ಮಾನ್ವಿ: ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಪುರಾತನ ಶಿಲಾಶಾಸನಗಳು, ಮೂರ್ತಿಶಿಲ್ಪಗಳು ಹಾಗೂ ವೀರಗಲ್ಲುಗಳು ಇಲ್ಲಿನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿವೆ. ಗ್ರಾಮಗಳಲ್ಲಿನ ದೇವಸ್ಥಾನ, ಮುಖ್ಯ ಬೀದಿ ಹೊರವಲಯ ಹಾಗೂ ಬೆಟ್ಟ ಗುಡ್ಡಗಳಲ್ಲಿ ಅನಾಥವಾಗಿ ಬಿದ್ದಿವೆ.

ತಾಲ್ಲೂಕಿನ ನೀರಮಾನ್ವಿ, ಹಿರೇಕೊಟ್ನೆಕಲ್, ಬೈಲ ಮರ್ಚೇಡ್ ಸೇರಿದಂತೆ ಹಲವು ಗ್ರಾಮಗಳು, ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣ, ಮಲ್ಲಟ, ಬಾಗಲವಾಡ, ಹರವಿ ಮತ್ತಿತರ ಗ್ರಾಮಗಳು ಮತ್ತು ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ ಪುರಾತನ ಕೋಟೆ, ಹಲವು ಶಿಲಾಶಾಸನಗಳು ಹಾಗೂ ಅವಶೇಷಗಳನ್ನು ಹೊಂದಿವೆ.

ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಅಪರೂಪದ ಮೂರು ಹುಲಿಬೇಟೆಯ ವೀರಗಲ್ಲುಗಳನ್ನು ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಈಚೆಗೆ ಪತ್ತೆ ಹಚ್ವಿದ್ದಾರೆ.

ಚೀಕಲಪರ್ವಿ ಗ್ರಾಮದ ಗೌಡರ ಮನೆ ಬಳಿಯ ಕಟ್ಟೆಯ ಮೇಲೆ ಗ್ರಾಮಸ್ಥರು ಒಟ್ಟು ಮೂರು ವೀರಗಲ್ಲುಗಳನ್ನು ಜೋಡಿಸಿಟ್ಟು ನೂರಾರು ವರ್ಷಗಳಿಂದ ಸಂರಕ್ಷಿಸಿದ್ದಾರೆ. ಈ ಮೂರು ವೀರಗಲ್ಲುಗಳು ಹುಲಿ ಬೇಟೆಯಲ್ಲಿ ವೀರಮರಣ ಹೊಂದಿದ ಯೋಧನ ಚಿತ್ರಣವನ್ನು ವಿವರಿಸುತ್ತವೆ. ಕೆಲವು ಕಡೆ ಈ ಪುರಾತನ ಸ್ಮಾರಕಗಳು ಸೂಕ್ತ ರಕ್ಷಣೆ ಇಲ್ಲದೆ ನಿಧಿ ಶೋಧಕರ ದಾಳಿಯಿಂದ ಹಾನಿಗೀಡಾಗಿವೆ.

ಈ ಅವಶೇಷಗಳನ್ನು ಕೆರೆಕಟ್ಟೆ, ಹಳ್ಳಕೊಳ್ಳ, ಬಾವಿಗಳಲ್ಲಿ ಎಸೆಯಲಾಗಿದೆ. ಇವುಗಳನ್ನು ಮುಂದಿನ ಪೀಳಿಗಗೆ ಉಳಿಸಿಕೊಳ್ಳಬೇಕಾದ ಅಗತ್ಯ ಇದೆ. ಈ ಶಾಸನಗಳು, ಶಿಲ್ಪಗಳನ್ನು ಆಯಾ ಊರಿನ ಜನರು ಕಾಳಜಿ ವಹಿಸಿ ತಮ್ಮ ಗ್ರಾಮಗಳಲ್ಲಿ ಕಟ್ಟೆಗಳನ್ನು ಕಟ್ಟಿ ಅವುಗಳನ್ನು ಅಲ್ಲಿ ಸಂರಕ್ಷಿಸಬೇಕಿದೆ.

ಜಿಲ್ಲಾಡಳಿತ ಹಾಗೂ ಪ್ರಾಚ್ಯವಸ್ತು ಇಲಾಖೆಗಳು ಈ ಸ್ಮಾರಕಗಳ ಬಗ್ಗೆ ಕೇವಲ ಸರ್ವೇ ಮಾಡಿಸಿ ವರದಿ ಇಟ್ಟುಕೊಂಡರೆ ಸಾಲದು, ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಆಯಾ ಗ್ರಾಮಗಳಲ್ಲಿ ರಕ್ಷಿಸುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕು ಎಂಬುದು ಸಂಘ ಸಂಸ್ಥೆಗಳ ಪ್ರಮುಖರ ಒತ್ತಾಯ.

ಹೊಸ ಶಾಸನ ಶಿಲ್ಪಗಳ ಶೋಧ: ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಇದೀಗ ಜಿಲ್ಲೆಯಲ್ಲಿನ 300ಕ್ಕಿಂತಲೂ ಅಧಿಕ ಅಪ್ರಕಟಿತ ಶಾಸನಗಳನ್ನು ಶೋಧಿಸಿದ್ದಾರೆ.

ಮಾನ್ವಿ ಪಟ್ಟಣದ ದಿಡ್ಡಿ ಕೆರೆಯ ದೊಡ್ಡ ಗುಂಡಿಗೆ ಇರುವ ಕ್ರಿ.ಶ 8 - 9 ನೇ ಶತಮಾನದ ಶಾಸನವು ತಟಾಕ (ಕೆರೆ) ದ ಬಗ್ಗೆ ಪ್ರಸ್ತಾಪಿಸುತ್ತದೆ. ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮದ ಕ್ರಿ. ಶ 11 - 12ನೇ ಶತಮಾನದ ಶಾಸನವು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯ, ಕೋಟಿ ಹೋಮ ಮತ್ತು ನಾಣ್ಯದ ಪ್ರಕಾರಗಳಾದ ಹಾಗ, ಹೊಂಗೆ ಮತ್ತು ಕಾಣಿಯೊಂದಿಗೆ, ಪ್ರಸ್ತುತ ಕಲ್ಮಲಾ ಗ್ರಾಮವನ್ನು ಅಂದಿನ ದಿನಮಾನಗಳಲ್ಲಿ ‘ಕಲ್ಲುಮಲೆ’ ಎಂದು ಕರೆಯುತ್ತಿದ್ದರ ಬಗ್ಗೆ ದಾಖಲಿಸುತ್ತದೆ.

ಸಿರವಾರ ತಾಲ್ಲೂಕಿನ ಗೊಲ್ಲದಿನ್ನಿ ಗ್ರಾಮದ ಕ್ರಿ.ಶ 1141ರ ಶಾಸನದಲ್ಲಿ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಜಗದೇಕಮಲ್ಲನು ಪಂದಿರ್ಕೆಯ ನೆಲೆವೀಡಿನಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಸಮಯದಲ್ಲಿ ಈತನ ಸಾಮಂತ ಅರಸನಾದ ಮೊರಟದ (ಮಲ್ಲಟ) ಹೖಹಯವಂಶದ ಇಮ್ಮಡಿ ಘಟ್ಟಿದೇವರಸನಿದ್ದನೆಂದು ತಿಳಿಸುತ್ತದೆ.

ಸಿಂಧನೂರು ತಾಲ್ಲೂಕಿನ ಉಪ್ಪಳ ಗ್ರಾಮದ ಕ್ರಿ.ಶ 12ನೇ ಶತಮಾನದ ಶಾಸನದಲ್ಲಿ ರೇವಡಿ ಚರನೆಯವರ ಮಕ್ಕಳು ರಂಗಕೋನಯ್ಯ ಎಂಬಾತನಿಗೆ ಧಾರಪೂರ್ವಕವಾಗಿ ದಾನ ನೀಡಿದ ವಿಷಯವಿದೆ. ರಾಯಚೂರು ತಾಲ್ಲೂಕಿನ ಉಡಮಗಲ್ -ಖಾನಾಪುರ ಗ್ರಾಮದ ಕ್ರಿ.ಶ 1474ರ ಶಾಸನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಇಮ್ಮಡಿ ವಿರೂಪಾಕ್ಷನ ಬಗ್ಗೆ ಉಲ್ಲೇಖಿಸುತ್ತದೆ.

ಹುಳಿಮೇಶ್ವರ ಗ್ರಾಮದ ಕ್ರಿ.ಶ 16ನೇ ಶತಮಾನದ ಗುಂಡು ಕಲ್ಲಿನ ಶಾಸನದಲ್ಲಿ ತುಪರತಿ ತಿಮ್ಮಪ್ಪ ಎನ್ನುವ ವ್ಯಕ್ತಿಯ ಬಗ್ಗೆ ಮಾಹಿತಿ ಇದೆ. ರಾಯಚೂರು ತಾಲ್ಲೂಕಿನ ಮನ್ಸಲಾಪುರ ಗ್ರಾಮದ ಕ್ರಿ.ಶ 1765ರ ಶಾಸನದಲ್ಲಿ ಸಿದ್ದಲಿಂಗೇಶ್ವರ ದೇವಾಲಯದ ಗರುಡಗಂಬ ವನ್ನು ನಿಲ್ಲಿಸಿದ ಪ್ರಸ್ತಾಪವಿದೆ. ಸಿರವಾರ ತಾಲ್ಲೂಕಿನ ತೊಪ್ಪಲದೊಡ್ಡಿ ಗ್ರಾಮದ ಕ್ರಿ.ಶ 17 -18 ನೇ ಶತಮಾನದ ಶಾಸನದಲ್ಲಿ ಮಹಾಜನ, ಕಂಪಣದ ವಿಷಯಗಳಿವೆ. ಚಿಮ್ಲಾಪುರ ಗ್ರಾಮದ ಕ್ರಿ.ಶ 17 -18 ನೇ ಶತಮಾನದ ಶಾಸನದಲ್ಲಿ ಕೆಂಚಣ್ಣನಾಯಕ ನೆಂಬಾತನು ದತ್ತಿ ನೀಡಿದ ದಾಖಲೆ ಇದೆ.

ಪೋತ್ನಾಳ ಗ್ರಾಮದ ಕ್ರಿ.ಶ 17- 18 ನೇ ಶತಮಾನದ ವೀರಗಲ್ಲು ಶಾಸನದಲ್ಲಿ ದಣಿಯರ ಜನರುಗಳಾದ ಗೌಡಪ್ಪನ ಮಗ ಗೌಡರು ಎಂದು ಉಲ್ಲೇಖಿಸುತ್ತದೆ. ಮಾನ್ವಿ ತಾಲ್ಲೂಕಿನ ದೇವಿಪುರ ಗ್ರಾಮದ ಕ್ರಿ.ಶ 17 -18 ನೇ ಶತಮಾನದ ಶಾಸನವೂ ಮಾನಸಯ್ಯ ಎಂಬ ವ್ಯಕ್ತಿಯ ಬಗ್ಗೆ ದಾಖಲಿಸುತ್ತದೆ. ಲಿಂಗಸೂಗುರು ತಾಲ್ಲೂಕಿನ ಮಾವಿನಬಾವಿ ಗ್ರಾಮದ ಕ್ರಿ.ಶ 17 -18 ನೇ ಶತಮಾನದ ಶಾಸನದಲ್ಲಿ ಬಾಗಿಲ ಅಳ್ಳಪ್ಪ ನಾಯಕನು ನಿರುಮರಸನೆಂಬಾತನಿಗೆ ಗೇಣ ಗಳೆಯಲ್ಲಿ ಅಳೆದು ಭೂಮಿಯನ್ನು ದತ್ತಿ ನೀಡಿದನು. ಶಾಸನ ಮುಂದುವರೆದು ನಕರರು, ನಾನಾ ದೇಶಿಗಳು, ದ್ರಮ್ಮ ಮತ್ತು ಬಾಲಯ್ಯನೆಂಬ ವ್ಯಕ್ತಿಯ ಬಗ್ಗೆ ಪ್ರಸ್ತಾಪಿಸುತ್ತದೆ. ಮಾನ್ವಿ ತಾಲ್ಲೂಕಿನ ತುಪ್ಪದೂರು ಗ್ರಾಮದ ಕ್ರಿ.ಶ 1888ರ ಶಾಸನದಲ್ಲಿ ಜ್ಞಾನಿ ಮಹಾರುದ್ರ ಎಂಬುವವರು ಬೃಹಸ್ಪತಿ ವಾರದ ಉದಯದ ಸಮಯದಲ್ಲಿ ಲಿಂಗೈಕ್ಯರಾದರೆಂದು ತಿಳಿಸುತ್ತದೆ.

ಮಸ್ಕಿ ತಾಲ್ಲೂಕಿನ ಮಲ್ಲದಗುಡ್ಡ ಗ್ರಾಮದ ಕ್ರಿ.ಶ 19 -20ನೇ ಶತಮಾನದ ಶಾಸನದಲ್ಲಿ ಶ್ರೀ ರಾಮ ಜಯ ರಾಮ ಎಂದಿದ್ದು ಹನುಮಂತನು ನಾಗರಾಜ ಕುಲದವನೆಂದು ಅಸ್ಪಷ್ಟವಾಗಿ ತಿಳಿಸುತ್ತದೆ. ಈ ಮೇಲೆ ತಿಳಿಸಿದ 14 ಶಾಸನಗಳಲ್ಲಿ ಕೇವಲ ಒಂದು ಶಾಸನವು ನಾಗರಲಿಪಿ ಸಂಸ್ಕೃತ ಭಾಷೆಯಲ್ಲಿ ಇದ್ದರೆ, ಉಳಿದ 13 ಶಾಸನಗಳು ಕನ್ನಡ ಲಿಪಿ, ಕನ್ನಡ ಭಾಷೆಯಲ್ಲಿ ರಚಿತಗೊಂಡವುಗಳಾಗಿವೆ.

ಈ ಮೇಲಿನ ಶಾಸನಗಳೊಂದಿಗೆ ಈ ಜಿಲ್ಲೆಯಲ್ಲಿ ಹೊಸದಾಗಿ ಕೀಳ್ಗುಂಟೆ ಶಿಲ್ಪ (ದೇವಿಪುರ ) ನಿಷದಿಗಲ್ಲು (ಕೂಡ್ಲೂರು) ತೀರ್ಥಂಕರ ವಿಗ್ರಹ (ಕಾಡ್ಲೂರು) ಚಂಡಿಕೇಶ್ವರ ವಿಗ್ರಹಗಳು (ಬಾಗಲವಾಡ ಮತ್ತು ಹುಲಿಗುಡ್ಡ )ಮೊದಲಾದ ಮುಖ್ಯ ವಿಗ್ರಹಗಳು ಕಂಡು ಬಂದಿವೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಪುರಾತನ ಶಿಲಾಶಾಸನಗಳು ಹಾಗೂ ಮೂರ್ತಿಶಿಲ್ಪಗಳನ್ನು ಸರ್ಕಾರದ ಇಲಾಖೆಗಳು ಗ್ರಾಮಸ್ಥರ ಸಹಕಾರದೊಂದಿಗೆ ಸಂರಕ್ಷಣೆ ಮಾಡಬೇಕು

–ಚನ್ನಬಸಪ್ಪ ಮಲ್ಕಂದಿನ್ನಿ, ಇತಿಹಾಸ ಸಂಶೋಧಕ, ಮಾನ್ವಿ

ನಮ್ಮ ಭಾಗದ ಶ್ರೇಷ್ಠ ಐತಿಹಾಸಿಕ ಪರಂಪರೆಯ ಸಾಕ್ಷಿಗಳಾಗಿರುವ ಪುರಾತನ ಸ್ಮಾರಕಗಳು ನಿಧಿಗಳ್ಳರಿಂದ ಹಾನಿಗೀಡಾಗುವುದನ್ನು ತಪ್ಪಿಸಬೇಕು. ಅವುಗಳ ಮಹತ್ವದ ಬಗ್ಗೆ ಹೆಚ್ಚಿನ ಅಧ್ಯಯನದ ಜತೆಗೆ ಜನಜಾಗೃತಿ ಮೂಡಿಸಬೇಕು

–ಎ.ಶರಣಕುಮಾರ ಮುದ್ದಮಗುಡ್ಡಿ, ಸಾಮಾಜಿಕ ಕಾರ್ಯಕರ್ತ, ಮಾನ್ವಿ

ಇತಿಹಾಸ ಅಧ್ಯಯನಕಾರರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿರುವ ಪುರಾತನ ಶಿಲಾಶಾಸನಗಳನ್ನು ಸಂಗ್ರಹಿಸಿ ಒಂದೇ ಕಡೆ ಲಭ್ಯವಾಗುವಂತೆ ಮಾಡಬೇಕು

–ಅಂಬಣ್ಣ ನಾಯಕ ಉಮಳಿಹೊಸೂರು, ಉಪನ್ಯಾಸಕ

ಮಾನ್ವಿ ತಾಲ್ಲೂಕಿನ ವಿವಿಧೆಡೆ ಇರುವ ಅನೇಕ ಶಿಲಾಶಾಸನಗಳು ಇತಿಹಾಸ ವಿಷಯದ ಬಗ್ಗೆ ನಮಗೆ ಹೆಚ್ಚಿನ ಕುತೂಹಲ ಹಾಗೂ ಅಧ್ಯಯನಕ್ಕೆ ಆಸಕ್ತಿ ಮೂಡಿಸಿವೆ. ಇಂತಹ ಅಪರೂಪದ ಸ್ಮಾರಕಗಳ ರಕ್ಷಣೆ ಅಗತ್ಯ

ಸುಧಾ ಬೊಮ್ಮನಾಳ, ಬಿ.ಎ ವಿದ್ಯಾರ್ಥಿನಿ, ಮಾನ್ವಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-32-1263334398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.