ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡ ದುರಸ್ತಿ:ಹೊಸ ಪ್ರಸ್ತಾವಕ್ಕೆ ಸೂಚನೆ

ಮಾಸಿಕ ಕೆಡಿಪಿ ಸಭೆ; ಎಸ್‌ಎಸ್‌ಎಲ್‌ಸಿ ಫಲಿತಾಂಶ, ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ
Last Updated 19 ಜೂನ್ 2018, 12:35 IST
ಅಕ್ಷರ ಗಾತ್ರ

ಗದಗ: ‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಮತ್ತು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ’ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಸೋಮವಾರ ಇಲ್ಲಿನ ನಡೆದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಸಕ್ತ ಸಾಲಿನಲ್ಲಿ ತೀವ್ರವಾಗಿ ಕುಸಿತ ಕಂಡಿದೆ. ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ. ಇದಕ್ಕೆ ಅವಕಾಶ ನೀಡಬಾರದು. ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಾಲಕರು ಜತೆಯಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಬೇಕು’ ಎಂದರು.

‘ತಾಲ್ಲೂಕಿನ ಮಹಾಲಿಂಗಪುರದಲ್ಲಿ ನಿಯೋಜಿತ ಶಿಕ್ಷಕರು, ಶಾಲೆಗೆ ನಿಯಮಿತವಾಗಿ ಬರುತ್ತಿಲ್ಲ ಎನ್ನುವ ದೂರುಗಳಿವೆ. ಇಲ್ಲಿ ಮಾತ್ರವಲ್ಲ, ಜಿಲ್ಲೆಯ ಯಾವುದೇ ಶಾಲೆಯಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗದಿದ್ದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ಎಂದು ನಿರ್ದೇಶನ ನೀಡಿದರು.

‘ಮಳೆ ಆರಂಭವಾಗಿದ್ದು, ಕೆಲವು ಕಡೆ ದುರಸ್ತಿ ಇಲ್ಲದೆ, ಶಾಲಾ ಕಟ್ಟಡಗಳು ಕುಸಿಯುವ ಸಂಭವವಿದೆ. ಇಂತಹ ಗುರುತಿಸಲಾದ ಶಾಲಾ ಕಟ್ಟಡಗಳನ್ನು ನೆಲಸಮ ಮಾಡಲು ಹಾಗೂ ಶಾಲಾ ಕೊಠಡಿಗಳ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ಅಂಗಡಿ ಸಭೆಯ ಗಮನಕ್ಕೆ ತಂದರು.

‘ಜಿಲ್ಲೆಯಲ್ಲಿ 157ಕ್ಕೂ ಹೆಚ್ಚು ಶಾಲಾ ಕಟ್ಟಡಗಳ ದುರಸ್ತಿಗೆ ರಾಜ್ಯ ಸರ್ಕಾರ ಈ ಕುರಿತು ಹೊರಡಿಸಿದ ನಿರ್ದೇಶನದ ಅನ್ವಯ ಪ್ರಸ್ತಾವನೆ ಸಲ್ಲಿಸಲು’ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಸೂಚಿಸಿದರು.

‘ಜಿಲ್ಲೆಯ ಕಪ್ಪತಗುಡ್ಡ ಹುಲಕೋಟಿ, ಮುಂತಾದೆಡೆ ಮಸಾರಿ ಜಮೀನಿನಲ್ಲಿ ಕಡಿಮೆ ನೀರಿನಲ್ಲಿ ಗೋಡಂಬಿ ಬೆಳೆ ಬೆಳೆಯಲು ಸಾಕಷ್ಟು ಅವಕಾಶ ಇದೆ. ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಸೌಲಭ್ಯವಿದೆ. ಆಸಕ್ತ ರೈತರು ಇದರ ಪ್ರಯೋಜನ ಪಡೆಯ ಬಹುದು’ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರದೀಪ ತಿಳಿಸಿದರು.

ಅಂತರ ರಾಷ್ಟ್ರೀಯ ಯೋಗ ದಿನಾಚರಣೆ

ಗದಗ ಬೆಟಗೇರಿ ನಗರದಲ್ಲಿ ಜೂನ್ 21ರಂದು ಬೆಳಿಗ್ಗೆ 6 ಗಂಟೆಗೆ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ, ಭೀಷ್ಮಕೆರೆಯ ಬಸವೇಶ್ವರ ಮೂರ್ತಿ ಆವರಣದಲ್ಲಿ ಯೋಗಾಸನ ಕಾರ್ಯಕ್ರಮ ನಡೆಯಲಿದೆ. ಜೂನ್‌ 20ರಂದು ಬೆಳಿಗ್ಗೆ 9.30ಕ್ಕೆ ಬೆಟಗೇರಿಯ ಬಸ್ ನಿಲ್ದಾಣದಿಂದ ಮುನ್ಸಿಪಲ್ ಕಾಲೇಜಿನವರೆಗೆ ಯೋಗ ಜಾಗೃತಿ ಜಾಥಾ ನಡೆಯಲಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ ಸಭೆಗೆ ತಿಳಿಸಿದರು.

‘ಜಿಲ್ಲೆಯ ಎಲ್ಲ ಗ್ರಾಮೀಣ ಜನವಸತಿಗೆ ನದಿ ನೀರು ಪೂರೈಕೆ ಯೋಜನೆಯಡಿ ಗದಗ ಶಿರಹಟ್ಟಿ ಮುಂಡರಗಿಗೆ ತುಂಗಭದ್ರಾ ನದಿಯಿಂದ 212 ಗ್ರಾಮಗಳ ಪೈಕಿ 180 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಮಲಪ್ರಭಾ ನದಿಯಿಂದ ನರಗುಂದ ತಾಲೂಕಿನ ಏಳು ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿದ್ದು ರೋಣ ತಾಲೂಕಿನ ಎಲ್ಲ ಗ್ರಾಮಗಳಿಗೆ ಜುಲೈ ಅಂತ್ಯಕ್ಕೆ ನೀರು ಪೂರೈಕೆ ಪೂರ್ಣಗೊಳ್ಳಲಿದೆ’ ಎಂದು ಗ್ರಾಮೀಣ ನೀರು ಪೂರೈಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎಸ್.ಸಿ. ಮಹೇಶ, ಮುಖ್ಯ ಯೋಜನಾಧಿಕಾರಿ ಬಿ.ಆರ್.ಪಾಟೀಲ, ಇದ್ದರು.

ಕೆರೆಗಳನ್ನು ಅಭಿವೃದ್ಧಿಪಡಿಸಿ, ಮೀನು ಸಾಕಾಣಿಕೆಗೆ ಅವಕಾಶ ಕಲ್ಪಿಸಿದಲ್ಲಿ ಗ್ರಾಮ ಪಂಚಾಯ್ತಿಗಳ ವರಮಾನ ಹೆಚ್ಚಳವಾಗಲಿದೆ
– ಮಂಜುನಾಥ ಚವ್ಹಾಣ, ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT