ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಿಯಮ ಪಾಲಿಸದವರಿಗೆ ರಾಯಚೂರಿನಲ್ಲಿ ದಂಡೋಪಾಯ!

ಏಳು ದಿನಗಳಲ್ಲಿ ₹3.64 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು
Last Updated 21 ಜುಲೈ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ತಡೆಗಾಗಿ ಮುನ್ನಚ್ಚರಿಕೆ ವಹಿಸುವಂತೆ ಜನರನ್ನು ಜಾಗೃತಿಗೊಳಿಸುವ ಜೊತೆಗೆ ಮಾಸ್ಕ್‌ ಧರಿಸದವರಿಗೆ ಮತ್ತು ಅನಗತ್ಯ ಸಂಚರಿಸುವವರಿಗೆ ಪೊಲೀಸರು ದಂಡ ವಿಧಿಸುವುದನ್ನು ವ್ಯಾಪಕಗೊಳಿಸಿದ್ದಾರೆ.

ಲಾಕ್‌ಡೌನ್‌ ಆರಂಭವಾದ ಏಳು ದಿನಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು ₹3.64 ಲಕ್ಷ ದಂಡ ವಿಧಿಸಿದ್ದಾರೆ. ಮಾಸ್ಕ್‌ ಧರಿಸದೆ ಇರುವವರ ವಿರುದ್ಧ ಮತ್ತು ಅನಗತ್ಯ ಸಂಚರಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು ಮಾತ್ರವಲ್ಲ, ಬೈಕ್‌ ಮತ್ತು ಕಾರುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ ಪ್ರಾರಂಭದ ದಿನವೇ ಜುಲೈ 15 ರಂದು ಜಿಲ್ಲೆಯಾದ್ಯಂತ 284 ವಾಹನಗಳನ್ನು ವಶಕ್ಕೆ ಪಡೆದು, 52 ಸಾವಿರ ದಂಡ ಸಂಗ್ರಹಿಸಲಾಗಿದೆ.

ಎರಡನೇ ದಿನ 827 ವಾಹನಗಳು ₹70,700 ದಂಡ, ಮೂರನೇ ದಿನ 349 ವಾಹನಗಳು ₹67,500 ಸಾವಿರ ದಂಡ, ಐದನೇ ದಿನ 242 ವಾಹನಗಳು ₹35,900 ಸಾವಿರ ಹಾಗೂ ಆರನೇ ದಿನ 301 ವಾಹನಗಳು ₹31,800 ಸಾವಿರ ದಂಡ ವಿಧಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಅನಗತ್ಯ ಸಂಚಾರ ಮಾಡದಂತೆ ಪೂರ್ವ ಸೂಚನೆ ನೀಡಲಾಗಿತ್ತು. ಸಂಚಾರಕ್ಕೆ ಅವಕಾಶ ಇರುವವರು ಕೂಡಾ ಸೋಂಕು ತಡೆ ಮುನ್ನಚ್ಚರಿಕೆ ನಿರ್ಲಕ್ಷಿಸಿದ್ದಕ್ಕೆ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿದೆ.

ಸರಕು ವಾಹನಗಳನ್ನು ಹೊರತುಪಡಿಸಿ ಸರ್ಕಾರಿ ಮತ್ತು ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧ ಮಾಡಿರುವುದರಿಂದ ಬಹುತೇಕ ಜನಸಂಚಾರವೂ ನಿಯಂತ್ರಣದಲ್ಲಿದೆ. ರಾಯಚೂರು ಮತ್ತು ಸಿಂಧನೂರು ನಗರಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಮಧ್ಯಾಹ್ನದ ಬಳಿಕ ಮುಖ್ಯ ರಸ್ತೆಗಳಲ್ಲಿ ಬಿಕೋ ಎನ್ನುತ್ತಿವೆ. ಇನ್ನುಳಿದ ಕಡೆಗಳಲ್ಲಿ ಮಧ್ಯಾಹ್ನದವರೆಗೂ ಮಾತ್ರ ಅಂಗಡಿಗಳನ್ನು ತೆರೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು ಸ್ಥಗಿತವಾಗಿ, ಜನದಟ್ಟಣೆ ಏರ್ಪಡುವುದಕ್ಕೆ ಸಾಧ್ಯವಾಗಿರಲಿಲ್ಲ.

ಜಿಲ್ಲೆಯಾದ್ಯಂತ ಜನಸಂದಣಿ ಏರ್ಪಡಬಹುದಾದ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸುತ್ತಾ ಬಂದಿದ್ದಾರೆ. ಮಧ್ಯಾಹ್ನದ ಬಳಿಕ ಎಲ್ಲ ಮಳಿಗೆಗಳನ್ನು ಬಂದ್‌ ಮಾಡಿಸುವುದು ಮಾತ್ರವಲ್ಲ, ಅನಗತ್ಯವಾಗಿ ಸಂಚರಿಸುವವರನ್ನು ಪೊಲೀಸರು ವಿಚಾರಿಸುತ್ತಿದ್ದರೆ. ಮುನ್ನಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸಿ ಜನದಟ್ಟಣೆ ಆಗುವ ಕಡೆಗಳಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಕೂಡಾ ಪ್ರಸಂಗಗಳು ಉದ್ಭವಿಸಿದ್ದವು. ಒಂದು ವಾರದ ಲಾಕ್‌ಡೌನ್‌ ಜುಲೈ 22 ರಂದು ಮುಕ್ತಾಯವಾಗುತ್ತಿದೆ. ಸೋಂಕು ತಡೆಗಾಗಿ ಕೆಲವು ನಿಯಮಗಳ ಪಾಲನೆ ಮುಂದುವರಿಯಲಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ. ಇದೇ ವೇಳೆ ಗುಣಮುಖರಾದವರು ಶೇ 70 ರಷ್ಟಿದ್ದಾರೆ. ಲಾಕ್‌ಡೌನ್‌ ದಿನಗಳಲ್ಲಿ ಸೋಂಕಿತರ ಸಂಖ್ಯೆ ಸ್ವಲ್ಪ ಇಳಿಮುಖವಾಗಿದೆ. ಜುಲೈ 21 ರಂದು ಒಂದು ವಾರದ ಲಾಕ್‌ಡೌನ್‌ ಮುಕ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT