ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಬಾ ಲಿಂಗಸುಗೂರು: ಐತಿಹಾಸಿಕ ಪರಂಪರೆಯ ಮಠಗಳ ತವರು

ನೂರು ತೆರೆದಬಾವಿ, ಲಿಂಗಗಳ ಕುರುಹುಗಳ ಊರು
ಅಕ್ಷರ ಗಾತ್ರ

ಲಿಂಗಸುಗೂರು: ದಾಸ ಸಾಹಿತ್ಯದ ತವರು ಎಂದು ಕರೆಯಲ್ಪಡುವ ಕಸಬಾ ಲಿಂಗಸುಗೂರು ನೂರಕ್ಕೂ ಹೆಚ್ಚು ತೆರೆದ ಕುಡಿಯುವ ನೀರಿನ ಬಾವಿಗಳು, ಗ್ರಾಮದೆಲ್ಲೆಡೆ ಲಿಂಗಗಳ ಕುರುಹುಗಳು, ವೈಭಯುತ ಮಠಗಳ ಐತಿಹಾಸಿಕ ಪರಂಪರೆಯ ನಿಗೂಢತೆಗಳ ತವರಾಗಿರುವುದು ಅಚ್ಚರಿಯ ಸಂಗತಿ.

ಕಲ್ಯಾಣ ಚಾಲುಕ್ಯರ ಆಡಳಿತದಲ್ಲಿ ಬೂದಗುಂಪಿ, ಕುಪ್ಪಿ, ಯಕ್ಸಟ್ಟಿ, ನಾಗೋಲಿ, ಅಂತರಗಂಗಿ, ಬೆಳಗುಂದಿ, ಮೂಕಾರತಿ ಗ್ರಾಮಗಳಿದ್ದವು. ಈ ಗ್ರಾಮಗಳನ್ನು ಸಿದ್ಧನಗೌಡ ಪೊಲೀಸ್‌ಪಾಟೀಲ್‍ ಆಡಳಿತದಲ್ಲಿ ಒಂದಾಗಿಸೊ ವಿಚಾರ ಬಂದಾಗ ಗೊಂಬಳಾಪುರದ ಗುರುಶಾಂತ ಶಿವಚಾರ್ಯರರು ಲಿಂಗಗಳ ಸಾಗರವೆ ಇಲ್ಲಿ ಅಡಗಿದೆ. ಒಂದಾಗಿಸಿ ಆಡಳಿತ ನಡೆಸು ಎಂದಾಗ ಲಿಂಗಶ್ರೀಗುರು ಎಂದು ಕರೆಯಲ್ಪಟ್ಟಿತು ಎಂಬುದು ವಾಡಿಕೆ.

ಲಿಂಗಸಾಗರ ಲಿಂಗಶ್ರೀಗುರು ಎಂಬುದು ಜನತೆ ಬಾಯಿಂದ ಬಾಯಿಗೆ ಲಿಂಗಸೂರು, ಲಿಂಗಸುಗೂರು ಎಂದು ಪರಿವರ್ತಿತಗೊಂಡಿದೆ. ಹೈದರಾಬಾದ್‌ ನಿಜಾಮಶಾಹಿ ಆಡಳಿತದಲ್ಲಿ ಬ್ರಿಟಿಷರ ವಸಹಾತುಶಾಹಿ ಛಾವಣಿಗೆ ಲಿಂಗಸುಗೂರು ಎಂದು ಕರೆಯಲ್ಪಟ್ಟಿತು. ಆಗ ಈ ಗ್ರಾಮವನ್ನು ಉರ್ದು ಭಾಷೆಯಲ್ಲಿ ಕಸಬಾ (ಗ್ರಾಮ) ಎಂದು ಕರೆದಿದ್ದರಿಂದ ಈಗ ಇದರ ಹೆಸರು ಕಸಬಾಲಿಂಗಸುಗೂರು ಎಂದು ಕರೆಯಲಾಗುತ್ತಿದೆ.

ತಾಲ್ಲೂಕು ಕೇಂದ್ರಕ್ಕೆ ಕೇವಲ 4ಕಿ.ಮೀ ಅಂತರದಲ್ಲಿರುವ ಕಸಬಾ ಲಿಂಗಸುಗೂರು ಸ್ಥಳೀಯ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಅಂದಾಜು 1200 ಮನೆಗಳಿದ್ದು, 15ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈ ಗ್ರಾಮದಿಂದ ರಾಜೇಶ್ವರಿ ಅತ್ನೂರು, ಶಿವಮ್ಮ ಕೊಡ್ಲಿ, ಕುಪ್ಪಮ್ಮ ಯತಗಲ್‌, ಮುದಕಪ್ಪ ನಾಯಕ, ಶರಣಪ್ಪ ಕೆಂಗೇರಿ ಎಂಬುವವರು ಪುರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

ಗ್ರಾಮದ ಅಷ್ಟದಿಕ್ಕುಗಳಲ್ಲಿ ಕಲ್ಲೇಶ್ವರ, ಅಮೃತಲಿಂಗ, ಜಡಿಶಂಕರಲಿಂಗ, ಗವಿಸಂಗಮಲಿಂಗ, ರಾಮತೀರ್ಥ, ಮೈಲಾರಲಿಂಗ ಸೇರಿದಂತೆ ಇತರೆ ಈಶ್ವರ ಗುಡಿಗಳಿವೆ. ಹಿರೇಮಠ, ಪಂಚಾಕ್ಷರಿ, ತೋಟದಾರ್ಯ, ಹೊಸಗುರು, ವಿಜಯಮಹಾಂತೇಶ್ವರ, ಕಪ್ಪರ, ಕಲ್ಮಠ, ಚಿನ್ನದಕಂತಿ ಸೇರಿದಂತೆ ಮಠಗಳು ಇದ್ದು ಮಠಗಳ ಸುತ್ತಲು ಲಿಂಗ ಮುದ್ರೆಗಳಿವೆ. ಒಂದೊಂದು ಲಿಂಗು, ಮಠಕ್ಕೆ ತನ್ನದೆಯಾದ ಐತಿಹಾಸಿಕ ಹಿನ್ನಲೆ ಹೊಂದಿದೆ. ಹುಲಿ ಶಿಷ್ಯನಾಗಿ ಮಾಡಿಕೊಂಡ ಪರಂಪರೆಯ ಹರಗುರು ಚರಮೂರ್ತಿಗಳು ನೆಲೆಗೊಂಡಿದ್ದರು ಎಂಬುದು ಐತಿಹ್ಯ.

ಈ ಗ್ರಾಮದಲ್ಲಿ ಬೆನಕನ, ಐನ, ಕುಪ್ಪಿ, ಜೀರ, ಆರ್ಯರ, ಗದ್ದಿ, ಅಂತರಗಂಗಿ, ಬೂದುಗುಂಪ, ಬ್ಯಾಗಾರ, ಚೌಕಿ ಮಾನಪ್ಪ(ಮನ್‌), ವಾರ್ಕರ್‌, ಮಾಲಿಗೌಡ್ರ, ಪಿಡ್ಡಪ್ಪ, ಗೌಡ್ರ, ಕುಂಬಾರ, ದುರುಗಮ್ಮ, ಅಂಟರ್‌, ಮಂಗಾ, ಮಲ್ಲಪ್ಪನ, ಗಾಡಿಬಾವಿ ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ಬಾವಿಗಳಿವೆ. ಕಟ್ಟೆಬಾವಿ (ಬಾಗಿ ಸೇದುವ), ಒಕ್ಕು ತುಂಬುವ (ಬಾವಿಯಲ್ಲಿ ಇಳಿದು) ಬಾವಿ, ಗಿರಕಿ ಬಾವಿಗಳಿರುವುದು ಕೇಳುಗರನ್ನು ಅಚ್ಚರಿಗೊಳಿಸುತ್ತದೆ.

‘ಗ್ರಾಮದೆಲ್ಲೆಡೆ ಲಿಂಗ (ಈಶ್ವರ)ಗಳು, ಲಿಂಗ ಮುದ್ರೆಗಳಿವೆ. ಐತಿಹಾಸಿಕ ಪರಂಪರೆಯನ್ನು ಸಾಕ್ಷಿಕರಿಸುವ ಮಠ ಮಾನ್ಯಗಳು, ನಾಡಿಗೆ ಪರಿಚಿತರಾದ ಶರಣರು ಆಗಿ ಹೋಗಿದ್ದಾರೆ. ಏಳೂರು ಒಡೆಯ ಕುಪ್ಪಿಭೀಮ ಸೇರಿದಂತೆ ಆಯಾ ಕುಲ ಬಾಂಧವರು ಆರಾಧಿಸುವ 60ಕ್ಕೂ ಹೆಚ್ಚು ವಿವಿಧ ದೇವಸ್ಥಾನಗಳಿವೆ. ನೂರಕ್ಕೂ ಹೆಚ್ಚು ತೆರೆದ ಬಾವಿಗಳಿದ್ದು ಇಂದಿಗೂ ಬಹುತೇಕ ಬಳಕೆಯಲ್ಲಿವೆ’ ಎಂದು ವಿಶ್ವನಾಥ ಕುಂಬಾರ ಮಾಹಿತಿ ನೀಡಿದರು.

‘ಕಸಬಾ ಲಿಂಗಸುಗೂರುದಲ್ಲಿ 20ಕ್ಕೂ ಹೆಚ್ಚು ಸಂಶೋಧನೆಗೊಳಪಟ್ಟ ಶಿಲಾಶಾಸನಗಳಿದ್ದವು. ಪ್ರತಿಯೊಂದು ಮಠ, ಬಾವಿ, ಲಿಂಗು(ಈಶ್ವರ) ಐತಿಹಾಸಿಕ ನೆಲೆಗಟ್ಟು ಹೊಂದಿವೆ. ಈ ಮೊದಲು ಐತಿಹಾಸಿಕ ಕುರುಹುಗಳ ಕುರಿತು ಯಾರೂ ಆಸಕ್ತಿ ವಹಿಸದೆ ಹೋಗಿದ್ದರಿಂದ ಮಹತ್ವದ ಅಂಶಗಳು ನಿಗೂಢವಾಗಿವೆ. ಆಸಕ್ತರು ಹೆಚ್ಚಿನ ಸಂಶೋಧನೆಗೆ ಮುಂದಾಗುವ ಅಗತ್ಯವಿದೆ’ ಎಂದು ಸಂಶೋಧಕ ಡಾ. ಶಶಿಕಾಂತ ಕಾಡ್ಲೂರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT