ಬುಧವಾರ, ನವೆಂಬರ್ 20, 2019
21 °C

’ಭ್ರಷ್ಟಾಚಾರ ತೊಲಗಿಸಲು ಲೋಕಾಯುಕ್ತ ಅಸಹಾಯಕವಲ್ಲ’

Published:
Updated:

ರಾಯಚೂರು: ಭ್ರಷ್ಟಾಚಾರವನ್ನು ತೊಲಗಿಸಲು ಸಹಾಯಕ ಆಗಿರುವ ಬಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಅಯ್ಯನಗೌಡ ಪಾಟೀಲ ಅವರು ನೀಡಿದ ಹೇಳಿಕೆ ಖಂಡನೀಯವಾಗಿದೆ. ಲೋಕಾಯುಕ್ತ ಅಧಿಕಾರಿಗಳೇ ಈ ರೀತಿ ಹೇಳಿಕೆ ನೀಡಿದರೆ ಜನಸಾಮಾನ್ಯರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದನ್ನು ವಿಚಾರ ಮಾಡಬೇಕು ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಮಹಾವೀರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಿಗಳ ವಿರುದ್ಧ ಕೆಲಸ ಮಾಡುವ ಲೋಕಾಯುಕ್ತ ಅಧಿಕಾರಿಗಳೇ ಇಂತಹ ಹೇಳಿಕೆಗಳನ್ನು ನೀಡಿ, ನ್ಯಾಯಕ್ಕಾಗಿ ಹೋರಾಡುವವರ ದಾರಿ ತಪ್ಪಿಸಿದಂತಾಗುತ್ತದೆ ಎಂದರು.

ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರ್ಕಾರವು ಲೋಕಾಯುಕ್ತ ಇಲಾಖೆಯನ್ನು ರಚಿಸಿದೆ. ಅಲ್ಲಿ ಉನ್ನತ ಹುದ್ದೆಯಲ್ಲಿರುವ ಡಿವೈಎಸ್‌ಪಿ ಅಯ್ಯನಗೌಡ ಪಾಟೀಲ ಅವರು ಭ್ರಷ್ಟಾಚಾರ ನಿರ್ಮೂಲನೆಯ ಮಾತುಗಳನ್ನಾಡಬೇಕಿತ್ತು ಎಂದು ಹೇಳಿದರು.

ಪೌರಾಯುಕ್ತ ರಮೇಶ ನಾಯಕ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಗರದಲ್ಲಿ ಅನೇಕ ಸಮಸ್ಯೆಗಳಿದ್ದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳುತ್ತಿಲ್ಲ. ಪೌರಾಯುಕ್ತರು ಸಮಸ್ಯೆಯಿಂದ ನುಣುಚಿಕೊಳ್ಳುವ ಪ್ರವೃತ್ತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪೌರಾಯುಕ್ತರನ್ನು ಕೂಡಲೇ ವರ್ಗಾವಣೆ ಮಾಡದಿದ್ದರೆ, ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ಮಹ್ಮದ್ ಶಾಹಖಾನ್, ಬಸವರಾಜ, ಕೆ.ವಿ.ಖಾಜಪ್ಪ, ಹನುಮಂತು, ಮಾರುತಿ, ಪ್ರಶಾಂತ,ಆರ್.ವೀರೇಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)