ಶುಕ್ರವಾರ, ಮೇ 7, 2021
24 °C
ಕಾಂಗ್ರೆಸ್‌ ಮುಖಂಡರಿಂದ ಚುನಾವಣಾಧಿಕಾರಿ ರಾಜಶೇಖರ ಡಂಬಳಗೆ ಮನವಿ

ನ್ಯಾಯಸಮ್ಮತ ಚುನಾವಣೆ ನಡೆಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ‘ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ನಡೆಸಲು ಮುಂದಾಗಿದೆ. ಚುನಾವಣೆ ಆಯೋಗವು ಇದಕ್ಕೆ ಅವಕಾಶ ನೀಡದೆ ನ್ಯಾಯಸಮ್ಮತ ಚುನಾವಣೆ ನಡೆಸಲು ಮುಂದಾಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂದೀಶ ರೆಡ್ಡಿ ಸೇರಿದಂತೆ ಬಿಜೆಪಿಯ ಪ್ರಮುಖರು ಕ್ಷೇತ್ರದಲ್ಲಿ ಅಕ್ರಮವಾಗಿ ಗೆಲ್ಲಲು ಏನು ಬೇಕು ಅದನ್ನು ಬಿಜೆಪಿ ಮಾಡುತ್ತಿದೆ. ಮತದಾರರಿಗೆ ಬಹಿರಂಗವಾಗಿ ಹಣ ಹಂಚುತ್ತಿದ್ದಾರೆ. ಹತ್ತಾರು ಹಳ್ಳಿಗಳಲ್ಲಿ ಹಣ ಹಂಚುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದ್ದರೂ ಸಹ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ’ ಎಂದು ಆರೋಪಿಸಿದರು.

‘ಚುನಾವಣೆ ಆಯೋಗದ ಅಡಿಯಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತನೆ ಮಾಡುತ್ತಿದ್ದಾರೆ. ಇಷ್ಟೊತ್ತಿಗಾಗಲೇ ಚುನಾವಣೆ ಕಣದಿಂದ ಪ್ರತಾಪಗೌಡ ಪಾಟೀಲ ಅವರನ್ನು ಕಣದಿಂದ ಅನರ್ಹಗೊಳಿಸಬೇಕಾಗಿತ್ತು‘ ಎಂದರು.

‘5 (ಎ) ಕಾಲುವೆ ಯೋಜನೆ ಜಾರಿ ಬಗ್ಗೆ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರತಾಪಗೌಡ ಪಾಟೀಲ ನನ್ನಲ್ಲಿ ಬಂದು ಪ್ರಸ್ತಾಪ ಮಾಡಲಿಲ್ಲ. ರೈತರ ಹೋರಾಟಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ವಿಧಾನಸಭೆಯಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಯೋಜನೆಯನ್ನು ಜಾರಿಗೊಳಿಸುತ್ತೇವೆ‘ ಎಂದರು.

‘ಇದೇ ಮೊದಲ ಬಾರಿಗೆ 5 (ಎ) ಕಾಲುವೆ ವ್ಯಾಪ್ತಿಯ 58 ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರತಾಪಗೌಡ ಪಾಟೀಲ ವಿರುದ್ಧ ಜನಾಂದೋಲನ ನಡೆದಿದೆ‘ ಎಂದರು.

‘ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮತದಾರರು ಮಸ್ಕಿ ಸೇರಿದಂತೆ ಮೂರು ಉಪ ಚುನಾವಣೆಯಲ್ಲಿ ಜಯಗಳಿಸಲಿದೆ‘ ಎಂದು ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮುಖಂಡ ಉಗ್ರಪ್ಪ, ಯೂತ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಎನ್.ಎಸ್. ಬೋಸರಾಜ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಇತರರು ಇದ್ದರು.

ಸಬ್ ಇನ್‌ಸ್ಪೆಕ್ಟರ್ ಅಮಾನತಿಗೆ ಆಗ್ರಹ

ಕ್ಷೇತ್ರದ ಮಟ್ಟೂರು ಗ್ರಾಮದಲ್ಲಿ ಎರಡು ಚೀಲಗಳಲ್ಲಿ ಹಣ ತಂದು ಮತದಾರರಿಗೆ ಹಂಚುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದಗಲ್ ಸಬ್ ಇನ್‌ಸ್ಪೆಕ್ಟರ್ ಡಾಕೇಶ ಎಂಬುವರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಒತ್ತಾಯಿಸಿದರು.

ಮತದಾರರಿಗೆ ಹಣ ಹಂಚುತ್ತಿದ್ದ ಸಂದರ್ಭದಲ್ಲಿ ನಮ್ಮ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಿಡಿದಿದ್ದಾರೆ. ಆದರೆ, ಅಲ್ಲಿದ್ದ ಸಬ್ ಇನ್‌ಸ್ಪೆಕ್ಟರ್ ಡಾಕೇಶ ಒಂದು ಚೀಲ ಹಣವನ್ನು ಬಿಜೆಪಿ ಕಾರ್ಯಕರ್ತರ ಜೊತೆ ವಾಪಾಸು ಕಳಿಸಿದ್ದಾರೆ. ಮತ್ತೊಂದು ಚೀಲ ಹಣವನ್ನು ಚುನಾವಣಾಧಿಕಾರಿ ತೆಗೆದುಕೊಂಡು ಬಂದಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತ ವಿಡಿಯೊ ಮಾಡಿದ್ದು ಸಬ್ ಇನ್‌ಸ್ಪೆಪೆಕ್ಟರ್ ಹುಡುಗನಿಗೆ ಬೆದರಿಸಿ ಮೊಬೈಲ್‌ನಲ್ಲಿ ಮಾಡಿದ್ದ ವಿಡಿಯೊವನ್ನು ಡಿಲೀಟ್ ಮಾಡುವ ಮೂಲಕ ಸಾಕ್ಷಿ ನಾಶಪಡಿಸಿದ್ದಾರೆ.

ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ನೀಡುತ್ತೇವೆ. ಕ್ರಮ ಕೈಗೊಳ್ಳದಿದ್ದಾರೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು