ಗುರುವಾರ , ಮೇ 13, 2021
39 °C
ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿಕೆ

ಮಸ್ಕಿ ಉಪಚುನಾವಣೆ: ಮತದಾನಕ್ಕೆ ಸಕಲ ಸಿದ್ದತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ (ರಾಯಚೂರು): ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಏಪ್ರಿಲ್‌ 17 ರಂದು ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಾಗಿ ಸಕಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದರು.

ಮಸ್ಕಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,429 ಮತದಾರರಿದ್ದಾರೆ. ಅವರಲ್ಲಿ 1,01,340 ಪುರುಷರು, 1,05.076 ಮಹಿಳೆಯರು ಹಾಗೂ 13 ಇತರರಿದ್ದಾರೆ. ಮತ ಚಲಾಯಿಸಲು ಅನುಕೂಲವಾಗುವಂತೆ ಒಟ್ಟು 305 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ 25 ಹೆಚ್ಚುವರಿ, 7 ಸೂಕ್ಷ್ಮ ಹಾಗೂ 62 ಅತಿಸೂಕ್ಷ್ಮ, 153 ಮತಗಟ್ಟೆಗಳಲ್ಲಿ ವೆಬ್‍ಕ್ಯಾಸ್ಟಿಂಗ್‍ಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

ಮತದಾರರು ತಮ್ಮ ಹಕ್ಕು ಚಲಾಯಿಸಲು ಚುನಾವಣಾ ಆಯೋಗ ನಿಗಧಿಪಡಿಸಿರುವ 11 ದಾಖಲಾತಿಗಳನ್ನು ಹಾಜರು ಪಡಿಸಬಹುದಾಗಿದೆ. ತರುವಿಹಾಳದ ಮತಗಟ್ಟೆ ಸಂಖ್ಯೆ 213 ಹಾಗೂ ಮಸ್ಕಿ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ರ‍್ಯಾಂಡಮೈಜೇಷನ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೈಕ್ರೋ ವೀಕ್ಷಕರು ತಮ್ಮ ಕಾರ್ಯಕ್ಕೆ ಸಿದ್ದಗೊಂಡಿದ್ದಾರೆ. ಮಸ್ಕಿ ಪಟ್ಟಣದಲ್ಲಿರುವ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಮತದಾನಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ನಿಯಮಾವಳಿ ಉಲ್ಲಂಘನೆ ಪ್ರಕರಣಗಳಲ್ಲಿ ₹1 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಅಂದಾಜು 355 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, 69 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಜನರು ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಲೌಡ್‍ಸ್ವೀಕರ್ ಬಳಕೆ ಇರುವುದಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳುವಂತಿಲ್ಲ. ಕೇವಲ ಮನೆ-ಮನೆಗೆ ತೆರಳಿ ಪ್ರಚಾರ ಕೈಗೊಳ್ಳಬಹುದಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಹೊರಗಿನಿಂದ ಬಂದವರು ಏಪ್ರಿಲ್‌ 15ರ ಸಂಜೆ 6 ಗಂಟೆಯ ನಂತರ ಈ ವಿಧಾನಸಭಾ ಕ್ಷೇತ್ರದಿಂದ ಹೊರಹೋಗಬೇಕು ಎಂದು ವಿವರಿಸಿದರು.

ಮತದಾನ ನಡೆಯುವ ವೇಳೆಯಲ್ಲಿ ಸಮೀಕ್ಷೆಯನ್ನು ನಿಷೇಧಿಸಲಾಗಿದೆ. ಅಧಿಕಾರಿಗಳನ್ನು ಹೊರತು ಪಡಿಸಿದಂತೆ ಮತಗಟ್ಟೆಯೊಳಗೆ ಸೆಲ್ಯೂಲರ್, ಕಾರ್ಡ್‍ಲೆಸ್ ಪೋನ್‍ಗಳನ್ನು ಕೊಂಡಯ್ಯುವಂತಿಲ್ಲ. ಮತದಾನ ಪೂರ್ಣಗೊಂಡ ಮತಯಂತ್ರಗಳನ್ನು ರಾಯಚೂರಿನ ಎಸ್‍ಆರ್‌ಪಿಎಸ್‌ ಪಿಯು ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಬಿಗಿ ಭದ್ರತೆಯಲ್ಲಿ ಇರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಮಾತನಾಡಿ, ಚುನಾವಣೆಯನ್ನು ಪಾರದರ್ಶಕವಾಗಿ ನಿರ್ವಹಿಸಲು ಅಗತ್ಯವಿರುವ ಬಂದೋಬಸ್ತ್ ಕೈಗೊಳ್ಳಲಾಗಿದೆ, 62 ಸೂಕ್ಷ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಡ್ ಕಾನ್‍ಸ್ಟೇಬಲ್ ಹಾಗೂ ಪೊಲೀಸ್ ಸಿಬ್ಬಂದಿ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ

ಪೊಲೀಸ್ ಪೇದೆ ಹಾಗೂ ಹೋಮ್ ಗಾರ್ಡ್‍ಗಳನ್ನು ನಿಯೋಜಿಸಲಾಗುವುದು. 71 ಎಎಸ್‍ಐ, 25 ಪಿಎಸ್‍ಐ, 7 ಸರ್ಕಲ್ ಇನ್‌ಸ್ಪೆಕ್ಟರ್ ಹಾಗು 3 ಡಿವೈಎಸ್‍ಪಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಪ್ ಹಾಗೂ ಚುನಾವಣಾಧಿಕಾರಿ ರಾಜಶೇಖರ ಡಂಬಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.