ಮಂಗಳವಾರ, ಏಪ್ರಿಲ್ 13, 2021
32 °C
ರಾಮ ನವಮಿಯಂದು ಜಾತ್ರಾ ಮಹೋತ್ಸವ: ನೂರಾರು ಭಕ್ತರು ಭಾಗಿ

21ರಂದು ತ್ರಯಂಭಕೇಶ್ವರ ಜಾತ್ರೆ

ಮಂಜುನಾಥ ಎನ್. ಬಳ್ಳಾರಿ Updated:

ಅಕ್ಷರ ಗಾತ್ರ : | |

Prajavani

ಕವಿತಾಳ: ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಪಟ್ಟಣದ ತ್ರಯಂಭಕೇಶ್ವರ ದೇವಸ್ಥಾನಕ್ಕೆ ಅಂದಾಜು ಎಂಟು ನೂರು ವರ್ಷಗಳ ಇತಿಹಾಸ ಇದೆ.

ಐತಿಹಾಸಿಕ ಮಹತ್ವವನ್ನು ಹೊಂದಿದ ಇಡೀ ಭರತ ಖಂಡದಲ್ಲಿಯೇ ಒಂದೇ ಪಾಣಿ ಬಟ್ಟಲಿನಲ್ಲಿ ಮೂರು ಲಿಂಗುಗಳಿರುವ ದೇವಸ್ಥಾನಗಳು ಕೇವಲ ಎರಡು ಇದ್ದು ಒಂದು ಮಹಾರಾಷ್ಟ್ರದ ನಾಸಿಕದಲ್ಲಿ ಇನ್ನೊಂದು ಕವಿತಾಳದಲ್ಲಿ ಎನ್ನುತ್ತವೆ ಇತಿಹಾಸದ ಪುಟಗಳು.

ಯುಗಾದಿ ಪಾಢ್ಯದಂದು ಬೆಳಿಗ್ಗೆ ಸೂರ್ಯನ ಕಿರಣಗಳು ನೇರವಾಗಿ ಗರ್ಭ ಗುಡಿಯಲ್ಲಿನ ಮೂರ್ತಿಯ ಮೇಲೆ ಬೀಳುವಂತೆ ನಿರ್ಮಿಸಿರುವುದು ಈ ಮಂದಿರದ ವಿಶೇಷ.

ಕಳಿಂಗ ಮಾದರಿಯ ಕೂಡು ವಿಧಾನದಲ್ಲಿ ನಿರ್ಮಾಣವಾದ ದೇವಸ್ಥಾನದಲ್ಲಿ ಕ್ರಿ.ಶ.1217 ರಲ್ಲಿ ತ್ರಯಂಭಕೇಶ್ವರನ ಪ್ರತಿಷ್ಠಾಪನೆಯಾದ ಬಗ್ಗೆ ಶಾಸನಗಳಲ್ಲಿ ಉಲ್ಲೇಖ ಇದೆ.

ಸೇವಣನೆಂಬ ಅರಸನ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶದಲ್ಲಿ ಶಂಕರ ರಾಶಿ ಪಂಡಿತ ಎನ್ನುವವರು ಸ್ಥಾನಾಚಾರ್ಯರಾಗಿದ್ದರು. ಆಗ ಊರಿಗೆ ಸೂರ್ಯ ಗ್ರಹಣ ದೋಷ ಉಂಟಾಯಿತೆಂದು ಅದರ ನಿವಾರಣೆಗಾಗಿ ಪ್ರತಿಯೊಬ್ಬರಿಂದಲೂ ಒಂದೊಂದು ಗದ್ಯಾಣವನ್ನು ಸಂಗ್ರಹಿಸಿ ದೇವಸ್ಥಾನ ನಿರ್ಮಿಸಲಾಗಿದೆ ಎನ್ನುವ ಮಾಹಿತಿ ಇದೆ.

ನೂರು ಶೆಟ್ಟಿ ಗುತ್ತರು ಎನ್ನುವ ಮನೆತನದ ರಾಚಶೆಟ್ಟಿ ಹಾಗೂ ಬಾಚಶೆಟ್ಟಿ ಎನ್ನುವ ಸಹೋದರರು ಮಂದಿರದ ನಂದಾದೀವಿಗೆ ಸಲುವಾಗಿ ಗಾಣವನ್ನು ದತ್ತಿ ಕೊಟ್ಟಿದ್ದಾರೆ ಹಾಗೂ ಹೂವು ತೋಟಕ್ಕಾಗಿ ಭೂಮಿಯನ್ನು ದಾನ ನೀಡಿದ ಬಗ್ಗೆ ಶಾಸನಗಳಿಂದ ತಿಳಿಯುತ್ತದೆ.

ಕರನಾಮ ಸಂವತ್ಸರದಿಂದ ಜಾತ್ರೆ ನಡೆಯುತ್ತಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಯುಗಾದಿ ಪಾಢ್ಯದಿಂದ 9 ದಿನಗಳಿಗೆ ರಾಮ ನವಮಿಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ. ಉಚ್ಛಾಯಿ ಹಾಗೂ ರಥೋತ್ಸವ ಜರುಗುತ್ತದೆ. ಎಲ್ಲಾ ಜಾತಿ ಜನಾಂಗದವರು ಜಾತ್ರೆಯಲ್ಲಿ ಪಾಲ್ಗೊಳುತ್ತಾರೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ಜಾತ್ರೆಗೆ ಆಗಮಿಸುತ್ತಾರೆ. ವಾರಗಳ ಕಾಲ ಜಾನುವಾರು ಜಾತ್ರೆ ನಡೆಯುತ್ತದೆ.

ಶಿವರಾತ್ರಿ ಮತ್ತು ಯುಗಾದಿಯಂದು ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳರಾತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು.

ಕಳೆದ ವರ್ಷ ಲಾಕ್‍ ಡೌನ್‍ ಘೋಷಣೆಯಿಂದ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷವಾದರೂ ಜಾತ್ರೆ ಸುಗಮವಾಗಿ ನಡೆಯಲಿ ಎನ್ನುವುದು ಭಕ್ತರ ಆಶಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು