ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೂದ್ರರು ಸ್ವಾಭಿಮಾನದಿಂದ ಇರಬೇಕು’

ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವ ಆರಂಭ
Last Updated 12 ಜನವರಿ 2021, 13:30 IST
ಅಕ್ಷರ ಗಾತ್ರ

ರಾಯಚೂರು: ‘ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ನಾವೆಲ್ಲ ಶೂದ್ರರೂ ಸ್ವಾಭಿಮಾನಿಗಳಾಗಿರಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಿಣಿ ಬ್ರಿಡ್ಜ್‌ ಕಾಗಿನೆಲೆ ಕನಕಗುರು ಪೀಠದಲ್ಲಿ ಮಂಗಳವಾರದಿಂದ ಆರಂಭವಾದ ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವ ಉತ್ಸವ ಉದ್ಘಾಟಿಸಿ ಮಾತನಾಡಿದರು.

‘ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು. ಕನಕದಾಸರ 500ನೇ ಜಯಂತಿಯನ್ನು ವೈಭವದಿಂದ ಆಚರಿಸಿದ ಶ್ರೇಯಸ್ಸು ನನ್ನದು. ಅದಕ್ಕೂ ಮೊದಲು ಕನಕದಾಸರ ಜಯಂತಿಯನ್ನು ಸರ್ಕಾರ ಮಾಡುತ್ತಿರಲಿಲ್ಲ. ಕರ್ನಾಟಕದಲ್ಲಿ ಇಂದಿಗೂ ಕುರುಬರೆಲ್ಲ ಒಟ್ಟಾಗಿರುವುದಕ್ಕೆ ಅಂದು ಆಚರಿಸಿದ್ದ ಜಯಂತ್ಯುತ್ಸವೇ ಕಾರಣವಾಯಿತು. ಆದಾದ ನಂತರದಲ್ಲಿ ಕನಕಗುರು ಪೀಠ ಸ್ಥಾಪನೆಯಾಗಿದೆ’ ಎಂದರು.

‘ಕೆಲವು ಜನರು ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಬೀದರ್‌, ಕಲಬುರ್ಗಿ ಕೊಡಗು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿರುವ ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ನಮ್ಮ ಸರ್ಕಾರ ಎರಡು ಸಲ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಅದು ಕೇಂದ್ರದಲ್ಲಿ ನನೆಗುದಿಗೆ ಬಿದ್ದಿದೆ. ಹೋರಾಟ ಮಾಡುವವರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಕುಲಶಾಸ್ತ್ರ ಅಧ್ಯಯನ ಇಲ್ಲದೇ ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಅಧ್ಯಯನ ಮುಗಿದಿದ್ದರೆ ಮಾತ್ರ ಈಗ ನಡೆಸುವ ಹೋರಾಟಕ್ಕೆ ಅರ್ಥ ಸಿಗುತ್ತದೆ. ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ನಾನು ವಿರೋಧಿಯಲ್ಲ. ಅದರ ಜಾರಿಗಾಗಿ ಕೆಲವು ಪದ್ಧತಿಗಳನ್ನು ಅನುಸರಿಸಬೇಕು. ಅದನ್ನು ಮಾಡುವುದಕ್ಕೆ ಸರ್ಕಾರಕ್ಕೆ ಧಮ್‌ ಇಲ್ಲ’ ಎಂದು ಕಿಡಿಕಾರಿದರು.

‘ಅಧಿಕಾರ ಇಲ್ಲದಿದ್ದರೂ ಸಾಮಾಜಿಕ ನ್ಯಾಯದ ಪರವಾಗಿಯೇ ಇರುತ್ತೇನೆ. ನಾನು ಯಾರಿಗೂ ಸಲಾಂ ಹೊಡೆಯದೆ ರಾಜಕೀಯದಲ್ಲಿ 40 ವರ್ಷಗಳಿಂದ ಇದ್ದೇನೆ. ದಿ.ದೇವರಾಜು ಅರಸು ನಂತರ ಯಶಸ್ವಿಯಾಗಿ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಇದುವರೆಗೂ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ’ ಎಂದು ಹೇಳಿದರು.

‘ರಾಜಕೀಯದಲ್ಲಿ ಯಾರಿಗೂ ಬಗ್ಗಿ ನಡೆಯುವುದಿಲ್ಲ. ಕೊನೆಯವರೆಗೂ ನಾನು ಸ್ವಾಭಿಮಾನದಿಂದಲೇ ಬದುಕುತ್ತೇನೆ. ಎಲ್ಲಿಯವರೆಗೂ ಜನರ ರಕ್ಷಣೆ ಇರುತ್ತದೆಯೋ ಅಲ್ಲಿಯವರೆಗೂ ಯಾರೂ ನನ್ನ ಏನೂ ಮಾಡುವುದಕ್ಕೆ ಆಗೋದಿಲ್ಲ’ ಎಂದು ತಿಳಿಸಿದರು.

ಶಾಸಕರಾದ ಸುರೇಶ ಭೈರತಿ, ರಾಘವೇಂದ್ರ ಹಿಟ್ನಾಳ ಮಾತನಾಡಿದರು. ಸಿದ್ದರಾಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಾಲವರ್ತಿ ಜಡೇಶ್ವರ ಸಂಸ್ಥಾನದ ಶಿವಸಿದ್ದೇಶ್ವರ ಸ್ವಾಮಿ, ಲಿಂಗಬೀರದೇವ ಸ್ವಾಮಿ ಹಾಗೂ ಗೌರ ಬೀರಮಠದ ಬೀರಪ್ಪ ಸ್ವಾಮಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ಡಾ.ಭಾರತಿ ಹೊಸಟ್ಟಿ ಅವರು ಬರೆದ ‘ಕೊಡಗಿನ ಕುರುಬ ಬುಡಕಟ್ಟುಗಳು’, ಡಾ.ಕೆ.ಎಂ. ಮೇತ್ರೈ ಅವರು ಬರೆದ ‘ಕುರುಮನ್ಸ್‌ ಟ್ರೈಬ್ಸ್‌’ ಹಾಗೂ ಡಾ.ಜಯಶ್ರೀ ಪಾಟೀಲ ಅವರು ಬರೆದ ‘ಬೀರಪ್ಪ ಸಂಪ್ರದಾಯ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT