ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಪರ ಅಲೆಗಳು ಗೆಲುವಿಗೆ ಶ್ರೀರಕ್ಷೆ: ರಾಜಾ ಅಮರೇಶ್ವರ ನಾಯಕ

Last Updated 25 ಮೇ 2019, 12:53 IST
ಅಕ್ಷರ ಗಾತ್ರ

ರಾಯಚೂರು:ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಮತಗಳನ್ನು ಪಡೆದು, ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರನ್ನು ಪರಾಭವಗೊಳಿಸಿರುವ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಮತವನ್ನು ಹಂಚಿಕೊಂಡಿದ್ದಾರೆ.

*ಭಾರಿ ಅಂತರದ ಗೆಲುವಿನ ಖುಷಿ ನಿರೀಕ್ಷಿತವಾಗಿತ್ತಾ?

ಕಾಂಗ್ರೆಸ್‌ಗಿಂತಲೂ ಒಂದು ಲಕ್ಷದವರೆಗೂ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗುತ್ತೇನೆ ಎನ್ನುವ ವಿಶ್ವಾಸವಿತ್ತು. ಆದರೆ, ಕ್ಷೇತ್ರದ ಜನರು 1,17,116 ಮತಗಳ ಲೀಡ್‌ ಕೊಟ್ಟಿದ್ದಾರೆ. ಇಷ್ಟೊಂದು ಮತಗಳನ್ನು ಪಡೆಯುವುದಕ್ಕೆ ಪಕ್ಷದ ಹಿರಿಯರಿಂದ ಹಿಡಿದು ತಳಮಟ್ಟದ ಸಾಮಾನ್ಯ ಕಾರ್ಯಕರ್ತರವರೆಗೂ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕಳೆದ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಜನಪರ ಆಡಳಿತದಿಂದಾಗಿ ಇಷ್ಟು ಅಭೂತಪೂರ್ವ ಬೆಂಬಲ ಸಿಕ್ಕಿದೆ. ದೇಶದ ಎಲ್ಲ ಕಡೆಗಳಲ್ಲೂ ಮೋದಿ ಪರ ಅಲೆ ಇರುವುದು ನನ್ನ ಗೆಲುವಿಗೆ ಕಾರಣ ಶ್ರೀರಕ್ಷೆಯಾಗಿದೆ.

*ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಇದು ಎರಡನೇ ಗೆಲುವು? ಈ ಬಗ್ಗೆ ನಿಮ್ಮ ಅಭಿಮತ?

ಸ್ಥಳೀಯ ಮಟ್ಟದ ಕಾರ್ಯಕರ್ತರ ಸಂಕಲ್ಪ ಹಾಗೂ ರಾಜ್ಯ, ರಾಷ್ಟ್ರೀಯ ನಾಯಕರ ಸತತ ಪರಿಶ್ರಮದಿಂದಾಗಿ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಎರಡನೇ ಸಲ ಮತದಾರರ ಒಲವು ಪಡೆದುಕೊಳ್ಳಲು ಕಾರಣವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮಾಡಿರುವ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ಎಲ್ಲರೂ ಯಶಸ್ವಿಯಾಗಿ ಮಾಡಿದ್ದಾರೆ.

*ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರಗಳಿಂದ ಶಾಸಕನಾಗಿ ಆಯ್ಕೆಯಾಗಿದ್ದೆ. ಲಿಂಗಸುಗೂರು ಮತ್ತು ಕಲ್ಮಲಾ ವಿಧಾನಸಭೆ ಕ್ಷೇತ್ರಗಳಿಂದ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಜಿಲ್ಲೆಯಲ್ಲಿ ಸಾಕಷ್ಟು ಹಿರಿಯರು, ಮುಖಂಡರು, ಹಿತೈಷಿಗಳಿದ್ದಾರೆ. ಅವರೆಲ್ಲರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತೇನೆ. ಕೇಂದ್ರ ಸರ್ಕಾರದಿಂದ ಸಾಧ್ಯವಾಗುವ ಎಲ್ಲ ಯೋಜನೆಗಳನ್ನು ಈ ಕ್ಷೇತ್ರದಲ್ಲಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇನೆ.

ಮೂಲ ಸೌಲಭ್ಯಗಳ ವಿಚಾರದಲ್ಲಿ ಜಿಲ್ಲೆಗಳೆರಡು ಸಾಕಷ್ಟು ಹಿಂದುಳಿದಿವೆ. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಶೈಕ್ಷಣಿಕವಾಗಿ ಈ ಭಾಗದ ಪ್ರಗತಿ ಆಗಬೇಕಿದೆ.

*ತುರ್ತಾಗಿ ನೀವು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳೇನು?

ಲೋಕಸಭೆ ಕ್ಷೇತ್ರದ ಎರಡೂ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಆದ್ಯತೆ ವಹಿಸುತ್ತೇನೆ. ಮುಖ್ಯವಾಗಿ ರಾಯಚೂರಿನಲ್ಲಿ ಏಮ್ಸ್‌ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಭಾಗದಲ್ಲಿ ಜಾರಿಯಾಗಬೇಕಾಗಿರುವ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರದಲ್ಲಿ ಒತ್ತಡ ಹೇರುವ ಕೆಲಸ ಮಾಡುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ.

*ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಇದರಿಂದ ಅಭಿವೃದ್ಧಿ ಸಾಧ್ಯವೇ?

ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ. ಜನಾದೇಶ ಇಲ್ಲ ಎಂಬುದನ್ನು ಅರಿತುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ರಾಜ್ಯದಲ್ಲಿಯೂ ಆದಷ್ಟು ಬೇಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT