ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಂಖ್ಯೆ ಕ್ಷೀಣ: ಕಾರಣ ಪತ್ತೆ ಮಾಡಿ

ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಚಿವ ಬಿ.ಸಿ.ನಾಗೇಶ್‌ ಸೂಚನೆ
Last Updated 6 ಜುಲೈ 2022, 4:03 IST
ಅಕ್ಷರ ಗಾತ್ರ

ರಾಯಚೂರು: ‘ಕಳೆದ ವರ್ಷ ಎರಡನೇ ತರಗತಿಯಲ್ಲಿ ನೋಂದಣಿಯಾಗಿದ್ದ ಮಕ್ಕಳ ಸಂಖ್ಯೆಗಿಂತಲೂ ಈ ವರ್ಷ ಮೂರನೇ ತರಗತಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಈ ವ್ಯತ್ಯಾಸಕ್ಕೆ ಕಾರಣ ಏನು ಎಂಬುದರ ಕುರಿತು ಎರಡು ದಿನಗಳಲ್ಲಿ ಸ್ಪಷ್ಟವಾದ ಮಾಹಿತಿ ಕೊಡಬೇಕು’ ಎಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಳ್ಳಾರಿಯಲ್ಲಿ ಕಳೆದ ವರ್ಷ ಎರಡನೇ‌ ತರಗತಿ ನೋಂದಣಿಗೂ ಈ‌ ವರ್ಷದ ಮೂರನೇ ತರಗತಿಗೆ ಹೋಲಿಸಿದರೆ ಏಕೆ‌ ವ್ಯತ್ಯಾಸವಿದೆ. 1,100 ಮಕ್ಕಳು ಏಕೆ‌ ಮೂರನೇ ತರಗತಿಗೆ ಬಂದಿಲ್ಲ ಎಂಬುದನ್ನು ಪರಿಶೀಲಿಸುವ ಕಾಳಜಿ ನಿಮಗೆ ಇಲ್ಲವೇ.?. ಮಧ್ಯಾಹ್ನದ ಬಿಸಿಯೂಟ ಮಾಡುವ ಸಂಖ್ಯೆಗೆ ಹೋಲಿಸಿದರೂ ತುಂಬಾ ವ್ಯತ್ಯಾಸವಿದೆ. ಮಕ್ಕಳು ಏಕೆ ಶಾಲೆಗೆ ಬರುತ್ತಿಲ್ಲ.‌ ಇದಕ್ಕೆ ಕಾರಣ ಕಂಡುಹಿಡಿಯಬೇಕು.‌ ಅಧಿಕಾರಿಗಳು ಇವರೆಗೂ ಇದರ ಕುರಿತು ತಲೆ ಕೆಡಿಸಿಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳ ಮುಖ ನೋಡಿ ಹೋಗುವುದಕ್ಕೆ‌ ಬಂದಿಲ್ಲ.‌ ವಾಸ್ತವ ಅಂಕಿ–ಅಂಶ‌ ಕೊಡಬೇಕು. ಮಕ್ಕಳ ಸಂಖ್ಯೆಯಲ್ಲಿ ವ್ಯತ್ಯಾಸ‌ ಏಕಿದೆ‌‌ ಎಂಬುದರ ಬಗ್ಗೆ ತಿಳಿಸಬೇಕು. ಕನಿಷ್ಠ ಡಿಡಿಪಿಐಗಳೂ ಈ ವ್ಯತ್ಯಾಸ‌ದ ಬಗ್ಗೆ ಗಮನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆಯ ಡಿಡಿಪಿಐ ಅಧಿಕಾರ ವಹಿಸಿಕೊಂಡು ಒಂದೂವರೆ ತಿಂಗಳಾದರೂ ವ್ಯಾಪ್ತಿಯಲ್ಲಿರುವ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಏಕೆ ಭೇಟಿ ನೀಡಿಲ್ಲ. ಕನಿಷ್ಠ ಪಕ್ಷ ಬಿಆರ್‌ಸಿ, ಸಿಆರ್‌ಸಿಗಳನ್ನು ಸೇರಿಸಿ ಪರಿಚಯ ಮಾಡಿಕೊಳ್ಳಬೇಕು ಎಂದು ಅನಿಸಿಲ್ಲವೆ? ಅವರನ್ನೆಲ್ಲ ಡಿಡಿಪಿಐ ಕಚೇರಿಯಲ್ಲಿ ಭೇಟಿ ಮಾಡಿದರೆ ಸಾಲದು, ಖುದ್ದಾಗಿ ಅಲ್ಲಿಗೇ ಹೋಗಿ ಪರಿಶೀಲಿಸಬೇಕು ಸೂಚಿಸಿದರು. ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ,‘ಬೆಟ್ಟದೂರು ಸರ್ಕಾರಿ ಶಾಲೆಯ ಮಕ್ಕಳ ಪಾಲಕರು ದೂರು ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕೂಡಲೇ ಪರಿಸ್ಥಿತಿ ಸುಧಾರಿಸುವ ಕೆಲಸ ಮಾಡಬೇಕು. ಮಾನ್ವಿಯಲ್ಲಿ ಪದವಿ ಪೂರ್ವ ವಿಜ್ಞಾನ ಕಾಲೇಜುಗಳನ್ನು ಆರಂಭಿಸಲಾಗಿದೆ. ಆದರೆ ಉಪನ್ಯಾಸಕರ ಕೊರತೆ ಇದ್ದು, ಈ ಸಮಸ್ಯೆ‌ ಪರಿಹರಿಸಬೇಕು. ದಯವಿಟ್ಟು ಹೃದಯಪೂರ್ವಕ ಮನವಿ ಪರಿಗಣಿಸಿ ಉಪನ್ಯಾಸಕರ ನೇಮಕ‌ ಮಾಡಬೇಕು. ಮಾನ್ವಿಯಲ್ಲಿ ಒಂದು ಹೊಸದಾಗಿ ಪಿಯು ಕಾಲೇಜು ಸ್ಥಾಪಿಸಬೇಕು’ ಎಂದು ಬೇಡಿಕೆ ಪತ್ರ ನೀಡಿದರು.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತನಾಡಿ,‘ರಾಯಚೂರು ತಾಲ್ಲೂಕಿನ‌ ಹೀರಾಪುರದಲ್ಲಿ ಕೆಕೆಆರ್‌ಡಿಬಿಯಿಂದ ಶಾಲಾ‌ ಕಟ್ಟಡ ನಿರ್ಮಾಣ‌ ಮಾಡಲಾಗಿದೆ. ಇದಕ್ಕೆ‌ ಗ್ರಾಮಸ್ಥರೇ ಹಣ‌ ಸಂಗ್ರಹಿಸಿ ಎರಡು ಎಕರೆ ಜಾಗ ಕೊಟ್ಟಿದ್ದಾರೆ. ಐದು ವರ್ಷಗಳಾದರೂ ಶಾಲೆ ಆರಂಭವಾಗಿಲ್ಲ.‌ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಪ್ರೌಢಶಾಲೆ ಮಂಜೂರಿ ಮಾಡಬೇಕು’ ಎಂದು ಕೋರಿದರು. ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ,‘ರಾಯಚೂರು ಡಿಡಿಪಿಐ, ಬಿಇಒ ಕಚೇರಿ ಕಟ್ಟಡಗಳು ಶಿಥಿಲಗೊಂಡಿವೆ. ಮಳೆಗಾಲದಲ್ಲಿ ಸೋರುತ್ತಿವೆ. ಕಳೆದ 10 ವರ್ಷಗಳಿಂದ ಬೇಡಿಕೆ ಈಡೇರಿಲ್ಲ. ಕನಿಷ್ಠ ಕೆಕೆಆರ್‌ಡಿಬಿಗೆ ಬೇಡಿಕೆ ಸಲ್ಲಿಸಿದರೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ್‌, ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ.ನಮೋಶಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್‌ ಜಹಾರ್‌ ಖಾನಂ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಅಧಿಕಾರಿಗಳು ಇದ್ದರು.

ಮಕ್ಕಳ ಸಂಖ್ಯೆ ವ್ಯತ್ಯಾಸ

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ವರ್ಷ ಎರಡನೇ ತರಗತಿಗೆ ನೋಂದಣಿಯಾದ ಮಕ್ಕಳ ಸಂಖ್ಯೆ ಒಟ್ಟು 38,485. ಈ ವರ್ಷ ಮೂರನೇ ತರಗತಿಗೆ ನೋಂದಣಿಯಾದ ಮಕ್ಕಳ ಸಂಖ್ಯೆ 31,026. ಇಷ್ಟೊಂದು ವ್ಯತ್ಯಾಸ ಹೇಗಾಗಿದೆ. ಎರಡನೇ ತರಗತಿ ಮುಗಿಸಿಕೊಂಡ ಇನ್ನುಳಿದ ಮಕ್ಕಳೆಲ್ಲ ಎಲ್ಲಿಗೆ ಹೋಗಿದ್ದಾರೆ ಎನ್ನುವ ಮಾಹಿತಿ ಕೊಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸೂಚಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲೂ ಈ ರೀತಿಯ ವ್ಯತ್ಯಾಸ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT