ನಕಲಿ ಧರ್ಮ ರಕ್ಷಕರು ಸಮಾಜ ದ್ರೋಹಿಗಳು

7
‘ಈದ್ ಸೌಹಾರ್ದ ಕೂಟ’ದಲ್ಲಿ ಮಹ್ಮಮದ್‌ ಕುಂಞ ಹೇಳಿಕೆ

  ನಕಲಿ ಧರ್ಮ ರಕ್ಷಕರು ಸಮಾಜ ದ್ರೋಹಿಗಳು

Published:
Updated:
ಸಿಂಧನೂರಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ತ್ರೀಶಕ್ತಿ ಒಕ್ಕೂಟದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಈದ್ ಸೌಹಾರ್ದ ಕೂಟದಲ್ಲಿ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹ್ಮದ್ ಕುಂಞ ಮಾತನಾಡಿದರು

ಸಿಂಧನೂರು:  ನಿಜವಾದ ಧರ್ಮ ಬೆಳಕು ಕೊಡುತ್ತದೆ. ಪ್ರೀತಿ, ಮಂದಹಾಸ ಮತ್ತು ಕರುಣೆಯನ್ನು ಉಕ್ಕಿಸುತ್ತದೆ. ನಕಲಿ ಧರ್ಮ ರಕ್ಷಕರು ಧರ್ಮ ಮತ್ತು ಸಮಾಜ ದ್ರೋಹಿಗಳು. ಶಾಂತಿ ಸಮಾಜಕ್ಕೆ ಕಂಟಕರಾಗಿದ್ದಾರೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್‌ ಕುಂಞ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಸ್ತ್ರೀಶಕ್ತಿ ಒಕ್ಕೂಟದ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಈದ್ ಸೌಹಾರ್ದ ಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುಂಡಾಗಿರಿ, ದ್ವೇಷದಿಂದ ಧರ್ಮವನ್ನು ರಕ್ಷಣೆ ಮಾಡಲು ಅಸಾಧ್ಯ.  ಧ್ವೇಷ, ಕೊಲೆ ಮತ್ತು ಹಿಂಸೆಯಿಂದ ಯಾವ ಧರ್ಮ ರಕ್ಷಣೆಯಾಗುವುದಿಲ್ಲ. ಧನಾತ್ಮಕ ಚಿಂತನೆಯಿಂದ ಮಾತ್ರ ಸುಂದರ ಸಮಾಜ ಕಟ್ಟಬಹುದು, ಹೊರತು ಅಪನಂಬಿಕೆ ಮತ್ತು ಸಂಶಯಗಳಿಂದ ನೆಮ್ಮದಿಯ ಸಮಾಜ ಕದಡುತ್ತದೆ ಎಂದರು.

ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಸೇರಿದಂತೆ ಯಾರೇ ಧರ್ಮ ರಕ್ಷಕರಿಂದ ಸಮಾಜದಲ್ಲಿ ಗೊಂದಲ ಉಂಟಾಗಿಲ್ಲ. ಧರ್ಮ ನಿಷ್ಠೆಯಿಲ್ಲದವರು ಧರ್ಮ ರಕ್ಷಣೆಯಲ್ಲಿ ತೊಡಗಿದರೆ ಪೈಶಾಚಿತ ಕೃತ್ಯ ನಡೆಯುತ್ತವೆ. ಅಂತಹ ವ್ಯಕ್ತಿಗಳನ್ನು ಪ್ರೀತಿಯಿಂದಲೇ ಗೆಲ್ಲಬೇಕಾದ ಜವಾಬ್ದಾರಿ ಸೌಹಾರ್ದ ಬಯಸುವ ಜನರಿಂದ ಆಗಬೇಕಾಗಿದೆ ಎಂದು ವಿವರಿಸಿದರು.

ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಭಾರತದಲ್ಲಿ ಬಹು ಸಂಸ್ಕೃತಿಗೆ ಮಾನವೀಯತೆ ಬೇರುಗಳ ಪರಂಪರೆ ಇದೆ. ಮನುಷ್ಯರ ಮಧ್ಯೆ ಭೇದ ಸಲ್ಲದು ಎಂದರು.

ಉಪನ್ಯಾಸಕ ಶಂಕರ ಗುರಿಕಾರ ಮಾತನಾಡಿದರು.

ಮತ್ತೊಬ್ಬ ಉಪನ್ಯಾಸಕ ಹುಸೇನಪ್ಪ ಅಮಾರಾಪೂರ ಮಾತನಾಡಿ ಸಹಸ್ರಾರು ವರ್ಷಗಳಿಂದ ಭಾರತದಲ್ಲಿ ಹಲವಾರು ಸಮುದಾಯಗಳು ಪ್ರೀತಿ, ವಿಶ್ವಾಸದಿಂದ ಬಾಳುತ್ತಾ ಬಂದಿವೆ. ಈಚೆಗೆ ಸಹಬಾಳ್ವೆಗೆ ಅಡ್ಡಿಪಡಿಸುವ ಶಕ್ತಿಗಳು ಹುಟ್ಟಿಕೊಂಡಿವೆ ಎಂದರು.

ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಸಂಸ್ಕಾರ ಭಾರತಿ ಅಧ್ಯಕ್ಷ ವೆಂಕಣ್ಣ ಜೋಷಿಯವರು ಮಹಮ್ಮದ್ ಕುಂಞ ಅವರನ್ನು ಸನ್ಮಾನಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ತಾ.ಪಂ. ಮಾಜಿ ಸದಸ್ಯ ಚಂದ್ರು ಭೂಪಾಲ ನಾಡಗೌಡ ಇದ್ದರು. ಬಾಬರ್‍ಬೇಗ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !