ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ವಿಶ್ವದ ಸ್ವತ್ತು: ಮಂತ್ರಾಲಯ ಶ್ರೀ

ಮಹಿಳಾ ದಾಸ ಸಾಹಿತ್ಯ ಒಂದು ದಿನದ ಕಾರ್ಯಾಗಾರ
Last Updated 28 ನವೆಂಬರ್ 2019, 13:07 IST
ಅಕ್ಷರ ಗಾತ್ರ

ರಾಯಚೂರು: ಸಾಹಿತ್ಯ ಎಂಬುದು ಒಂದು ಜಾತಿ, ಜನಾಂಗ, ಧರ್ಮದ ಸ್ವತ್ತು ಅಲ್ಲ; ಅದು ವಿಶ್ವದ ಸ್ವತ್ತು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರು ಹೇಳಿದರು.

ನಗರದ ಟ್ಯಾಗೋರ್‌ ಕಾಲೇಜು ಸಭಾಂಗಣದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ, ರಾಯಚೂರು ಸ್ನಾತಕೋತ್ತರ ಕೇಂದ್ರ ಹಾಗೂ ಹರಿದಾಸ ಸಾಹಿತ್ಯ ಅಧ್ಯಯನ ಪೀಠದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಾಸ ಸಾಹಿತ್ಯ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದಾಸ ಸಾಹಿತ್ಯ ಎಂದೆಂದಿಗೂ ಪ್ರಸ್ತುತೆ ಪಡೆದಿದೆ. ಹರಿದಾಸರು ಸಂಸ್ಕೃತ ಭಾಷೆಯಲ್ಲಿದ್ದ ಎಲ್ಲಾ ವಿಶೇಷತೆಗಳನ್ನು ಹಾಡಿನ ಮುಖಾಂತರ ಜನ ಸಾಮಾನ್ಯರಿಗೆ ಮನಮುಟ್ಟುವಂತೆ ಹೇಳಿದ್ದಾರೆ. ಎಲ್ಲರಿಗೂ ದಾಸ ಸಾಹಿತ್ಯದ ರಸದೌತಣವನ್ನು ಉಣಬಡಿಸಿದ್ದಾರೆ. ಕನ್ನಡ ಹರಿದಾಸರಿಗೆ ಪ್ರಸಿದ್ಧವಾದ ನೆಲ ರಾಯಚೂರು. ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಪ್ರಾಣೇಶದಾಸರು ಮತ್ತು ಶಿಷ್ಯ ಪಾರಂಪರೆ ಹೀಗೆ 164ಕ್ಕೂ ಮಿಗಿಲು ಹರಿದಾಸರ ಮುಖ್ಯ ಕಾರ್ಯಕ್ಷೇತ್ರ ರಾಯಚೂರು ಜಿಲ್ಲೆಯಾಗಿದೆ ಎಂದು ತಿಳಿಸಿದರು.

ವಿಜಯದಾಸರು ಈ ಜಿಲ್ಲೆಯಲ್ಲಿ 72 ವರ್ಷಗಳ ಕಾಲ ಇದ್ದರು. ಪುರಂದರದಾಸರು ಈ ಜಿಲ್ಲೆಯಲ್ಲಿ ಸಂಚರಿಸಿ ತಮ್ಮ ಕೀರ್ತನೆಗಳ ಮೂಲಕ ಜನರ ಜೀವನ ಅಂಕುಡೊಂಕುಗಳನ್ನು ತಿದ್ದಿದವರು ಎಂದರು.

ಯಾಂತ್ರಿಕ ಯುಗದಲ್ಲಿ ಜನಮಾನಸದ ಮನಸ್ಸಲ್ಲಿ ಹರಿದಾಸರ ಮಹಿಮೆಗಳು ಅಚ್ಚಳಿಯದೇ ಉಳಿಯಲು ಸಾಧ್ಯವಾದದ್ದು ಮಹಿಳಾ ದಾಸಿನಿಯರಿಂದ, ಮುದ್ರಣ ಮಾಧ್ಯಮ ಇಲ್ಲದ ಕಾಲದಲ್ಲಿ ಮೌಖಿಕವಾಗಿ ಬಾಯಿಯಿಂದ ಬಾಯಿಗೆ ಹಾಡುಗಳನ್ನು ಹಾಡಿ ಮಕ್ಕಳಿಗೆ ಕಲಿಸಿ, ಊಟಕ್ಕಿಂತಲೂ ಮುಂಚೆ ಕೀರ್ತನೆಗಳನ್ನ ಹಾಡಿಸಿ, ಇಲ್ಲಿವರೆಗೂ ಪೋಷಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಹರಿದಾಸ ಸಾಹಿತ್ಯ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ.ಟಿ.ಎನ್ ನಾಗರತ್ನ ಮಾತನಾಡಿ, ಮಹಿಳಾ ಹರಿದಾಸರಲ್ಲಿ ಬಾಲ ವಿಧವೆಯರೇ ಹೆಚ್ಚು, ಬಾಲ್ಯ ವಿವಾಹ ಮಾಡಿ ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ದೇವರ ನಾಮಸ್ಮರಣೆಯಲ್ಲಿಯೇ ತಲ್ಲೀನರಾದವರು. ದೇವರ ಹೆಸರಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದವರು. ಸುಮಾರು ಎಂಟುನೂರು ವರ್ಷಗಳ ಹಿಂದೆ 35 ವಚನಗಾರ್ತಿಯರು ತಮ್ಮ ವಚನಗಳನ್ನು ರಚಿಸಿದ್ದಾರೆ. ಆನಂತರ ಬಂದ ವಚನಗಾರ್ತಿಯರಲ್ಲಿ ಗಲಗಲಿಯ ಅವ್ವನವರು, ಹೆಳವನಕಟ್ಟೆ ಗಿರಿಯಮ್ಮ, ಭೀಮವ್ವ, ಅಂಬಾಬಾಯಿ ಹೀಗೆ ಇನ್ನಿತರರ ಮಹಿಳಾ ದಾಸಿಯರಿಂದ ದಾಸ ಸಾಹಿತ್ಯ ಬೆಳೆದು ಬಂದಿದೆ ಎಂದರು.

ಇಂದಿಗೂ ವಿಧವೆಯ ಸ್ಥಿತಿ ಶೋಚನೀಯವಾಗಿದ್ದು, ವಿಧವೆಯರಿಗೆ ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಇದನ್ನು ಮಹಿಳಾ ಹರಿದಾಸಿನಿಯರು ನೋಟದ ಬಗ್ಗೆ ವಿವರಿಸಿದ್ದಾರೆ. ಹರಿದಾಸ ಸಾಹಿತ್ಯ ಶುದ್ಧ ಸಂಗ್ರಹ ಸಿಗುವುದು ಮೈಸೂರು ವಿಶ್ವವಿದ್ಯಾಲಯದಲ್ಲಿ, ಒಟ್ಟು 380 ಹಸ್ತ ಪ್ರತಿಗಳು ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಮಾತನಾಡಿ, ಮಹಿಳಾ ದಾಸಿನಿಯರು ದಾಸ ಸಾಹಿತ್ಯ ಬರೆಯುವುದಲ್ಲದೆ, ಸಂರಕ್ಷಿಸಿಕೊಂಡು ಬಂದಿದ್ದಾರೆ. ಕೀರ್ತನೆ, ಸುಡಾನ್, ಮುಂಡಗಿ, ಭಕ್ತಿ ಗೀತೆಗಳ ಮುಖಾಂತರ ಮಹಿಳಾ ಭಜನೆ ಮಂಡಳಿಗಳಿಂದ ಜೀವಂತವಾಗಿ ದಾಸ ಸಾಹಿತ್ಯ ಬೆಳೆದು ಬಂದಿದೆ ಎಂದರು.

ಮಹಿಳೆಯರು ಸಮಾಜದ ತುಡಿತ–ಮಿಡಿತಗಳನ್ನು ಸಂಸಾರದಲ್ಲಿನ ಅನುಭವಗಳನ್ನು, ವೇದನೆಗಳನ್ನು, ದೇವರ ನಾಮ ಸ್ಮರಣೆಯಲ್ಲಿ ದಾಸ ಸಾಹಿತ್ಯ ಹೊರಹೊಮ್ಮಿದೆ. ಮೀರಬಾಯಿ, ಲಲ್ಲಾದೇವಿ ಸೇರಿದಂತೆ ಇತರ ದಾಸಿನಿಯರು ವೈವಾಹಿಕ, ಭೋಗದ, ಸಂಪತ್ತನ್ನು ತೊರೆದವರು. ಇಂತಹ ದಾಸಿಯರನ್ನು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಯಲ್ಲಿ ಅವರು ಸಾಧಿಸಿದ ಸಾಧನೆ ಸ್ಮರಿಸಬೇಕಿದೆ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಸೋಮಶೇಖರ್‌, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ವಿಜಯಭಾಸ್ಕರ್‌ ಇಟಗಿ, ಟಾಗೋರ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್‌.ಕೆ. ಅಂಬರೀಶ, ಪದವಿ ಕಾಲೇಜುಗಳ ಸಂಘದ ಅಧ್ಯಕ್ಷ ಥಾಮಸ್‌ ಬೆಂಜಮಿನ್‌, ಪತ್ರಕರ್ತ ಶ್ರೀನಿವಾಸ ಸಿರನೂರಕರ್‌, ಗುಲಬರ್ಗಾ ವಿಶ್ವವಿದ್ಯಾಲಯದ ಯರಗೇರಾ ಸ್ನಾತ್ತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ.ನುಸ್ರುತ್‌ ಫಾತಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT