ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ವಿಜೃಂಭಣೆಯಿಂದ ಜರುಗಿದ ರಾಯರ ಪೂರ್ವರಾಧನೆ

Last Updated 16 ಆಗಸ್ಟ್ 2019, 11:37 IST
ಅಕ್ಷರ ಗಾತ್ರ

ಮಂತ್ರಾಲಯ: ಗುರು ಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ಆರಂಭವಾಗಿದ್ದು, ಶುಕ್ರವಾರ ಪೂರ್ವಾರಾಧನೆ ನಡೆಯಿತು.

ಬೆಳಗಿನ ಜಾವ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ನಗರ ಸಂಕೀರ್ತನೆ, ಉತ್ಸವರಾಯರ ಪಾದಪೂಜೆ, ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ಹಾಗೂ ಮಠದ ಆವರಣದೊಳಗಿನ ಎಲ್ಲ ಯತಿಗಳ ಬೃಂದಾವನಕ್ಕೆ ಪೂಜೆ ನೆರವೇರಿಸಲಾಯಿತು.

ಮೂಲ ಬೃಂದಾವನದ ಮಹಾ ಪಂಚಾಮೃತಭಿಷೇಕ ಮತ್ತು ವಿಶೇಷ ಪೂಜೆಯನ್ನು ಭಕ್ತರು ಮಠದ ಪ್ರಾಕಾರದಲ್ಲಿ ಕುಳಿತು ವೀಕ್ಷಿಸಲು ಎಲ್‌ಸಿಡಿ ಪರಧೆ ಅಳವಡಿಸಲಾಗಿದೆ. ಪೂಜೆಗಳು ನೆರವೇರಿದ ಬಳಿಕ ಪ್ರಾಕಾರದಲ್ಲಿ ರಥೋತ್ಸವ ನಡೆಸಲಾಯಿತು. ಚಂಡಿ ವಾದ್ಯ ವೈಭವದೊಂದಿಗೆ ನಡೆದ ರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಪ್ರರು ಮಧ್ಯಾಹ್ನ ಪ್ರಾಕಾರದಲ್ಲಿಯೆ ಕುಳಿತು ಭೋಜನ ಸವಿಯುವುದಕ್ಕೆ ಏರ್ಪಾಡು ಮಾಡಲಾಗಿತ್ತು. ಆರಾಧನೆಯ ನೇತೃತ್ವವನ್ನು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಹಿಸಿದ್ದು, ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ತುಂಗಾಸ್ನಾನ, ಅನ್ನಪ್ರಸಾದ ಹಾಗೂ ಪರಿಮಳ ಪ್ರಸಾದ ದೊರಕಿಸುವುದಕ್ಕೆ ಪೂರ್ವದಲ್ಲಿಯೇ ಸಿದ್ಧತೆ ಮಾಡಿಸಿದ್ದಾರೆ.

ಪುಷ್ಪಾಲಂಕಾರ: ಮಠದ ಹೊರಗೆ ಮತ್ತು ಪ್ರಾಕಾರದ ಪ್ರತಿ ಗೋಡೆಗಳಿಗೂ ಪುಷ್ಪಾಲಂಕಾರ ಮಾಡಲಾಗಿದೆ. ವರ್ಣವೈವಿಧ್ಯದ ಬಗೆಬಗೆಯ ಹೂವುಗಳನ್ನು ಅಂದವಾಗಿ ಜೋಡಿಸಿದ್ದು, ರಾಯರ ಉತ್ಸವಕ್ಕೆ ವಿಶೇಷ ಮೆರುಗು ನೀಡಿದಂತಾಗಿದೆ.

ಮಠದೊಳಗಿನ ಕಲ್ಲಿನ ಕಂಬದ ಸಾಲುಗಳು, ಪ್ರತಿ ಮೂಲೆಗಳು, ಬಾಗಿಲುಗಳು, ಮೆಟ್ಟಿಲುಗಳು ಹೂವಿನಲಂಕಾರದಿಂದ ಕಳೆ ತುಂಬಿಕೊಂಡಿವೆ. ವಿಶೇಷವಾಗಿ ಯತಿವರ್ಯರ ಬೃಂದಾವನಗಳಿಗೆ ಸಮರ್ಪಿಸಿರುವ ಹೂಮಾಲೆಗಳ ಅಲಂಕಾರವು ನಯನ ಮನೋಹರವಾಗಿವೆ. ಭಕ್ತರೆಲ್ಲರೂ ಮಂತ್ರಮುಗ್ಧರಾಗಿ ರಾಯರನ್ನು ಸ್ಮರಿಸುತ್ತಿದ್ದಾರೆ. ಅಬಾಲವೃದ್ಧರಾದಿಯಾಗಿ ಮಂತ್ರಾಲಯಕ್ಕೆ ಭಕ್ತ ಸಮೂಹ ಬರುತ್ತಿದೆ.

ಮಠದ ಮುಖ್ಯದ್ವಾರಕ್ಕೆ ರಜತದ ಹೊದಿಕೆ ಹಾಕಿರುವುದರಿಂದ ಕಂಗೊಳಿಸುತ್ತಿದೆ. ಮಠದ ಮುಖ್ಯದ್ವಾರದಿಂದ ಹಿಡಿದು ವಾಹನ ಸಂಚಾರದ ಮುಖ್ಯರಸ್ತೆ ತನಕವೂ ಅಕ್ಕಪಕ್ಕದಲ್ಲಿ ತಳೀರು ತೋರಣಗಳಿಂದ ಸಿಂಗರಿಸಲಾಗಿದೆ. ಇಡೀ ಮಠದ ಆವರಣದೊಳಗೆ ಮತ್ತು ಹೊರಗಡೆ ಎಲ್‌ಇಡಿ ವಿದ್ಯುತ್‌ ಅಲಂಕಾರ ಮಾಡಿದ್ದು, ರಾತ್ರಿ ಹೊತ್ತು ನೋಡಲು ಆಕರ್ಷಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT