ದೇಶದಲ್ಲಿ ನೈತಿಕತೆ ಕುಸಿತ: ನ್ಯಾ.ನಾಗಮೋಹನದಾಸ್‌

ಸೋಮವಾರ, ಜೂನ್ 24, 2019
26 °C
ಸಂಭ್ರಮದಿಂದ ನೆರವೇರಿದ ಸೂರ್ಯೋದಯ ವಾಕಿಂಗ್ ಕ್ಲಬ್ ಆರನೇ ವಾರ್ಷಿಕೋತ್ಸವ

ದೇಶದಲ್ಲಿ ನೈತಿಕತೆ ಕುಸಿತ: ನ್ಯಾ.ನಾಗಮೋಹನದಾಸ್‌

Published:
Updated:
Prajavani

ರಾಯಚೂರು: ದೇಶವು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದ್ದರೂ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳು ಕುಸಿದು ಹೋಗಿವೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಕಳವಳ ವ್ಯಕ್ತಪಡಿಸಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೂರ್ಯೋದಯ ವಾಕಿಂಗ್ ಕ್ಲಬ್‌ನಿಂದ ಭಾನುವಾರ ಆಯೋಜಿಸಿದ್ದ 6 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೆಲವು ಸಂಘಟನೆಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿರುವುದು ವಿಶೇಷ. ಸುರ್ಯೋದಯ ವಾಕಿಂಗ್‌ ಕ್ಲಬ್‌ ಕೂಡಾ ಉತ್ತಮ ಸಾಧನೆಗಳನ್ನು ಮಾಡುತ್ತಿದೆ. ಹಿರಿಯರನ್ನು ಗೌರವಿಸದ ಸಮಾಜವು ಸಮಾಜವೇ ಅನ್ನಿಸುವುದಿಲ್ಲ. ಇಂಥ ಮಹತ್ವದ ಕಾರ್ಯವನ್ನು ವಾಕಿಂಗ್‌ ಕ್ಲಬ್‌ನವರು ತುಂಬಾ ಪ್ರೀತಿಯಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಬೆಳೆಯಬೇಕು. ಇದರಿಂದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಉತ್ತಮ ಕೆಲಸಗಳಿಗೆ ಎಲ್ಲರೂ ಸಹಕಾರ ಮನೋಭಾವ ತೋರಿಸಬೇಕು. ಇದರಿಂದ ಸಮಾಜಪರವಾದ ಕಾರ್ಯಗಳು ಹೆಚ್ಚು ಅನುಷ್ಠಾನವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಉತ್ತಮ ನಾಗರಿಕರಾಗಿ ಜೀವನ ರೂಪಿಸಿಕೊಳ್ಳುವುದಕ್ಕೆ ಸಂವಿಧಾನವು ಮಹತ್ವ ಮಾರ್ಗದರ್ಶಕವಾಗಿದೆ. ಇಂಥ ಸಂವಿಧಾನದ ಬಗ್ಗೆ ಜನಪ್ರತಿನಿಧಿಗಳು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿಲ್ಲ. ಜನರೂ ಸಂವಿಧಾನ ಅರ್ಥೈಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಅಂಶಗಳನ್ನು ಅಳವಡಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ವಿಷಾದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಎಲ್ಲವೂ ಸರ್ಕಾರದಿಂದಲೇ ನೇರವೇರಬೇಕು ಎಂದು ಕಾದುಕುಳಿತುಕೊಂಡರೆ ಏನೂ ಸಾದಿಸಲು ಆಗುವುದಿಲ್ಲ. ಸಂಘ–ಸಂಸ್ಥೆಗಳು ಸಮಾಜಪರ ಕಾರ್ಯಕ್ರಮಗಳನ್ನು ರೂಪಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಮಾಜ ಕಾರ್ಯವನ್ನು ಸುರ್ಯೋದಯ ಕ್ಲಬ್‌ ಹೀಗೆಯೇ ಮುಂದುವರಿಸಬೇಕು ಎಂದು ತಿಳಿಸಿದರು.

ಯಾವುದೇ ಒಂದು ಉತ್ತಮ ಕಾರ್ಯಕ್ಕೆ ಅಡ್ಡಿಪಡಿಸುವುದು ಹೆಚ್ಚಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮೌಲ್ಯಗಳ ಕುಸಿತವಾಗಿವೆ. ಸಂಸ್ಕಾರವಿಲ್ಲದ ಶಿಕ್ಷಣವೂ ಅಪಾಯಕಾರಿಯಾಗಿದೆ. ಇದರಿಂದ ಉತ್ತಮ ಶಿಕ್ಷಣ ಕಲ್ಪಿಸಿಕೊಟ್ಟ ತಂದೆ-ತಾಯಿಗಳನ್ನು ಬಿಟ್ಟು ವಿದೇಶಕ್ಕೆ ಹೋಗುವಂಥ ಜನರು ಹೆಚ್ಚಾಗಿದ್ದಾರೆ. ‍‍ಪಾಲಕರನ್ನು ಗೌರವದಿಂದ ನೋಡುವ ಮನೋಭಾವನೆ ಬರಬೇಕು ಎಂದು ಹೇಳಿದರು.

ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿದರು. ವ್ಯಕ್ತತ್ವ ವಿಕಸನ ತರಬೇತಿದಾರರಾದ ಲೀಲಾ ಎಂ. ಕಾರಟಗಿ ವಿಶೇಷ ಉಪನ್ಯಾಸ ನೀಡಿದರು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ, ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.

ವಾಕಿಂಗ್ ಕ್ಲಬ್‌ನ ಅಧ್ಯಕ್ಷ ಬಿ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಡಾ.ವಿ.ಎ ಮಾಲಿಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಪತ್ರಕರ್ತ ರಂಗನಾಥ, ಡಾ.ಶೀಧರ ರೆಡ್ಡಿ, ಡಾ.ರಿಯಾಜುದ್ದೀನ್, ಆರ್‌ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ವಿಶ್ವನಾಥ ಪಾಟೀಲ, ಮುಖ್ಯಾಧ್ಯಾಪಕಿ ಶಿವಮ್ಮ ಹಾಗೂ ಇದ್ದರು.

**

ಉತ್ತಮ ಕಾರ್ಯಗಳಿಗೆ ಹತ್ತಾರು ಅಡೆತಡೆಗಳು ಎದುರಾಗುತ್ತವೆ. ಇವೆಲ್ಲವನ್ನು ಮೆಟ್ಟಿನಿಂತು ಒಳ್ಳೆಯದನ್ನು ಸಾಧಿಸಿ ತೋರಿಸುವ ಛಲ ಇರಬೇಕು.
-ವೆಂಕಟರಾವ್‌ ನಾಡಗೌಡ, ಜಿಲ್ಲಾ ಉಸ್ತುವಾರಿ ಸಚಿವ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !