ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳನ್ನು ಗುರುತಿಸಲು ಸಚಿವ ಸಿ.ಟಿ. ರವಿ ಸೂಚನೆ

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅಧ್ಯಕ್ಷೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ
Last Updated 6 ನವೆಂಬರ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯೊಂದನ್ನು ಶೀಘ್ರ ಸಿದ್ಧಪಡಿಸಿ ಕಳುಹಿಸುವಂತೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗೆ ಬುಧವಾರ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

‘ಜಿಲ್ಲೆಯಲ್ಲಿ ಸದ್ಯ ಮಲಯಾಬಾದ್‌ ಕೋಟೆ, ರಾಯಚೂರು ಕೋಟೆ ಹಾಗೂ ಮುದಗಲ್‌ ಕೋಟೆಗಳನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತೆ ಏಳು ತಾಣಗಳ ಪಟ್ಟಿ ಮಾಡಿದ್ದಾರೆ. ‍ಪ್ರವಾಸಿ ತಾಣಗಳು ಇನ್ನೂ ಇವೆ ಎಂಬುದರ ಮಾಹಿತಿಯನ್ನು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ತ್ವರಿತವಾಗಿ ಎಲ್ಲ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಪ್ರವಾಸಿ ತಾಣಗಳನ್ನು ಪಟ್ಟಿಯೊಂದನ್ನು ಸಿದ್ಧಪಡಿಸಿ ಕಳುಹಿಸಬೇಕು’ ಎಂದರು.

ಸರಾಸರಿ ಎಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕು. ರಸ್ತೆ ಸಂಪರ್ಕ ವ್ಯವಸ್ಥೆ, ಅಗತ್ಯವಾಗುವ ಮೂಲ ಸೌಕರ್ಯಗಳು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಡಬೇಕಿರುವ ಚಟುವಟಿಕೆಗಳನ್ನು ತಿಳಿಸಬೇಕು. ಡಿಸೆಂಬರ್‌ 20 ರೊಳಗಾಗಿ ಪಟ್ಟಿ ಲಭ್ಯವಾದರೆ, ಬಜೆಟ್‌ನಲ್ಲಿ ಅನುದಾನ ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರವಾಸಿ ಟ್ಯಾಕ್ಸಿ: 2009 ರಿಂದ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ವಿತರಿಸುವ ಯೋಜನೆ ಜಾರಿಯಲ್ಲಿದೆ. ಅವುಗಳಿಂದ ಏನು ಅನುಕೂಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಬೇಕು. ಈ ಯೋಜನೆಯಡಿ ಮೊಬೈಲ್‌ ಟಾಯ್ಲೆಟ್‌, ವಾಟರ್‌ ಬೋಟ್‌.. ಇತ್ಯಾದಿ ಪೂರಕ ಪರಿಕರಗಳನ್ನು ಒದಗಿಸಲು ನೀತಿ ಬದಲಾಯಿಸಲಾಗುವುದು ಎಂದರು.

ಮಹಾತ್ಮಗಾಂಧೀಜಿ ಅವರ 150 ಜನ್ಮದಿನದ ವರ್ಷಾಚರಣೆ ನಿಮಿತ್ತ ಗಾಂಧೀಜಿ ಭೇಟಿ ನೀಡಿದ ರೈಲ್ವೆ ನಿಲ್ದಾಣದೊಳಗೆ ಘೋಷವಾಕ್ಯ ಅಳವಡಿಸಬೇಕು. ಶಾಲಾ ಮಕ್ಕಳಿಂದ ಶಪಥ ಸ್ವೀಕರಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಅನುದಾನ ವಾಪಸ್‌: ಪ್ರವಾಸೋದ್ಯಮ ಇಲಾಖೆಯಡಿ ಬಿಡುಗಡೆ ಮಾಡಿದ ಅನುದಾನಕ್ಕೆ ಮೂರು ವರ್ಷಗಳಾದರೂ ಕೆಆರ್‌ಐಡಿಎಲ್‌ ಅಂದಾಜು ಪಟ್ಟಿ ತಯಾರಿಸಿಲ್ಲ. ಕೂಡಲೇ ನಿಗಮಕ್ಕೆ ನೀಡಿದ ಎಲ್ಲ ಅನುದಾನ ವಾಪಸ್‌ ಪಡೆದುಕೊಳ್ಳಲಾಗುವುದು. ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್‌ ಇಲಾಖೆ ಹಾಗೂ ಕ್ಯಾಶುಟೆಕ್‌ಗಳಿಗೆ ವಹಿಸಿರುವ ಕಾಮಗಾರಿಗಳನ್ನು ಮುಂದಿನ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾಮಟ್ಟದಲ್ಲಿ ಟಾಸ್ಕ್‌ಫೋರ್ಸ್‌:‘ಸಮಗ್ರ ಪ್ರವಾಸೋದ್ಯಮ ನೀತಿ ರೂಪಿಸುವುದಕ್ಕೆ ಅಗತ್ಯ ಸಲಹೆ ನೀಡಲು ರಾಜ್ಯಮಟ್ಟದಲ್ಲಿ ಡಾ.ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ ಇದೆ. ಜಿಲ್ಲಾಮಟ್ಟದಿಂದಲೂ ಸಲಹೆಗಳನ್ನು ಪಡೆಯಲು ಜಿಲ್ಲಾಮಟ್ಟದ ಟಾಸ್ಕ್‌ ಫೋರ್ಸ್‌ ರಚಿಸಲು ಸೂಚಿಸಲಾಗಿದೆ’ ಎಂದರು.

‘ರಾಜ್ಯದ 25 ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಸಿ ತಾಣಗಳ ಸ್ಥಿತಿಯನ್ನು ಅವಲೋಕಿಸಲಾಗಿದೆ. ನವೆಂಬರ್‌ 11 ರೊಳಗೆ ಜಿಲ್ಲೆಗಳ ಭೇಟಿ ಪೂರ್ಣಗೊಳಿಸಿ, ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ಕರೆಯಲಾಗುವುದು. ಒಟ್ಟಾರೆ ಡಿಸೆಂಬರ್‌ 20 ರೊಳಗಾಗಿ ಪ್ರವಾಸೋದ್ಯಮ ನೀತಿ ರೂಪಿಸುವುದಕ್ಕೆ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ.ಶಿವರಾಜ ಪಾಟೀಲ, ಬಸನಗೌಡ ದದ್ದಲ, ಬಸವರಾಜ ಪಾಟೀಲ ಇಟಗಿ, ರಾಜುಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀರಲಕ್ಷ್ಮೀ ಆದಿಮನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT