ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಉಪಚುನಾವಣೆಗೆ ಸಿದ್ಧವಾದ ಮಸ್ಕಿ ವಿಧಾನಸಭೆ ಕ್ಷೇತ್ರ

ಮತದಾನ ತಕರಾರು ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌
Last Updated 29 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ ಅವರ ರಾಜೀನಾಮೆಯಿಂದ ಖಾಲಿ ಉಳಿದಿರುವ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಚುನಾವಣಾತಕರಾರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿರುವುದು ಹೊಸ ಬೆಳವಣಿಗೆಗೆ ಕಾರಣ.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು’ ರಾಜೀನಾಮೆ ಸಲ್ಲಿಸಿದ್ದ ಶಾಸಕರ ಪೈಕಿ ಮಸ್ಕಿ ಕ್ಷೇತ್ರಕ್ಕೆ ಮಾತ್ರ ಇನ್ನೂ ಉಪಚುನಾವಣೆ ಘೋಷಣೆಯಾಗಿಲ್ಲ. 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರನಗರ ಕ್ಷೇತ್ರ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ನಡೆದಿದ್ದ ಮತದಾನ ಪ್ರಕ್ರಿಯೆ ಕುರಿತು ಹೈಕೋರ್ಟ್‌ಗೆ ತರಕಾರು ಅರ್ಜಿಗಳು ಸಲ್ಲಿಕೆ ಆಗಿದ್ದವು. ರಾಜರಾಜೇಶ್ವರನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದೆ. ಬಾಕಿ ಇರುವ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗುವುದನ್ನು ರಾಜಕೀಯ ಪಕ್ಷಗಳು ಕಾತರದಿಂದ ಕಾಯುತ್ತಿವೆ.

ರಾಜೀನಾಮೆ ಸಲ್ಲಿಸಿದ್ದ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಇದ್ದ ಪ್ರತಾಪಗೌಡ ಪಾಟೀಲ ಅವರು, ಮತ್ತೆ ಚುನಾವಣೆ ಎದುರಿಸುವುದಕ್ಕೆ ಸಜ್ಜಾಗಿದ್ದಾರೆ. ಆರಂಭದಲ್ಲಿ ಬಿಜೆಪಿಯಲ್ಲೇ ಎದುರಾಳಿಯಾಗಿ ಕಂಡುಬಂದಿದ್ದ ಬಸನಗೌಡ ತುರ್ವಿಹಾಳ ಅವರು ಟಿಎಲ್‌ಬಿಸಿ ಕಾಡಾ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ವರಿಷ್ಠರು ಮಸ್ಕಿ ಕ್ಷೇತ್ರದಲ್ಲಿ ಸಂಧಾನ ಏರ್ಪಡಿಸಿದ್ದರಿಂದ ಪ್ರತಾಪಗೌಡ ಅವರಿಗೆ ಉಪಚುನಾವಣೆ ಎದುರಿಸುವುದಕ್ಕೆ ದಾರಿ ಸುಗಮವಾಗಿದೆ.

ಪ್ರತಾಪಗೌಡ ಅವರ ವಿರುದ್ಧ ‘ಅನರ್ಹ ಶಾಸಕ’ ಎನ್ನುವ ಅಸ್ತ್ರ ಹಿಡಿದಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮುಖಂಡರು ಕೂಡಾ ಉಪಚುನಾವಣೆ ಎದುರಿಸುವುದಕ್ಕೆ ಸಜ್ಜಾಗಿ ಹಲವು ತಿಂಗಳು ಆಗಿದೆ. ಆದರೆ, ಯಾರು ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಇನ್ನೂ ಸ್ಪಷ್ಟ ಚಿತ್ರಣವಿಲ್ಲ.

2013 ರ ಪೂರ್ವ ಪ್ರತಾಪಗೌಡ ಪಾಟೀಲ ಅವರು ಬಿಜೆಪಿಯಿಂದ ಪಕ್ಷಾಂತರವಾದಾಗ ಅವರೊಂದಿಗೆ ಬಿಜೆಪಿ ಮೂಲ ಕಾರ್ಯಕರ್ತರೆಲ್ಲ ಹೋಗಿರಲಿಲ್ಲ. ಇದೀಗ ಮತ್ತೆ ಬಿಜೆಪಿಗೆ ಮರಳಿ ಬಂದಿರುವ ಅವರೊಂದಿಗೆ ಕಾಂಗ್ರೆಸ್‌ ಮುಖಂಡರು ವಲಸೆ ಬಂದಿದ್ದಾರೆ. ಉಪಚುನಾವಣೆ ಘೋಷಣೆಯಾದರೆ ಬೆಂಬಲಿಗರು ಮತ್ತು ಕಾರ್ಯಕರ್ತರಲ್ಲಿ ಮತ್ತೆ ಪಕ್ಷಾಂತರಗಳು ನಡೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಬಿಜೆಪಿ ಮುಖಂಡರೊಬ್ಬರು.

‘2008 ರಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರವು ಅಸ್ತಿತ್ವಕ್ಕೆ ಬಂದ ನಂತರ ಪ್ರತಾಪಗೌಡ ಪಾಟೀಲ ಅವರನ್ನು ಜನರು ಸತತ ಬೆಂಬಲಿಸಿ ಗೆಲ್ಲಿಸುತ್ತಾ ಬಂದಿದ್ದಾರೆ. ಅವರು ಸ್ಪರ್ಧಿಸುವ ಪಕ್ಷವನ್ನು ಪರಿಗಣಿಸದೆ ಮತ ನೀಡಿದ್ದಾರೆ ಎನ್ನುವುದು ವಿಶೇಷ. ಈಗ ನಡೆಯುವ ಉಪಚುನಾವಣೆಯು ವ್ಯಕ್ತಿ ಆಧಾರಿತವಾಗುತ್ತದೆಯೋ, ಪಕ್ಷ ಆಧಾರಿತವಾಗುತ್ತದೆಯೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಹಿರಿಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT