ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಜಿಲ್ಲೆಯಲ್ಲಿ 11,252 ಆಟೊ ಚಾಲಕರು

ಪರಿಹಾರಕ್ಕೆ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧ ಮಾಡಲಾಗುತ್ತಿದೆ
Last Updated 10 ಮೇ 2020, 19:30 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಸರ್ಕಾರದಿಂದ ವಿವಿಧ ವೃತ್ತಿಯವರಿಗೆ ಘೋಷಿಸಿರುವ ಪರಿಹಾರದ ಪ್ಯಾಕೇಜ್‌ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳು ಜಿಲ್ಲೆಯಲ್ಲಿ ಎಷ್ಟಿದ್ದಾರೆ ಎನ್ನುವ ಅಂದಾಜು ಆರಂಭಿಸಲಾಗಿದೆ.

ಕೇಂದ್ರ ಸರ್ಕಾರವು ಕಳೆದ ತಿಂಗಳು ಜನಧನ ಖಾತೆಗೆ ₹500 ಮೊತ್ತವನ್ನು ಜಮಾಗೊಳಿಸಿದ್ದರಿಂದ, 2.5 ಲಕ್ಷ ಫಲಾನುಭವಿಗಳು ಬ್ಯಾಂಕುಗಳತ್ತ ಧಾವಿಸಿದ್ದರು. ಇದರಿಂದ ಬ್ಯಾಂಕ್ ಶಾಖೆಗಳ ಎದುರು ಪ್ರತಿನಿತ್ಯ ಸರದಿ ನಿಂತಿರುವ ಚಿತ್ರಣ ಸಾಮಾನ್ಯವಾಗಿತ್ತು. ಇದರಿಂದ ಬ್ಯಾಂಕ್‌ ಶಾಖೆಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ಆಗಿತ್ತು. ಸಮಸ್ಯೆ ಈಗ ಮರುಕಳಿಸದಂತೆ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ‍ಪಿ.ಎಸ್‌.ಕುಲಕರ್ಣಿ ಅವರು ಈಗಿನಿಂದಲೇ ಬ್ಯಾಂಕುಗಳಿಗೆ ಪೂರ್ವಸೂಚನೆ ರವಾನಿಸುತ್ತಿದ್ದಾರೆ.

ಇದುವರೆಗೂ ರಾಜ್ಯ ಸರ್ಕಾರವು ಮಡಿವಾಳರಿಗೆ, ಸವಿತಾ ಸಮಾಜದವರಿಗೆ, ಆಟೋ, ಟ್ಯಾಕ್ಷಿ ಚಾಲಕರಿಗೆ, ನೇಕಾರರಿಗೆ, ಕಟ್ಟಡ ಕಾರ್ಮಿಕರಿಗೆ, ಚಮ್ಮಾರರಿಗೆ, ಅಕ್ಕಸಾಲಿಗರಿಗೆ ಹಾಗೂ ಟೈಲರ್‌ಗಳಿಗೆ ಪರಿಹಾರ ನೀಡುವುದಾಗಿ ಘೋಷಿಸಿದೆ. ನೇಕಾರ ವೃತ್ತಿಯವರಿಗೆ ತಲಾ ₹2 ಸಾವಿರ ಮತ್ತು ಕಟ್ಟಡ ಕಾರ್ಮಿಕರಿಗೆ ತಲಾ ₹3 ಸಾವಿರ ಪರಿಹಾರ ಹಾಗೂ ಪರಿಹಾರ ವ್ಯಾಪ್ತಿಗೆ ಒಳಪಡುವ ಇನ್ನುಳಿದ ವೃತ್ತಿಯವರಿಗೆ ತಲಾ ₹5 ಸಾವಿರ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಅಂದಾಜು ಪಟ್ಟಿ ಪ್ರಕಾರ, ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ನೋಂದಾಯಿತ 23,468 ಕಟ್ಟಡ ಕಾರ್ಮಿಕರಿದ್ದು, ಇವರಿಗೆ ಒಟ್ಟು ಮೊತ್ತ ₹7.05 ಕೋಟಿ ಸಂದಾಯ ಮಾಡಬೇಕಾಗುತ್ತದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ನೋಂದಣಿ ಆಗಿರುವ ಅಂಕಿ–ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 11,292 ಅಟೊ, ಟ್ಯಾಕ್ಸಿ ಚಾಲಕರಿದ್ದಾರೆ. ಇವರಿಗೆ ಒಟ್ಟು ₹5.65 ಕೋಟಿ ಸಂದಾಯ ಮಾಡಬೇಕಾಗುತ್ತದೆ.

ರಾಜ್ಯದಲ್ಲಿ ಮಡಿವಾಳ ವೃತ್ತಿಯಲ್ಲಿರುವವರ ಸಂಖ್ಯೆ 60 ಸಾವಿರ, ಸವಿತಾ ಸಮಾಜದಿಂದ ವೃತ್ತಿನಿರತರು ರಾಜ್ಯದಲ್ಲಿ 2.3 ಲಕ್ಷ, ನೇಕಾರರು 54 ಸಾವಿರ, ಚಮ್ಮಾರರು 11,722 ರಷ್ಟಿದ್ದಾರೆ. ಅವರಲ್ಲಿ ಜಿಲ್ಲೆಯಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಇನ್ನೂ ಪಟ್ಟಿ ಮಾಡಬೇಕಿದೆ. ಈ ಕಾರ್ಯಕ್ಕಾಗಿ ಸರ್ಕಾರದಿಂದ ಮಾರ್ಗದರ್ಶಿ ಸೂತ್ರಗಳನ್ನು ನಿರೀಕ್ಷಿಸಲಾಗುತ್ತಿದೆ.

*
ಸರ್ಕಾರದಿಂದ ವಿವಿಧ ವೃತ್ತಿಯವರಿಗೆ ಪರಿಹಾರ ಘೋಷಿಸಿದ್ದು, ಬ್ಯಾಂಕ್‌ ಖಾತೆ ವಿವರಗಳನ್ನು ಒದಗಿಸಿದ ಬಳಿಕ ಹಣ ಜಮಾ ಮಾಡುವುದಕ್ಕೆ ಜಿಲ್ಲೆಯ ಬ್ಯಾಂಕುಗಳಲ್ಲಿ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ.
-ಪಿ.ಎಸ್‌. ಕುಲಕರ್ಣಿ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT