ಶುಕ್ರವಾರ, ಆಗಸ್ಟ್ 19, 2022
22 °C
ಮಸ್ಕಿ: ಅಧಿಕಾರಿಗಳೊಂದಿಗೆ ಸೋಮನಾಥ ನಗರ ನಿವಾಸಿಗಳ ಸಭೆ

ಹಕ್ಕುಪತ್ರ ವಿತರಣೆಗೆ ಕ್ರಮ: ಶಾಸಕ ಬಸನಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ‘ನೀರಾವರಿ ಇಲಾಖೆಗೆ ಸೇರಿದ್ದು ಎನ್ನಲಾದ ಸೋಮನಾಥ ನಗರದ ಜಾಗದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ವಾಸ ಮಾಡುತ್ತಿರುವ ನೂರಾರು ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಶೀಘ್ರ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.

ಪಟ್ಟಣದ ಸೋಮನಾಥ ನಗರದಲ್ಲಿ ಶುಕ್ರವಾರ ನಡೆದ ನಗರದ ನಿವಾಸಿಗಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೋಮನಾಥ ನಗರಕ್ಕೆ ಕಳೆದ ಮೂವತ್ತು ವರ್ಷಗಳಿಂದ ನೀರು, ಶಾಲೆ, ಕಾಂಕ್ರೀಟ್ ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ನೀರಾವರಿ ಇಲಾಖೆಗೆ ಸೇರಿದ್ದು ಈ ಜಾಗ ಎಂಬ ಉದ್ದೇಶದಿಂದ ಇದುವರೆಗೂ ಇಲ್ಲಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ ಎಂದರು.

ನೀರಾವರಿ ಇಲಾಖೆಗೆ ಸೇರಿದ ಸುಮಾರು 20 ಎಕರೆ ಜಾಗವನ್ನು ಪುರಸಭೆಯಿಂದ ಖರೀದಿಸಿ ಹಕ್ಕು ಪತ್ರಗಳನ್ನು ನೀಡಬೇಕು. ಪುರಸಭೆಯವರು ಹೆಚ್ಚು ಕಾಳಜಿ ವಹಿಸಬೇಕಾಗಿತ್ತು. ಇನ್ನೂ 15 ದಿನಗಳ ಒಳಗಾಗಿ ಈ ನಗರದ ಸೆಟ್ ಲೈಟ್ ಸರ್ವೆ ಮಾಡಿಸಿ ನೀರಾವರಿ ಇಲಾಖೆಗೆ ಪ್ರಸ್ಥಾವ ಕಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ವರ್ಷದಲ್ಲಿ ಮೂರು ಮೂರು ಜನ ಜಿಲ್ಲಾಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡುತ್ತಿದ್ದರಿಂದ ಮಸ್ಕಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಕುಟಿಂತವಾಗಿದೆ‌. ಈಗ ಬಂದಿರುವ ಜಿಲ್ಲಾಧಿಕಾರಿಯ ಜೊತೆ ಹಕ್ಕುಪತ್ರ ವಿತರಣೆ ಸಂಬಂಧ ಚರ್ಚೆ ಮಾಡಲಾಗಿದ್ದು ಸೋಮನಾಥ ನಗರದ ಜೊತೆಗೆ ಮಿನಿ ವಿಧಾನಸೌಧ ಹಾಗೂ ಇತರೆ ತಾಲ್ಲೂಕು ಕಚೇರಿಗಳ ನಿರ್ಮಾಣಕ್ಕೆ ಬೇಕಾದ ನೂರು ಎಕರೆ ಜಾಗವನ್ನು ನೀರಾವರಿ ಇಲಾಖೆಯಿಂದ ಪಡೆಯುವ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ ಎಂದರು.

ತಹಶೀಲ್ದಾರ್ ಕವಿತಾ ಆರ್. ನೀರಾವರಿ, ನಿಗಮದ ಅಧಿಕ್ಷಕ ಎಂಜಿನಿಯರ್‌ ಪ್ರಕಾಶ ರಾವ್. ಎಇಇ ದಾವುದ್, ಪುರಸಭೆ ಮ್ಯಾನೆಜರ್ ಸತ್ಯನಾರಾಯಣ , ಪುರಸಭೆ ಸದಸ್ಯರಾದ ಮಲ್ಲಯ್ಯ ಅಂಬಾಡಿ, ರಮೇಶ ಗುಡಿಸಲಿ, ಮುಖಂಡ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ, ಸುರೇಶ ಅಂತರಗಂಗಿ, ರಾಜು ಟೇಲರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸೋಮನಾಥ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.

ಮಾತಿನ ಚಕಮಕಿ

ಮಸ್ಕಿ: ಸೋಮನಾಥ ನಗರದ ನಿವಾಸಿಗಳ ಹಕ್ಕು ವಿತರಣೆ ಸಂಬಂಧ ತಹಶೀಲ್ದಾರ್ ಕವಿತಾ ಆರ್. ಹಾಗೂ ಹೋರಾಟ ಸಮಿತಿ ಮುಖಂಡ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ ನಡುವೆ ಮಾತಿನ ಚಕಮಕಿ‌ ನಡೆಯಿತು.

ಹಕ್ಕು ಪತ್ರ ವಿತರಣೆ ಸಂಬಂಧ ತಾಲ್ಲೂಕು ಆಡಳಿತ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಮುಖಂಡ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಕವಿತಾ. ಆರ್. ಅವರು,  ಹಕ್ಕುಪತ್ರ ನೀಡುವುದು ಪುರಸಭೆಗೆ ಸೇರಿದ್ದು. ಈ ಜಾಗಕ್ಕೆ ಪರ್ಯಾಯ ಜಾಗವನ್ನು ನೀರಾವರಿ ಇಲಾಖೆ ಕೇಳಿದರೆ ಅದನ್ನು ಒದಗಿ ಕೊಡುವ ಜವಾಬ್ದಾರಿ ತಾಲ್ಲೂಕು ಆಡಳಿತದ್ದು ಎಂದರು.

ಒಂದು ಹಂತದಲ್ಲಿ ತಹಶೀಲ್ದಾರ್ ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕ ಆರ್.ಬಸನಗೌಡ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.