ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಬಿಜೆಪಿ ಟಿಕೆಟ್‌ಗಾಗಿ ಮುಸುಕಿನ ಗುದ್ದಾಟ!

ಪ್ರತಾಪಗೌಡ–ಬಸನಗೌಡ ನಡುವೆ ಮತ್ತಷ್ಟು ಕಗ್ಗಂಟಾದ ಒಗ್ಗಟ್ಟು
Last Updated 9 ಅಕ್ಟೋಬರ್ 2019, 20:22 IST
ಅಕ್ಷರ ಗಾತ್ರ

ರಾಯಚೂರು:ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರನ್ನು ತುಂಗಭದ್ರಾ ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾದರೆ ಬಿಜೆಪಿ ಟಿಕೆಟ್‌ ಕೈ ತಪ್ಪಲಿದೆ ಎಂಬುದರ ಸುಳಿವು ಸಿಕ್ಕಿದೆ.

ಬಸನಗೌಡ ಹಾಗೂ ಪಕ್ಷದೊಳಗಿನ ಬೆಂಬಲಿಗರು ಕಾಡಾ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ. ಇನ್ನೊಂದು ಕಡೆ, ‘ಪಕ್ಷದಲ್ಲಿ ಬಸನಗೌಡ ಅವರಿಗೆ ಯಾವುದೇ ಸ್ಥಾನ ಕೊಟ್ಟಿರಲಿಲ್ಲ. ಈಗ ಕಾಡಾ ಅಧ್ಯಕ್ಷರನ್ನಾಗಿ ಮಾಡಿರುವುದು ಒಳ್ಳೆಯದು’ ಎಂದು ಪ್ರತಾಪಗೌಡ ಪಾಟೀಲ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಟಿಕೆಟ್‌ ಪಡೆಯುವುದಕ್ಕಾಗಿ ಪ್ರತಾಪಗೌಡ ಮತ್ತು ಬಸನಗೌಡ ಅವರ ಮಧ್ಯ ಈಗಲೇ ಮುಸುಕಿನ ಗುದ್ದಾಟ ಮುಂದುವರಿದಿದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಈಚೆಗೆ ಪ್ರತ್ಯೇಕ ಸಭೆಗಳನ್ನು ಆಯೋಜಿಸಿದ್ದರು. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ, ಅವರಿಗೆ ಬೆಂಬಲ ವ್ಯಕ್ತಪಡಿಸಿ ಅನೇಕರು ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ. ಇದೀಗ ಬಿಜೆಪಿಯಲ್ಲೂ ಎರಡು ಬಣಗಳಾಗುತ್ತಿವೆ. ಬಿಜೆಪಿ ಪಕ್ಷ ನಿಷ್ಠೆ ಹಾಗೂ ಸಂಘ ಪರಿವಾರ ಸಿದ್ಧಾಂತ ನಿಷ್ಠೆ ಹೊಂದಿದವರು, ಪಕ್ಷದ ಪರವಾಗಿ ಯಾವುದೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದರೂ ಅವರಿಗೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ.

ಉಪಚುನಾವಣೆ ಘೋಷಣೆಯಾದರೆ ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧಿಸಿ ಶಾಸಕರಾಗಲು ಬಸನಗೌಡ ತುದಿಗಾಲಿನಲ್ಲಿ ಕಾಯುತ್ತಿದ್ದರು. ಆದರೆ, ಉಪಚುನಾವಣೆ ಘೋಷಣೆಯಾಗಿರುವ ವಿಧಾನಸಭೆ ಕ್ಷೇತ್ರಗಳ ಪಟ್ಟಿಯಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರವನ್ನು ಚುನಾವಣೆ ಆಯೋಗ ಕೈಬಿಟ್ಟಿದೆ. ಇದೀಗ ಹೈಕೋರ್ಟ್‌ ತೀರ್ಪಿನತ್ತ ದೃಷ್ಟಿ ಹರಿಸಿದ್ದ ಬಸನಗೌಡ ಅವರು ಕಾಡಾ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವುದಿಲ್ಲ ಎನ್ನುವ ಮಾತುಗಳನ್ನು ಬೆಂಬಲಿಗರು ಹೇಳುತ್ತಿದ್ದಾರೆ.

ಇದೀಗ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರೆಲ್ಲರೂ ಗೊಂದಲದಲ್ಲಿ ಮುಳುಗುವಂತಾಗಿದೆ. ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವ ನಾಯಕರಿಂದಾಗಿ ಬೆಂಬಲಿಗರು ಅಲೆಯುವಂತಾಗಿದೆ. ಪಕ್ಷ ಹಾಗೂ ವ್ಯಕ್ತಿ ನಿಷ್ಠೆಗಳೆರಡು ಪ್ರಶ್ನಾರ್ಥವಾಗಿವೆ. ಪಕ್ಷ ನಿಷ್ಠರಿಗಿಂತಲೂ ವ್ಯಕ್ತಿ ನಿಷ್ಠರಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುತ್ತಿರುವ ನಾಯಕರ ಸಂಖ್ಯೆಯೇ ಅಧಿಕವಾಗಿದೆ.

ಮಸ್ಕಿ ವಿಧಾನಸಭೆ ಕ್ಷೇತ್ರವು ಕುತೂಹಲ ಹೆಚ್ಚಿಸಿದ್ದು, ಉಪಚುನಾವಣೆ ನಡೆಯುತ್ತದೆಯೋ ಇಲ್ಲವೋ ಸ್ಪಷ್ಟವಾಗುತ್ತಿಲ್ಲ. ಇನ್ನೊಂದೆಡೆ, ಬಸನಗೌಡ ಅವರು ಹೈಕೋರ್ಟ್‌ಗೆ ಸಲ್ಲಿಸಿದ ದೂರಿನ ವಿಚಾರಣೆಯ ಆದೇಶ ಯಾವಾಗ ಬರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಇಬ್ಬರು ನಾಯಕರ ಮಧ್ಯ ರಾಜಿ ಏರ್ಪಡುತ್ತದೆ ಎಂಬುದು ಅಸ್ಪಷ್ಟ.

ತೆರೆಮರೆಯಲ್ಲಿ ಬಸನಗೌಡ ಅವರ ಮನವೊಲಿಸುವ ಯತ್ನಗಳು ನಡೆಯುತ್ತಲೇ ಇವೆ. ಒಂದು ವೇಳೆ ಕಾಡಾ ಅಧ್ಯಕ್ಷರಾಗಲು ನಿರಾಕರಿಸಿದರೆ, ಏನಾಗಬಹುದು ಎಂಬುದು ಸದ್ಯಕ್ಕೆ ಕುತೂಹಲ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT