ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮೂಹಿಕ ವಿವಾಹ ಬಡವರಿಗೆ ವರದಾನ’ 

ಅಂಬೇಡ್ಕರ್‌, ಗೌತಮಬದ್ಧ, ಬಸವಣ್ಣ ಜಯಂತ್ಯುತ್ಸವ
Last Updated 26 ಏಪ್ರಿಲ್ 2019, 13:49 IST
ಅಕ್ಷರ ಗಾತ್ರ

ಸಿಂಧನೂರು: ಬಡತನದಿಂದ ಕುಟುಂಬ ನಿರ್ವಹಣೆ ದುಸ್ತರವಾಗಿರುವ ಸಂದರ್ಭದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪಾಲಿಗೆ ವರದಾನವಾಗಿವೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವವರು ಶಿಸ್ತು, ಸಂಯಮದಿಂದ ಜೀವನ ಸಾಗಿಸಿಬೇಕು ಎಂದು ಕೆಪಿಸಿಸಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಕರಿಯಪ್ಪ ಸಲಹೆ ನೀಡಿದರು.

ನಗರದ ಯಮನೂರಪ್ಪ ದರ್ಗಾದ ಆವರಣದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಹಾಗೂ ಬಸವಣ್ಣ ಮತ್ತು ಗೌತಮಬದ್ಧ ಅವರ ಜಯಂತ್ಯುತ್ಸವದ ಅಂಗವಾಗಿ ದಲಿತ ಮಹಾಸಭಾ ತಾಲ್ಲೂಕು ಘಟಕದ ನೇತೃತ್ವದಲ್ಲಿ ಶುಕ್ರವಾರ ನಡೆದ 61 ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಜನರು ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಮೆರೆಸಲು ಆಡಂಬರ ಪ್ರದರ್ಶಿಸುತ್ತಾ ಅದ್ಧೂರಿ ವಿವಾಹ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿ ಪರಿತಪಿಸುತ್ತಿದ್ದಾರೆ. ಇದು ಕೊನೆಯಾಗಬೇಕು, ಸರಳ ಸಾಮೂಹಿಕ ವಿವಾಹಗಳನ್ನು ಮಾಡಿಕೊಳ್ಳುವ ಮೂಲಕ ಬದುಕನ್ನು ಸುಂದರಗೊಳಿಸಬೇಕು ಎಂದರು.

61 ಜೋಡಿ ಸಾಮೂಹಿಕ ವಿವಾಹಗಳ ಮೂಲಕ ಹೆಣ್ಣು ಹೆತ್ತವರ ಹೊಟ್ಟೆಯನ್ನು ತಣ್ಣಗೆ ಮಾಡುವ ಕಾರ್ಯವನ್ನು ದಲಿತ ಮಹಾಸಭಾ ಕಳೆದ ಐದು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ತಾಳ್ಮೆ, ಹೊಂದಾಣಿಕೆಯಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ವರದಕ್ಷಿಣೆಯಂತಹ ಸಮಸ್ಯೆ ಇನ್ನೂ ಜೀವಂತವಾಗಿದೆ. ಸಾಮೂಹಿಕ ವಿವಾಹಗಳಿಂದ ಬಡವರು ಮತ್ತು ಮಧ್ಯಮ ವರ್ಗದವರು ಸ್ವಲ್ಪ ಮಟ್ಟಿಗಾದರೂ ನೆಮ್ಮದಿ ಪಡೆಯುವಂತಾಗಿದೆ ಎಂದು ಹೇಳಿದರು.

ವೆಂಕಟಗಿರಿ ಕ್ಯಾಂಪಿನ ಸಿದ್ಧರಾಮ ಶರಣರು ಮಾತನಾಡಿ, ಸರಳ ಸಾಮೂಹಿಕ ವಿವಾಹಗಳು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು. ನಗರ ಪ್ರದೇಶಗಳಲ್ಲೂ ಇಂತಹ ಮದುವೆಗಳಾದಾಗ ಅನಗತ್ಯ ಖರ್ಚುಗಳನ್ನು ತಡೆಗಟ್ಟಲು ಸಾಧ್ಯವಿದೆ. ಶ್ರೀಮಂತರು, ಬಡವರೆಂಬ ಭೇದವನ್ನು ಬದಿಗೊತ್ತಿ ಸರಳ ರೀತಿಯಲ್ಲಿ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.

ದಲಿತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಲಗುಮಪ್ಪ ಗೊರೇಬಾಳ, ಪ್ರಧಾನ ಕಾರ್ಯದರ್ಶಿ ಚನ್ನಬಸವ ಅಮೀನಗಡ, ಸಮಿತಿ ವಕ್ತಾರ ನರಸಪ್ಪ ಕಟ್ಟಿಮನಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರ ನಂದಿಹಾಳ, ಉಪಾಧ್ಯಕ್ಷ ಮಹಾಂಕಾಳೆಪ್ಪ, ಮುಖಂಡರಾದ ಮರಿಯಪ್ಪ ವಕೀಲ, ಎಚ್.ಎನ್.ಬಡಿಗೇರ್, ಅಂದಪ್ಪ ಮಲ್ಕಾಪುರ, ರಾಮಣ್ಣ ಗೊರೇಬಾಳ, ಅಯ್ಯಪ್ಪ ಮಲ್ಲಾಪೂರು, ರಮೇಶ ಕುನ್ನಟಗಿ, ನಿರುಪಾದಿ ಸಾಸಲಮರಿ, ಅಯ್ಯಪ್ಪ ವಕೀಲ, ಮರಿಯಪ್ಪ, ನಿಂಗಪ್ಪ ಸಾಸಲಮರಿ, ಬಸವರಾಜ, ಅಮರೇಶಪ್ಪ ಮೈಲಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT