ಮಂಗಳವಾರ, ಜನವರಿ 25, 2022
24 °C

ಕಾಂಗ್ರೆಸ್‌ನಲ್ಲಿ ನಾಯಕರಿಲ್ಲ, ಪಪ್ಪುಗಳಿದ್ದಾರೆ: ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರವುದಿಲ್ಲ. ಅದು ರಾಷ್ಟ್ರೀಯ ಪಕ್ಷ ಸ್ಥಾನದಿಂದ ಇಳಿದು ಈಗ ಪ್ರಾದೇಶಿಕ ಪಕ್ಷವಾಗಿದೆ. ಆ ಪಕ್ಷಕ್ಕೆ ನಾಯಕರಿಲ್ಲ. ಬರೀ ಪಪ್ಪುಗಳಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಇಲ್ಲಿನ ಜೈನ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸೋಮವಾರ ನಡೆದ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘70 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗ ಮತ್ತು ದಲಿತರನ್ನು ಕೇವಲ ಮತಕ್ಕಾಗಿ ಬಳಸಿಕೊಂಡಿದೆ. ಅವರ ಉದ್ಧಾರ ಮಾಡಿಲ್ಲ’ ಎಂದು ದೂರಿದರು.

‘ಹಿಂದುಳಿದವರು, ದಲಿತರು ನಮ್ಮವರು ಎಂದು ಕಾಂಗ್ರೆಸ್ ಹೇಳುತ್ತದೆ. ಹಾಗಿದ್ದರೆ ಕಾಂಗ್ರೆಸ್ ಹಲವು ರಾಜ್ಯದಲ್ಲಿ ಸೋತು ಏಕೆ ಅವನತಿಯತ್ತ ಸಾಗಿದೆ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಸೋತರು. ಈಗ ಅಧಿಕಾರಕ್ಕಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಕಚ್ಚಾಟ ನಡೆಸಿ ಎರಡು ಬಣಗಳಾಗಿವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ನಾಲ್ಕು ಬಾರಿ ಬಿಜೆಪಿ ಅಧಿಕಾರ ನಡೆಸಿದೆ. ಇದುವರೆಗೆ ಪಕ್ಷ ಎದುರಿಸಿರುವ ವಿಧಾನಸಭೆ ಚುನಾವಣೆಗಳಲ್ಲಿ ಪೂರ್ಣ ಬಹುಮತ ಬಂದಿಲ್ಲ. ಹಿಂದುಳಿದ ವರ್ಗ ಮತ್ತು ದಲಿತರನ್ನು ಬಿಜೆಪಿಗೆ ಹೆಚ್ಚಾಗಿ ಕರೆತರುವ ಮೂಲಕ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಪೂರ್ಣ ಬಹುಮತ ತಂದುಕೊಡುವ ಸಂಕಲ್ಪವನ್ನು ಒಬಿಸಿ ಮೋರ್ಚಾದ ಪದಾಧಿಕಾರಿಗಳು ಮಾಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ,‘ಕಳೆದೊಂದು ವರ್ಷದಿಂದ ರಾಜ್ಯದಾದ್ಯಂತ ಎರಡು ಬಾರಿ ಪ್ರವಾಸ ಕೈಗೊಂಡು ಹಿಂದುಳಿದ ವರ್ಗಗಳ ಸ್ಥಿತಿ-ಗತಿ ಕುರಿತು ಅಧ್ಯಯನ ಮಾಡಲಾಗಿದೆ. ಅನೇಕ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿವೆ’ ಎಂದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ,‘ಹಿಂದುಳಿದ ವರ್ಗದ ಸಾಮಾನ್ಯ ಮನೆತನದ ಮೋದಿಯನ್ನು ದೇಶದ ಪ್ರಧಾನಿಯಾಗಿಸಿದ್ದು, ರಾಮನಾಥ್‌ ಕೋವಿಂದ್ ಅವರನ್ನು ರಾಷ್ಟಪತಿಯಾಗಿಸಿದ್ದು, ಕೇಂದ್ರ ಸಂಪುಟದಲ್ಲಿ 27 ಹಿಂದುಳಿದ ವರ್ಗ, 20 ದಲಿತರಿಗೆ ಸಚಿವ ಸ್ಥಾನ ನೀಡಿರುವುದು ಬಿಜೆಪಿ ಪಕ್ಷ ಹಿಂದುಳಿದ, ದಲಿತರ ಪರ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಬಿಜೆಪಿ ಒಬಿಸಿ ರಾಜ್ಯ ಘಟಕದ ಕಾರ್ಯದರ್ಶಿ ಉಮೇಶ ಸಜ್ಜನ್ ಮಾತನಾಡಿದರು.

ಬಳ್ಳಾರಿ ಜಿಲ್ಲಾ ಘಟಕ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ರಾಯಚೂರು ಜಿಲ್ಲಾ ಘಟಕ ಅಧ್ಯಕ್ಷ ಶಿವಪ್ರಕಾಶ, ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷ ವೆಂಕಟೇಶ ಅಮರಜ್ಯೋತಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಟಿ.ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷೆ ಪ್ರೇಮಾ ಸಿದ್ದಾಂತಿಮಠ, ಒಬಿಸಿ ಗ್ರಾಮೀಣ ಮಂಡಲ ಅಧ್ಯಕ್ಷ ಶರಣು ಗೊರೇಬಾಳ, ನಗರ ಮಂಡಲ ಅಧ್ಯಕ್ಷ ನಿರುಪಾದಿ ಸುಕಾಲಪೇಟೆ ಇದ್ದರು. ಶಿವರಾಜ ಪಾಟೀಲ ನಿರೂಪಿಸಿದರು.

‘ಡಿ.12ರಂದು ವಿಶೇಷ ಸಭೆ’

ಡಿ.12 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಮುಖರ ರಾಜ್ಯ ಮಟ್ಟದ ವಿಶೇಷ ಸಭೆ ಏರ್ಪಡಿಸಲಾಗಿದೆ. ಅದರಲ್ಲಿ 3 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಆ ಸಭೆಗೆ ಪ್ರತಿ ಮಂಡಲದಿಂದ ಇಬ್ಬರು ಮಹಿಳೆಯರು ಸೇರಿ 10 ಜನ ಬರಬೇಕು. ನಂತರ ಏರ್ಪಡಿಸುವ 2 ದಿನಗಳ ತರಬೇತಿ ಕಾರ್ಯಾಗಾರಕ್ಕೆ ಪ್ರತಿ ಮಂಡಲದಿಂದ ಒಬ್ಬ ಮಹಿಳೆ ಸೇರಿ ಮೂವರು ಕಡ್ಡಾಯವಾಗಿ ಪಾಲ್ಗೊಂಡು ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳ ಕುರಿತು ತಿಳಿದುಕೊಳ್ಳಬೇಕು. ಅದನ್ನು ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು