದಸ್ಯ ದೊಡ್ಡನಗೌಡ ಹೊಸಮನಿ ಮನವಿ ಮಾಡಿದರು.

ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಬಡಾವಣೆಗಳಲ್ಲಿ ನಿವೇಶನ ಮಂಜೂರು ಕೋರಿ ಅರ್ಜಿಗಳು ಬಂದಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಸಭೆ ಗಮನಕ್ಕೆ ತಂದರು. ಉಪಾಧ್ಯಕ್ಷ ಎಂ.ಡಿ ರಫಿ, ಸದಸ್ಯ ಮುದಕಪ್ಪ ನಾಯಕ ಮುಂದಿನ ಸಭೆಯಲ್ಲಿ ಸರ್ಕಾರದ ನಿರ್ದೇಶನಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳೋಣ ಎಂದು ಹೇಳಿದರು.

ವಾರದ ಸಂತೆ ಹರಾಜು ಮಾಡುವ ಮುಂಚೆ ಸಂತೆ ಬಜಾರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ಬಹುತೇಕ ವಾರ್ಡ್‍ಗಳಲ್ಲಿ ಚರಂಡಿ ಸ್ವಚ್ಛತೆ, ಘನತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಕುಡಿಯುವ ನೀರು ಪೂರೈಕೆಯಲ್ಲಿ ತಾರತಮ್ಯ ನೀತಿ, ಬೀದಿ ದೀಪಗಳ ನಿರ್ವಹಣೆ ಕುರಿತು ಗಮನ ಹರಿಸುವಂತೆ ಸದಸ್ಯರಾದ ರೌಫ ಗ್ಯಾರಂಟಿ, ಬಾಬುರೆಡ್ಡಿ ಮುನ್ನೂರು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ಉಪಾಧ್ಯಕ್ಷ ಎಂ.ಡಿ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT