ಜವಾಬ್ದಾರಿ ಅರಿತು ಕೆಲಸ ಮಾಡಿ: ಅಧಿಕಾರಿಗಳಿಗೆ ಶಾಸಕ ಬಸನಗೌಡ ಸೂಚನೆ

ಮಸ್ಕಿ: ‘ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಜವಾಬ್ದಾರಿ ಅರಿತು ಕೆಲಸ ಮಾಡಬೇಕು‘ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ನೀಡುತ್ತಿರುವ ಉತ್ತರಕ್ಕೆ ಬೇಸರ ವ್ಯಕ್ತಪಡಿಸಿ, ಈ ರೀತಿ ಹೇಳಿದರು.
ಮಸ್ಕಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶಿವಶರಣ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಬಸವನಗೌಡ ಅವರು, ‘ರೈತರ ಕಷ್ಟಗಳಿಗೆ ಸ್ಪಂದಿಸಬೇಕಾದ ನೀವು ರೈತರಿಗೆ ಕಷ್ಟಕೊಡುತ್ತಿದ್ದೀರಿ. ಕಮೀಷನ್ ಏಜೆಂಟರ್ ಮೂಲಕ ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು ಇದು ಮುಂದುವರೆದರೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಎಚ್ಚರಿಸಿದರು.
‘ಮಟ್ಟೂರು ಗ್ರಾಮದಲ್ಲಿ ನಕಲಿ ಗೊಬ್ಬರ ದೊರೆತರೂ ಗೊಬ್ಬರ ಸಂಗ್ರಹಿಸಿಟ್ಟಿದ್ದ ಗೋದಾಮು ಮಾಲೀಕರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ನಿಮ್ಮ ಕಣ್ಣು ಮುಂದೆಯೇ ನಕಲಿ ಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದರೂ ಮೌನ ವಹಿಸಿದ್ದೀರಿ. ಇದು ಮುಂದುವರೆದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು‘ ಎಂದರು.
ಸರ್ಕಾರ ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸುತ್ತಿದೆ. ಆದರೆ, ಒಂದು ವಾರದಲ್ಲಿಯೇ ಆ ರಸ್ತೆಗಳು ಹಾಳಾಗುತ್ತಿವೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಳಗಾನೂರು, ನಾರಾಯಣ ನಗರ ಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗೆ ಕೊಚ್ಚಿ ಹೋಗಿ ತಿಂಗಳಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದರು.
‘ಕೆಲಸ ಮಾಡದ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ ಮಾಡುತ್ತಿದ್ದೀರಿ. ಸರ್ಕಾರದ ಹಣ ಅಂದರೆ, ಏನು ತಿಳಿದುಕೊಂಡಿರಿ‘ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಸ್ಕಿ ಪಟ್ಟಣದ ಸ್ವಚ್ಛತೆಗೆ ಪುರಸಭೆ ಮುಖ್ಯಾಧಿಕಾರಿ ಗಮನ ಕೊಡಬೇಕು ಎಂದರು.
ತಾಲ್ಲೂಕಿನ ವಿವಿಧ ತಾಂಡಾಗಳಲ್ಲಿನ ಸಿಸಿ ರಸ್ತೆಗಳು ಹಾಳಾಗಿವೆ. ಕಳಪೆ ಕಾಮಗಾರಿಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವುಗಳ ಜಂಟಿ ತನಖೆ ಮಾಡಿದ ನಂತರವಷ್ಟೆ ಬಿಲ್ ಪಾವತಿ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗೆ ಸೂಚಿಸಿದರು.
ಬೋಗಾವತಿ ಹಾಗೂ 13 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಆರಂಭವಾಗಿ 12 ವರ್ಷ ಕಳೆದರೂ ಇನ್ನೂ ಒಂದು ಗ್ರಾಮಕ್ಕೆ ನೀರು ಕೊಡಲಾಗಿಲ್ಲ ಅಂದರೆ ಏನು ಅರ್ಥ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ತಹಶೀಲ್ದಾರ್ ಕವಿತಾ ಆರ್. ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ. ಟಿ.ರೋಹಿಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಪವನಕುಮಾರ, ಎಪಿಎಂಸಿ ಅಧ್ಯಕ್ಷ ಮಲ್ಲರೆಡ್ಡೆಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ ಇದ್ದರು.
‘ಕೋವಿಡ್ ಮಾರ್ಗಸೂಚಿ ಪಾಲಿಸಿ’
ಕೊವಿಡ್ ಮೂರನೇ ಅಲೆ ತಡೆಗಟ್ಟುವ ಸಲುವಾಗಿ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ಸೂಚಿಸಿದರು.
ಕೊರೊನಾ ಎರಡನೇ ಅಲೆಯಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಅನಾಥವಾದ ಮಕ್ಕಳಿದ್ದರೆ ಕೂಡಲೇ ವರದಿ ಸಲ್ಲಿಸಿ. ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮುಂಜಾಗೃತ ಕ್ರಮವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.