ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಣ್ಮರೆ ಕಳವಳಕಾರಿ ವಿವಿಧ ನೆಲೆಗಳಲ್ಲಿ ಕ್ರಮ ಕೈಗೊಳ್ಳಿ

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಮಕ್ಕಳ ಕಳ್ಳರ ವದಂತಿಯಿಂದಾಗಿ ವ್ಯಕ್ತಿಯೊಬ್ಬ ಜನರ ಹೊಡೆತ, ಬಡಿತಗಳಿಂದ ಸತ್ತಂತಹ ದುರಂತ ಘಟನೆಯ ನೆನಪು ಇನ್ನೂ ಮಾಸದಿರುವ ಮುಂಚೆಯೇ ಮೇ 25ರಂದು ಅಂತರರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ ಆಚರಿಸಲಾಗಿದೆ. ಮಕ್ಕಳು ಕಾಣೆಯಾಗುವುದರಿಂದ ಪೋಷಕರು ಹಾಗೂ ಸಮಾಜ ಅನುಭವಿಸುವ ನೋವು, ಆಭದ್ರತೆ, ಅನಿಶ್ಚಯ ಹಾಗೂ ಆತಂಕ ಅಸದಳ. ರಾಷ್ಟ್ರದಲ್ಲಿ ಪ್ರತಿದಿನ ಸರಾಸರಿ 174 ಮಕ್ಕಳು ಕಾಣೆಯಾಗುತ್ತಾರೆ ಎಂಬ ಸಂಗತಿ ತೀವ್ರ ಕಳವಳಕಾರಿ. ಮೈಸೂರು ಜಿಲ್ಲೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ನಾಪತ್ತೆಯಾದ 1491 ಮಕ್ಕಳ ಪೈಕಿ 1376 ಮಂದಿಯನ್ನು ರಕ್ಷಿಸಲಾಗಿದೆ. ಆದರೆ 115 ಮಕ್ಕಳು ಈವರೆಗೆ ಪತ್ತೆಯಾಗಿಲ್ಲ ಎಂಬುದು ಮಕ್ಕಳ ಕಣ್ಮರೆಯಲ್ಲಿನ ನಿಗೂಢತೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಕಾಣೆಯಾಗುವವರಲ್ಲಿ ಬಾಲಕಿಯರೇ ಅಧಿಕ ಎಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತಹದ್ದು. ಮಕ್ಕಳು ಕಾಣೆಯಾಗಲು ಹಲವು ಕಾರಣಗಳಿವೆ. ಅಪಹರಣ, ದುಷ್ಕರ್ಮಿಗಳ ಜಾಲದ ಸಹವಾಸ, ಮನೆಯಲ್ಲಿನ ಗಲಾಟೆಗಳು, ಮನಸ್ತಾಪಗಳು, ಓದಲು– ಬರೆಯಲು ಪೋಷಕರ ಒತ್ತಡ, ಆಮಿಷ, ದುಡಿಮೆ, ಗೆಳೆಯರ ಸಹವಾಸ, ಜನಸಂದಣಿ ಸ್ಥಳಗಳಲ್ಲಿ ಪೋಷಕರ ನಿರ್ಲಕ್ಷ್ಯ, ದುಶ್ಚಟ, ಪ್ರೇಮಸಂಬಂಧ – ಇವೆಲ್ಲಾ ಮಕ್ಕಳ ಕಣ್ಮರೆಗೆ ಕಾರಣಗಳಾಗಬಹುದು.

ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಿ ಪೋಷಕರೊಂದಿಗೆ ಒಂದುಗೂಡಿಸುವ ಪ್ರಯತ್ನಗಳನ್ನು ನಮ್ಮ ಆಡಳಿತ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಹೀಗಾಗಿ ಕಾಣೆಯಾದ ಮಗುವಿನ ಬಗೆಗಿನ ದೂರನ್ನು ಗಂಭೀರವಾದ ಅಪರಾಧ ಪ್ರಕರಣವಾಗಿಯೂ ಪರಿಗಣಿಸುತ್ತಿರಲಿಲ್ಲ. 2005ರಲ್ಲಿ ವರದಿಯಾದ ಕುಖ್ಯಾತ ನಿಠಾರಿ ಪ್ರಕರಣ, ಈ ಕುರಿತಾದ ದೃಷ್ಟಿಕೋನವನ್ನು ಬದಲಿಸಿತು. ನೊಯ್ಡಾ ಬಳಿಯ ನಿಠಾರಿ ಸುತ್ತಮುತ್ತ ನಾಪತ್ತೆಯಾದ ಮಕ್ಕಳು ಹಾಗೂ ಆ ನಂತರ ಹೊರಬಂದ ಮಕ್ಕಳ ಹತ್ಯಾಕಾಂಡದ ವಿವರಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿತ್ತು. ಮಕ್ಕಳ ನಾಪತ್ತೆ ಪ್ರಕರಣಗಳ ಬಗ್ಗೆ ಪೋಷಕರು ನೀಡಿದ ದೂರುಗಳನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರ ನಿಷ್ಕ್ರಿಯತೆ, ಅದಕ್ಷತೆಯೂ ಆಗ ತೀವ್ರ ಟೀಕೆಗಳಿಗೆ ಗುರಿಯಾಯಿತು. ನಂತರ, ಕಾಣೆಯಾದ ಮಗುವಿನ ಬಗ್ಗೆ ಕಾನೂನಿನಲ್ಲಿ ಹೊಸ ವ್ಯಾಖ್ಯಾನಕ್ಕೆ ಇದು ಕಾರಣವಾಯಿತು. ಕಾಣೆಯಾದ ಮಗುವಿನ ಪ್ರಕರಣ ವರದಿಯಾದಲ್ಲಿ, ಅಕ್ರಮ ಸಾಗಣೆಯ ಅಪರಾಧ ನಡೆದಿರಬಹುದಾದ ಸಾಧ್ಯತೆಯ ತತ್ವದ ಮೇಲೆ ಭಾರತೀಯ ದಂಡ ಸಂಹಿತೆಯ 370ರ ಅಡಿ ಎಫ್‌ಐಆರ್‌ ದಾಖಲು ಮಾಡುವುದನ್ನು ಕಡ್ಡಾಯಗೊಳಿಸಿ 2013ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ಆದರೆ ಮಕ್ಕಳ ರಕ್ಷಣೆಗೆ ಹಲವು ನೆಲೆಗಳಲ್ಲಿ ಕೆಲಸ ಮಾಡುವುದು ಅಗತ್ಯ. ಇದಕ್ಕೆ ಬಲವಾದ ಕಾನೂನಿನ ಬೆಂಬಲವೂ ಬೇಕು. ಈಗಾಗಲೇ 2018ರ ಮಾನವ ಅಕ್ರಮ ಸಾಗಣೆ (ತಡೆ, ರಕ್ಷಣೆ ಹಾಗೂ ಪುನರ್ವಸತಿ) ಮಸೂದೆಗೆ ಕೇಂದ್ರ ಸಂಪುಟದ ಅನುಮೋದನೆ ದೊರೆತಿದ್ದು ಸಂಸತ್‌ನಲ್ಲಿ ಮಂಡನೆಯಾಗಬೇಕಿದೆ. ಸಮಸ್ಯೆಯ ಆಳ ಹಾಗೂ ಅದರ ತೀವ್ರತೆಯನ್ನು ಪತ್ತೆ ಮಾಡಿ ಮಕ್ಕಳ ಅಕ್ರಮ ಸಾಗಣೆಯ ಪಿಡುಗು ಮಟ್ಟ ಹಾಕಲು ಪ್ರಾಮಾಣಿಕವಾದ ಪೊಲೀಸ್ ತನಿಖೆ ಹಾಗೂ ಪ್ರಾಸಿಕ್ಯೂಷನ್ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞಾನವನ್ನೂ ಸಮರ್ಪಕವಾಗಿ ಈ ನಿಟ್ಟಿನಲ್ಲಿ ಬಳಸಿಕೊಳ್ಳುವುದು ಸಾಧ್ಯವಿದೆ. ಕಾಣೆಯಾದ ಮಕ್ಕಳ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಕ್ರೋಡೀಕರಣ, ಕಾಣೆಯಾದ ಮಕ್ಕಳ ಪತ್ತೆಗೆ ಸಹಕಾರಿ. ಈ ನಿಟ್ಟಿನಲ್ಲಿ ಟ್ರ್ಯಾಕ್ ಚೈಲ್ಡ್‌ ನಂತಹ ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಹಾಗೆಯೇ ಮಕ್ಕಳ ಪತ್ತೆ ಹಾಗೂ ರಕ್ಷಣೆಗಾಗಿ ಆಪರೇಷನ್ ಸ್ಮೈಲ್ ಹಾಗೂ ಮುಸ್ಕಾನ್‌ನಂತಹ ಉಪಕ್ರಮಗಳನ್ನೂ  ಸರ್ಕಾರ ಕೈಗೊಂಡಿದೆ. ಮಕ್ಕಳ ಭಾವನಾತ್ಮಕ ಅಗತ್ಯಗಳ ಬಗ್ಗೆ ‍ಪೋಷಕರು ಹಾಗೂ ಸಮಾಜದಲ್ಲಿ ಸಂವೇದನಾಶೀಲತೆ ಮೂಡಿಸುವುದೂ ಇಲ್ಲಿ  ಮುಖ್ಯ. ರಾಷ್ಟ್ರದಾದ್ಯಂತ ಕಾರ್ಯನಿರ್ವಹಿಸುವ ಬಾಲ ಕಾರ್ಮಿಕ ಪದ್ಧತಿಯ ಅನಿಷ್ಟ ಪಿಡುಗಿನ ಜಾಲ, ವೇಶ್ಯಾವಾಟಿಕೆ ಅಥವಾ ಭಿಕ್ಷಾಟನೆ ಜಾಲಗಳಿಗೆ ಮಕ್ಕಳು  ಬಲಿಯಾಗಬಾರದು. ‘ಭಾರತದಲ್ಲಿ ಪ್ರತಿ ಗಂಟೆಗೆ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗುತ್ತದೆ. ನಾಲ್ಕು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತದೆ ಮತ್ತು ಎಂಟು ಮಕ್ಕಳು ಕಾಣೆಯಾಗುತ್ತಾರೆ. ಇದು ರಾಷ್ಟ್ರೀಯ ತುರ್ತುಪರಿಸ್ಥಿತಿ ಅಲ್ಲವೇ?’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಕೇಳುವ ಪ್ರಶ್ನೆಯಲ್ಲಿ ತಥ್ಯವಿದೆ. ಮಕ್ಕಳ ಬಾಲ್ಯವನ್ನು ಮರಳಿ ಮಕ್ಕಳಿಗೆ ನೀಡುವುದು ನಾಗರಿಕ ಸಮಾಜದ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT