ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಮಡಿವಾಳ ಸಮಾಜದ ಮೇಲೆ ದೌರ್ಜನ್ಯ: ಕ್ರಮಕ್ಕೆ ಒತ್ತಾಯ

Published:
Updated:
Prajavani

ರಾಯಚೂರು: ರಾಜ್ಯದ ವಿವಿಧೆಡೆ ಮಡಿವಾಳ ಸಮುದಾಯದವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಸರ್ಕಾರ ದೌರ್ಜನ್ಯಗಳನ್ನು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದಲ್ಲಿ ಮಡಿವಾಳ ಸಮಾಜದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಜೇರಬಂಡಿ ಗ್ರಾಮದಲ್ಲಿಯೂ  ಮಡಿವಾಳ ಸಮಾಜದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆಯರ ಸಂಬಂಧಿಗಳ ಮೇಲೆ ಕೂಡಾ ಮಾರಣಾಂತಿಕ ಹಲ್ಲೆ ನಡೆದಿದೆ. ಪೊಲೀಸರಿಗೆ ದೂರು ಸಲ್ಲಿಸುವುದಕ್ಕೆ ಹೋದರೂ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು.

ರಾಜಕೀಯ ನಾಯಕರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ರಾಜ್ಯದಲ್ಲಿ ಮಡಿವಾಳ ಸಮಾಜಕ್ಕೆ ಯಾವುದೇ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ. ನ್ಯಾಯ ದೊರಕಿಸದಿದ್ದರೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಡಿವಾಳ ಸಮಾಜದವರ ಮೇಲೆ ದೌರ್ಜನ್ಯ, ಹಲ್ಲೆಗಳು ಹೆಚ್ಚಾಗಿ ನಡೆಯುತ್ತಿವೆ. ಸಮಾಜದ ಪದಾಧಿಕಾರಿಗಳು ಕೂಡಾ ಆತಂಕಕ್ಕೆ ಒಳಗಾಗಿದ್ದು, ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೂ ತರಲಾಗಿದೆ. ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೂ ಮನವಿ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಯಚೂರಿನಲ್ಲಿ ಪ್ರತಿಭಟನೆ ಮೂಲಕ ಮತ್ತೆ ಮನವಿ ಸಲ್ಲಿಸಲಾಗುವುದು. ದೇವದುರ್ಗದಲ್ಲಿ ನಡೆದ ಹಲ್ಲೆ ಘಟನೆ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಬೆಂಗಳೂರಿನಲ್ಲಿಯೂ ಪ್ರತಿಭಟನೆ ಆರಂಭಿಸಲಾಗುವುದು ಎಂದರು.

Post Comments (+)