ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಏಳಿಗೆಗೆ ನಾವೇ ಪ್ರಯತ್ನಿಸಬೇಕು: ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ

ಕೆರೆ ತುಂಬಿಸುವುದಕ್ಕೆ ಮಂತ್ರಾಲಯ ಮಠದಿಂದ ₹1 ಲಕ್ಷ ದೇಣಿಗೆ
Last Updated 4 ಮೇ 2022, 14:35 IST
ಅಕ್ಷರ ಗಾತ್ರ

ರಾಯಚೂರು: ’ನಮ್ಮ ಏಳಿಗೆಗೆ ನಾವೇ ಪ್ರಯತ್ನ ಮಾಡಬೇಕು. ಪ್ರಯತ್ನ ಯಶಸ್ಸಿನ ಮೊದಲ ಮೆಟ್ಟಲು‘ ಎಂದು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗುಂಜಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆರೆ ತುಂಬಿಸುವ ಯೋಜನೆಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

‘ಮಳೆಯ ನೀರನ್ನು ಕೆರೆಗೆ ತುಂಬಿಸಲು 10 ರಿಂದ 15 ಗ್ರಾಮಸ್ಥರು ವಿಶಿಷ್ಟ ಯೋಜನೆಯನ್ನು ರೂಪಿಸಿ ಒಳ್ಳೆಯ ಕೆಲಸ ಕೈಗೊಂಡಿದ್ದಾರೆ. ಕೆ.ದೇವಣ್ಣ ನಾಯಕ ವೃತ್ತಿಯಲ್ಲಿ ಸರ್ವೋಚ್ಚ ನಾಯಾಲಯದ ನ್ಯಾಯವಾದಿಯಾಗಿದ್ದು, ಈಗ ಈ ಭಾಗದ ಅನ್ನದಾತರಿಗೆ ಕೆರೆ ಕುಂಟಿಗಳಿಗೆ ನೀರು ತುಂಬಿಸುವ ವಿಶೇಷ ಕಾರ್ಯಕ್ರಮ ರೂಪಿಸಿರುವುದು ವಿಶೇಷ‘ ಎಂದರು.

‘ತಮ್ಮ ಸಹೋದರ ನರಸಿಂಹ ನಾಯಕ ಹಾಗೂ ರಾಮಚಂದ್ರರೆಡ್ಡಿ, ಬಸವರೆಡ್ಡಿ, ಬಿ. ರಾಮರೆಡ್ಡಿ ಇನ್ನು ಅನೇಕ ಗ್ರಾಮಸ್ಥರು ಕೂಡಿ ಕೆರೆ ಅಭಿವೃದ್ದಿ ಮಾಡುತ್ತಿರುವುದು ಶ್ಲಾಘನೀಯ. ಇವರ ಕೆಲಸಕ್ಕೆ ಮೆಚ್ಚಿ ಮಂತ್ರಾಲಯದ ಶ್ರೀಮಠದಿಂದ ಈ ಉತ್ತಮ ಕಾರ್ಯಕ್ಕೆ ₹1 ಲಕ್ಷ ಆಶೀರ್ವಾದ ರೂಪದಲ್ಲಿ ಕೆರೆ ಅಭಿವೃದ್ದಿಗೆ ನೀಡುತ್ತಿದ್ದೇವೆ‘ ಎಂದು ಘೋಷಿಸಿದರು.

ವೀರತಪಸ್ವಿ ವೀರಭದ್ರ ಶಿವಾಚಾರ್ಯರು ಮಾತನಾಡಿ, ‘ಸಮಾಜವು ಮನಸ್ಸು ಮಾಡಿದರೆ ಭಗವಂತನೇ ಬಂದು ನಿಮ್ಮ ಕೆಲಸ ಮಾಡುತ್ತಾನೆ. ಚಿಂತಿಸುವ ಅವಶ್ಯಕತೆ ಇಲ್ಲ. ಇಂತಹ ಮಹಾನ್‌ಕಾರ್ಯ ಯಾವ ಕಾಲಕ್ಕೂ ನಿಲ್ಲುವುದಿಲ್ಲ ನನ್ನ ಆಶಿರ್ವಾದ ಸದಾ ಇದೆ‘ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಭಿನವ ರಾಜೋಟಿವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಸೈನಿಕರು ಕರ್ತವ್ಯವನ್ನು ಮರೆತರೆ ದೇಶ ಹಾಳಾಗುತ್ತದೆ. ಆದರೆ ಅನ್ನದಾತನು ತನ್ನ ಕರ್ತವ್ಯವನ್ನು ಬಿಟ್ಟರೆ ನಾವೆಲ್ಲ ಮಣ್ಣು ತಿನಬೇಕಾಗುತ್ತದೆ. ಅದಕ್ಕಾಗಿ ರೈತನು ಭಗವಂತನ ಸ್ವರೂಪ ಅವರನ್ನು ಕಡೆಗಾಣಿಸಿದಿರಿ‘ ಎಂದು ಕರೆ ನೀಡಿದರು.

ನ್ಯಾಯವಾದಿ ಕೆ. ದೇವಣ್ಣ ನಾಯಕ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ರಾಯಚೂರು ಜಿಲ್ಲೆಯ ಗ್ರಾಮೀಣ ಕ್ಷೇತ್ರದಲ್ಲಿ ಮಳೆ ನೀರನ್ನು ಪೋಲಾಗದಂತೆ ಗುಂಜಳ್ಳಿ ಕರೆಗಳಿಗೆ ಹಾಗೂ ಅದರ ಕೆಳಗೆ ಬರುವಂತಹ ಗ್ರಾಮಗಳಾದ ಪುಚ್ಚಲದಿನ್ನಿ, ಮಿಡಗಲದಿನ್ನಿ, ಇಡಪನೂರು, ಮಿರ್ಜಾಪೂರು, ಮೀರಾಪೂರು, ಜಂಬಲದಿನ್ನಿ. ಯರಗೇರಾ ಇನ್ನು ಅನೇಕ ಗ್ರಾಮಗಳಿಗೆ ಸುಮಾರು 4 ರಿಂದ 5 ಸಾವಿರ ಎಕೆರೆ ಜಮೀನಿನ ಬೆಳೆಗಳಿಗೆ ನೀರುಣಿಸಲು ಸಾಧ್ಯ. ಇದಕ್ಕೆ ನಮ್ಮ ಎಲ್ಲರ ಸುತ್ತಮುತ್ತಲ ಗ್ರಾಮಸ್ಥರ ಸಹಾಕಾರವೆ ಶ್ರೀರಕ್ಷಣೆ‘ ಎಂದರು.

ಹೋರಾಟಗಾರ ಬಸವರಾಜ ಕಳಸ ಮಾತನಾಡಿ,. ಸರ್ಕಾರ ಮಾಡದಂತಹ ಕೆಲಸವನ್ನು ಸುತ್ತ ಮುತ್ತಲಿನ ಭಾಗದ ಅನ್ನದಾತರು ಮಾಡಿಕೊಳ್ಳುತ್ತಿದ್ದಾರೆ. ಮಳೆ ನೀರನ್ನು ಕೆರೆಯಲ್ಲಿ ತುಂಬಿಸುವುದರ ಮೂಲಕ ಯಾರ ಮೇಲೆ ಅವಲಂಬನೆಯಾಗದೆ ನೀರನ್ನು ಬಳಸಿಕೊಳ್ಳುವ ಈ ಯೋಜನೆ ಶ್ಲಾಘನಿಯ‘ ಎಂದು ಹೇಳಿದರು.

ಗುಂಜಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ ವೆಂಕಟರಾಮರೆಡ್ಡಿ ಇದ್ದರು. ವೈ.ಹನುಮಂತ ನಾಯಕ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT