ಮಂಗಳವಾರ, ನವೆಂಬರ್ 30, 2021
23 °C

ಮಹರ್ಷಿ ವಾಲ್ಮೀಕಿ ಮನುಕುಲದ ಆದರ್ಶ: ಸಂಸದ ಅಮರೇಶ್ವರ ನಾಯಕ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಮಾಯಣ ಗ್ರಂಥದ ಮೂಲಕ ಭಗವಾನ್ ರಾಮ, ಹನುಮಂತ, ಸೀತೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಅವರು ಕೇವಲ ಒಂದು ಸಮಾಜಕ್ಕೆ ಸೀಮಿತರಾಗದೇ ಮನುಕುಲಕ್ಕೆ ಆದರ್ಶರಾಗಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಅಶಾಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಅವರು ಸಮಾಜದಲ್ಲಿ ವ್ಯಕ್ತಿಯ ಪರಿವರ್ತನೆಗೆ ಮಾದರಿಯಾಗಿದ್ದಾರೆ. ಅವರು ರಾಮಾಯಣ ಬರೆಯುವ ಮೊದಲು ಹಾಗೂ ನಂತರದ ಜೀವನ ಅವಲೋಕಿಸಿದರೆ ಪರಿವರ್ತನೆಗೆ ಹರಿಕಾರರಾಗಿದ್ದಾರೆ. ಸಮಾಜದ ಏಳಿಗೆಗಾಗಿ ಅನೇಕ ಹಿರಿಯರು ಹೋರಾಟಗಳನ್ನು ಮಾಡಿ ಮೀಸಲಾತಿಯನ್ನು ಜಾರಿಗೆ ತಂದಿದ್ದು, ಅಧಿಕಾರ ಇರುವವರೆಗೆ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಲಾಗುವುದು. ಸಮಾಜದ ಮುಖಂಡರು ಜಾತ್ರೆಗೆ ಪಟ್ಟಿ ಎತ್ತದೇ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕೆಲಸ ಮಾಡಬೇಕು ಎಂದರು.

ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಶೇ 7.5 ಮೀಸಲಾತಿಗಾಗಿ ಸಮಾಜದ ಸ್ವಾಮೀಜಿ ನೇತೃತ್ವದಲ್ಲಿ ಅನೇಕ ಹೋರಾಟ ನಡೆದಿದ್ದು ಕಾರ್ಯರೂಪದ ಹಂತದಲ್ಲಿದೆ. ಸತ್ಯಾಸತ್ಯತೆ ಅರಿಯದೇ ಯಾರು ಹಗುರವಾಗಿ ಮಾತನಾಡಬಾರದು ಎಂದು ಸಲಹೆ ನೀಡಿದರು.

ಸಿಂಧನೂರಿನ ಶ್ರೀಕನಕದಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ವಲ್ಕಂದಿನ್ನಿ ಉಪನ್ಯಾಸ ನೀಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರು ದೇಶದ ಎರಡು ಕಣ್ಣುಗಳು. ಶಿಕ್ಷಣ ಒಂದೇ ಸಮಾಜಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಹೋರಾಟ ಮಾಡಿ ಸಂವಿಧಾನ ರಚನೆಯ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಎಂದು ಬಯಸಿದ್ದರು. ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಅವರು ಇಡೀ ಜಗತ್ತಿಗೆ ಸತ್ಯ,‌ ಧರ್ಮ, ಶೌರ್ಯ, ಪ್ರೀತಿ, ತ್ಯಾಗದ ಸಂದೇಶ ನೀಡಿದ್ದಾರೆ. ವಾಲ್ಮೀಕಿ ಅವರ ಬಗ್ಗೆ ಊಹಾಪೋಹಗಳನ್ನು ಹರಡಿಸುವುದನ್ನು ಪ್ರಶ್ನಿಸಬೇಕು. ವಾಲ್ಮೀಕಿ ಹುಟ್ಟಿರದಿದ್ದರೆ ರಾಮ ಸೃಷ್ಟಿಯಾಗುತ್ತಿರಲಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಅಂಬೇಡ್ಕರ್ ಅವರ ಕೊಡುಗೆಯಿಂದಾಗಿ ನಾವು ಮೀಸಲಾತಿ ಪಡೆದು ಅಧಿಕಾರದಲ್ಲಿದ್ದೇವೆ. ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಗೆ ಹೋರಾಟ ನಡೆಯುತ್ತಿದೆ. ಸಮಾಜದ ಹಿರಿಯ ನಾಯಕ ಶ್ರೀರಾಮುಲು ಅವರಿಗೆ ಜವಾಬ್ದಾರಿ ನೀಡಿದ್ದರೂ ಕ್ಯಾಬಿನೆಟ್ ನಲ್ಲಿ ಪ್ರಶ್ನಿಸಿ ಪಾಸ್ ಮಾಡದೇ ಎಡವಿದ್ದಾರೆ ಎಂದರು.

ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಬಿ.ನಾಗರಾಜ್, ಆರ್ ರಮೇಶ್, ನವೀನ್ ಕುಮಾರ್, ರಮೇಶ, ಸಚಿನ್‌, ಯಂಕಮ್ಮ, ಮನೋಜ ಕುಮಾರ ನಾಯಕ, ವಿನಯ, ಯುವರಾಜ, ಆನಂದ, ಕೃಷ್ಣ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು

ಸಾಧಕರಿಗೆ ಸನ್ಮಾನ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಿರುಪತಿ ನಾಯಕ ಗಲಗ, ಸಿದ್ದೇಗೌಡ, ಕರೇಗೌಡ ಕುರುಕುಂದ, ಮಹಾನಂದ ನಾಯಕ, ಕಲ್ಲೂರು ಬಸವರಾಜ, ರಾಜಪ್ಪ ದಳಪತಿ, ವೆಂಕಟೇಶ ನಾಯಕ, ರಾಮು ನಾಯಕ, ದೇವೇಂದ್ರಪ್ಪ ನಾಯಕ ಸೇರಿದಂತೆ ಇತರೆ ಗಣ್ಯರಿಗೆ ಸನ್ಮಾನ ಮಾಡಲಾಯಿತು.

ನಗರಸಭೆ ಅಧ್ಯಕ್ಷ ಈ.ವಿನಯಕುಮಾರ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಅಸೀಫ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ, ಶ್ರೀದೇವಿ ಆರ್.ನಾಯಕ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಚಿದಾನಂದಪ್ಪ, ಡಿವೈಎಸ್ಪಿ ಶಿವನಗೌಡ ಹಾಗೂ ಸಮಾಜದ ಮುಖಂಡ ರಘುವೀರ್ ನಾಯಕ, ಭೀಮರಾಯ ಹದ್ದಿ‌ನಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು