ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯ ಹರಡಿದ ಸೊಳ್ಳೆಗಳು: ನಿಯಂತ್ರಣಕ್ಕೆ ಕ್ರಮವಿಲ್ಲ!

ಸೊಳ್ಳೆ ಪೋಷಿಸುವ ತಾಣಗಳಾದ ರಾಯಚೂರಿನ ತೆರೆದ ಚರಂಡಿ, ಕಂದಕ; ನಡೆಯದ ಫಾಗಿಂಗ್
Last Updated 8 ಆಗಸ್ಟ್ 2022, 3:02 IST
ಅಕ್ಷರ ಗಾತ್ರ

ರಾಯಚೂರು: ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸುವ ಅನಾರೋಗ್ಯ ಸಮಸ್ಯೆಗಳು ಶುರುವಾಗಿದ್ದು, ಪರಿಹಾರ ಕಲ್ಪಿಸಬೇಕಿರುವ ನಗರ ಸ್ಥಳೀಯ ಸಂಸ್ಥೆಗಳು ಇನ್ನೂ ಕಾರ್ಯ ಪ್ರವೃತ್ತವಾಗಿಲ್ಲ.

ಜನರು ಶೀತ, ಕೆಮ್ಮು, ಜ್ವರದ ಬಾಧೆಯಿಂದ ಬಳಲುವುದು ಸಾಮಾನ್ಯವಾಗಿದೆ. ಸೊಳ್ಳೆ ಉತ್ಪತ್ತಿ ವಿಪರೀತವಾಗಿದ್ದು, ಬಹುತೇಕ ಇವುಗಳಿಂದಲೇ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಕೊಳೆಗೇರಿಗಳಲ್ಲಿ ಸಂಜೆ ನಂತರ ನಡೆದುಕೊಂಡು ಹೋಗುವುದು ಸಾಹಸ ಮಾಡಿದಂತಾಗುತ್ತದೆ.‌ ಮುಖ್ಯವಾಗಿ ಮಾವಿನಕೆರೆ ಸುತ್ತಮುತ್ತಲಿನ ಬಡಾವಣೆಗಳಾದ ರಾಮನಗರ, ಇಂದಿರಾನಗರ, ಸತ್ಯನಾಥ ಕಾಲೊನಿ, ಜಹಿರಾಬಾದ್ ಮಾರ್ಗಗಳಲ್ಲಿ ನಡೆದುಕೊಂಡು ಹೋಗುವಾಗ ಸೊಳ್ಳೆಗಳು ಮುತ್ತಿಕೊಳ್ಳುತ್ತಿವೆ.

'ನಗರಸಭೆಯವರು ಪ್ರತಿವರ್ಷ ಸಂಜೆ ಹೊತ್ತು ಫಾಗಿಂಗ್ ಮಾಡಿ ಹೋಗುತ್ತಿದ್ದರು. ಅನೇಕ ತಿಂಗಳುಗಳಾದರೂ ಫಾಗಿಂಗ್ ಮಾಡುತ್ತಿಲ್ಲ. ರಾತ್ರಿ ಫ್ಯಾನ್ ಹಾಕಿಕೊಂಡರೂ ಸೊಳ್ಳೆಗಳು ಕಚ್ಚುತ್ತಿದ್ದು, ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಮಕ್ಕಳು ಮತ್ತು ವಯೋವೃದ್ಧರು ಹಗಲು ನಿದ್ದೆ ಮಾಡಿ, ರಾತ್ರಿ ಸೊಳ್ಳೆ ಹೊಡೆಯುತ್ತಾ ಕಾಲಕಳೆಯುತ್ತಿದ್ದಾರೆ. ನಗರಸಭೆ ವಾರ್ಡ್ ಮೆಂಬರ್ ಕೂಡಾ ಈ ಸಮಸ್ಯೆ ಬಗೆಹರಿಸುತ್ತಿಲ್ಲ' ಎಂದು ರಾಮನಗರ ಸರ್ಕಾರಿ ಶಾಲೆ ಪಕ್ಕದ ನಿವಾಸಿ ಅಬ್ದುಲ್ ರೆಹಮಾನ್ ಅಸಮಾಧಾನ ಹೊರಹಾಕಿದರು.

ರಾಯಚೂರು ನಗರದಲ್ಲಿ ಸೊಳ್ಳೆ ಉತ್ಪತ್ತಿಗೆ ಚರಂಡಿಗಳು ದೊಡ್ಡ ಕೊಡುಗೆ ನೀಡುತ್ತಿವೆ.‌ ಡ್ಯಾಡಿ ಕಾಲೊನಿಯಲ್ಲಿ ಸಂಗ್ರಹವಾದ ಕೊಳಚೆ, ರಾಂಪೂರ, ಹೊಸೂರ, ಅಸ್ಕಿಹಾಳದಲ್ಲಿ ಚಲನೆಯಿಲ್ಲದ ಚರಂಡಿಗಳು ಅನಾರೋಗ್ಯ ಹರಡುತ್ತಿವೆ.

ಒಳಚರಂಡಿ ವ್ಯವಸ್ಥೆಯಿಲ್ಲದ ನೇತಾಜಿ ನಗರ, ಅರಬ್ ಮೊಹಲ್ಲಾ ಬಡಾವಣೆಗಳಲ್ಲಿ ತೆರೆದ ಚರಂಡಿಗೆ ಶೌಚಾಲಯ ಸಂಪರ್ಕವಿದೆ. ಇದರಿಂದ ಸುತ್ತಮುತ್ತ ದುರ್ನಾತ ಹರಡಿಕೊಂಡಿದ್ದಲ್ಲದೆ, ಸೊಳ್ಳೆಗಳ ಉಪಟಳವೂ ಹೆಚ್ಚಿದೆ. ಜೆಸ್ಕಾಂ ಕಚೇರಿ ಪಕ್ಕದ ಕೋಟೆ ಕಂದಕವು ಸೊಳ್ಳೆಗಳನ್ನು ಪೋಷಿಸುವ ತಾಣವಾಗಿದೆ.‌

ಸೊಳ್ಳೆ ಹಾವಳಿ ನಿಯಂತ್ರಿಸುವಲ್ಲಿ ವಿಫಲ:

ಲಿಂಗಸುಗೂರು: ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಆರೋಗ್ಯ ಇಲಾಖೆ ಸಾರ್ವಜನಿಕರ ಅನಾರೋಗ್ಯ ಮತ್ತು ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾದ ಸೊಳ್ಳೆಗಳ ನಿಯಂತ್ರಿಸುವಲ್ಲಿ ವಿಫಲರಾಗಿದ್ದು ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.

ಅವೈಜ್ಞಾನಿಕ ರಸ್ತೆ, ಚರಂಡಿಗಳ ನಿರ್ಮಾಣ ಹಾಗೂ ಜಲಾವೃತಗೊಂಡ ರಸ್ತೆಗಳು, ಕೊಳಚೆ ಪ್ರದೇಶವಾಗಿ ಮಾರ್ಪಟ್ಟ ಚರಂಡಿ ಅವ್ಯವಸ್ಥೆಯಿಂದ ಸೊಳ್ಳೆಗಳು ನಿಯಂತ್ರಣ ಮೀರಿ ಬೆಳೆಯುತ್ತಿವೆ. ಮಲೇರಿಯಾ, ಡೆಂಗಿ ಜ್ವರ ತರಬಲ್ಲ ಸೊಳ್ಳೆ ನಿಯಂತ್ರಣಕ್ಕೆ ಸೀಮಿತವಾದ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗ ಹರಡುತ್ತಿರುವ ಸೊಳ್ಳೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಲೇರಿಯಾ ಪೀಡಿತರ ತಾಣವಾಗಿದ್ದ ಲಿಂಗಸುಗೂರು ತಾಲ್ಲೂಕು ಇತ್ತೀಚಿನ ವರ್ಷಗಳಲ್ಲಿ ಮಲೇರಿಯಾ ಮುಕ್ತ ತಾಲ್ಲೂಕಾಗಿ ಪರಿವರ್ತಿತಗೊಳ್ಳುತ್ತಿದೆ. ಜಲದುರ್ಗ, ಹಂಚಿನಾಳ, ಶೀಲಹಳ್ಳಿ, ಯಳಗುಂದಿ, ಕಡದರಗಡ್ಡಿ, ಯರಗೋಡಿ ಸೇರಿದಂತೆ ಕೃಷ್ಣಾ ನದಿ ಪಾತ್ರದ ಈಚನಾಳ,
ಗುಂತಗೋಳ, ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಮಲೇರಿಯಾ ಪ್ರಕರಣಗಳು ವರದಿ ಆಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಕೀಟ ಶಾಸ್ತ್ರ ತಜ್ಞೆ ಡಾ. ಗಂಗೋತ್ರಿ ನೇತೃತ್ವದ ಜಿಲ್ಲಾ ಮಲೇರಿಯಾ ವಿಭಾಗದ ಅಧಿಕಾರಿಗಳ ತಂಡ ಮೂರು ತಿಂಗಳ ಹಿಂದೆ ಕೃಷ್ಣಾ ನದಿ ಪಾತ್ರದ ಕೆಲವೆಡೆ ಮಲೇರಿಯಾ ಹರಡಲು ಕಾರಣವಾದ ಅನಾಫಿಲಿಶ್‍ ಸೊಳ್ಳೆ ಬೆಳೆಯುವ ತಾಣ ಗುರುತಿಸಿದ್ದಾರೆ. ಹೀಗಾಗಿ ಆ ಪ್ರದೇಶದಲ್ಲಿ ಸೊಳ್ಳೆ ನಿಯಂತ್ರಣ ಪರದೆ, ಲ್ಯಾಮ್ಡ್‍ ಸೈಲೊ ಥ್ರಿಮ್‍ 5% ಸಿಂಪಡಣೆಗೆ ಕ್ರಮ ಕೈಗೊಳ್ಳುವ ಜೊತೆಗೆ ಮುಂಜಾಗ್ರತೆಯಾಗಿ ಔಷಧೋಪಚಾರ ವಿತರಣೆಗೆ ಆ ರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಮನೆ ಮನೆಗೆ ಜಾಗೃತಿ ಕಾರ್ಯಕ್ರಮ

ಮಾನ್ವಿ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋ ಗಗಳು ಹರ ಡದಂತೆ ತಡೆಯಲು ತಾಲ್ಲೂಕು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಉಪಕೇಂದ್ರಗಳ ಸಹಯೋಗದಲ್ಲಿ ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ರೋಗ ನಿಯಂತ್ರಣ ಕ್ರಮಗಳ ಕುರಿತು ಜನಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳ ಹೆಚ್ಚಳದಿಂದ ಕಂಡು ಬರುವ ಕಂಡು ಬರುವ ಮಲೇರಿಯಾ, ಡೆಂಗಿ, ಆನೆಕಾಲು ರೋಗ ಮತ್ತಿತರ ಕಾಯಿಲೆಗಳ‌ ನಿಯಂತ್ರಣ ಕುರಿತು ಜನರಿಗೆ ಮಾಹಿತಿ ನೀಡಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಅಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಇತರ ಸಿಬ್ಬಂದಿ ವಾರ್ಡ್ ಹಾಗೂ ಮನೆ ಮನೆಗಳಿಗೆ ತೆರಳಿ ಓಣಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಮನೆಗಳಿಗೆ ನೀರು ಸಂಗ್ರಹ ತೊಟ್ಟಿಗಳ ನಿರಂತರ ಸ್ವಚ್ಛತೆ ಹಾಗೂ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಅರಿವು
ಮೂಡಿಸಿದ್ದಾರೆ. ಶುದ್ಧ ಹಾಗೂ ಕಾಯಿಸಿದ ನೀರು ಕುಡಿಯುವ ಕುರಿತು ತಿಳಿವಳಿಕೆ ಮೂಡಿಸಲಾಗಿದೆ.

ಗ್ರಾಮಗಳಲ್ಲೂ ಸೊಳ್ಳೆ ಕಾಟ! : ದೇವದುರ್ಗ: ಕಳೆದ ಒಂದು ತಿಂಗಳಿಂದ ನಿರಂತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳಿಗೆ ಸಂತಾನೋತ್ಪತ್ತಿಯೂ ವಿಪರೀತವಾಗಿದೆ.

ಈ ಸಮಸ್ಯೆ ಪರಿಹರಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ’ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ಮತ್ತು ಚರಂಡಿ ಹಾಗೂ ಕಸ ವಿಲೇವಾರಿಗೆ ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳು ಹಾಗೂ ಪುರಸಭೆ ಮತ್ತು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಪತ್ರ ಬರೆಯಲಾಗಿದೆ‘ ಎಂದು ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ತಿಳಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸೊಳ್ಳೆಗಳ ಉತ್ಪತ್ತಿಯ ತಾಣಗಳಾಗಿ ಪರಿವರ್ತನೆಗೊಂಡಿರುವ ಹಾಗೆ ಕಾಣುತ್ತಿವೆ. ತಾಲ್ಲೂಕಿನ ಜಾಗಟಗಲ್, ಗೂಗಲ್, ಕೊಪ್ಪರ ದೇವದುರ್ಗ ಪಟ್ಟಣದ ಪುರಸಭೆ ಹತ್ತಿರ ಸಾರ್ವಜನಿಕ ಕ್ಲಬ್ ಮೈದಾನದ ಆವರಣದಲ್ಲಿ ಮಳೆ ನೀರು, ಚರಂಡಿ ನೀರು ಸಂಗ್ರಹವಾಗಿ ನೋಡಲು ಕೆರೆಯಂತೆ ಕಾಣುತ್ತಿವೆ.

ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಕೂಡಲೇ ಗಮನಹರಿಸಿ ಆರೋಗ್ಯಕರ ವಾತಾವರಣ ಸೃಷ್ಟಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.

ಪ್ರತಿದಿನವೂ ಫಾಗಿಂಗ್‌

ಸಿಂಧನೂರು: ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿದಿರುವುದರಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು, ಇವುಗಳ ನಿಯಂತ್ರಣಕ್ಕಾಗಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿವೆ.

‘ನಗರದ ವಿವಿಧ ವಾರ್ಡುಗಳಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರನ್ನು ಕುದಿಸಿ, ಸೋಸಿ, ಆರಿಸಿ ಕುಡಿಯುವಂತೆ ಆಟೊಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಅವರನ್ನು ಸಂಪರ್ಕಿಸಿದಾಗ ‘ಆಸ್ಪತ್ರೆಯ ಎಲ್ಲ ಕಿಟಕಿಗಳಿಗೆ ಮೆಸ್ ಹಾಕಿ ಸೊಳ್ಳೆ ಒಳ ಬರದಂತೆ ಕ್ರಮಕೈಗೊಳ್ಳಲಾಗಿದೆ. ಪ್ರತಿಯೊಂದು ಹಾಸಿಗೆಗೂ ಸೊಳ್ಳೆ ಪರದೆ ಕಟ್ಟಲಾಗಿದೆ. ಆಸ್ಪತ್ರೆಯ ಸುತ್ತಮುತ್ತ ಇರುವ ಮಲಿನತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮರಂ ಹಾಕಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ವಾರ್ಡ್‍ಗಳಿಗೆ ತೆರಳಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಕುಡಿಯುವ ನೀರು, ಆಹಾರ, ನೆರೆಹೊರೆಯ ಸ್ವಚ್ಛತೆ, ಶೌಚಾಲಯದ ಶುಚಿತ್ವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ’ ಎಂದು ವಿವರಿಸಿದರು.

ಲಾರ್ವಾ ಸಮೀಕ್ಷೆ

ಕವಿತಾಳ: ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಹಾವಳಿ ಹೆಚ್ಚಿದೆ.

ಸೊಳ್ಳೆಗಳ ನಿಯಂತ್ರಣ ಮತ್ತು ಡೆಂಗಿ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ವತಿಯಿಂದ ಈಚೆಗೆ ಪಟ್ಟಣದಲ್ಲಿ ಜಾಗ್ರತಿ ಜಾಥಾ ಹಮ್ಮಿಕೊಳ್ಳಲಾಗಿತ್ತು ಮತ್ತು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ‘ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಮಾಡುತ್ತಿದ್ದಾರೆ, ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್‍ ಮಾಡುವಂತೆ ಮತ್ತು ಕುಡಿಯುವ ನೀರಿನ ಮೇಲ್ತೊಟ್ಟಿಗಳನ್ನು ಸ್ವಚ್ಛಗೊಳಿಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಮೃತ್ ರಾಠೋಡ ಹೇಳಿದರು.

ಆರೋಗ್ಯ ಇಲಾಖೆಯೊಂದೇ ಸಕ್ರಿಯ

ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ವಹಿಸುವ ಕೆಲಸವನ್ನು ಆರೋಗ್ಯ ಇಲಾಖೆಯೊಂದೇ ಮಾಡುತ್ತಿದೆ. ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುತ್ತಿಲ್ಲ. ಔಷಧಿಗಳ ಖರೀದಿ, ಫಾಗಿಂಗ್‌ ಯಂತ್ರಗಳ ಖರೀದಿಗೆ ಅಗತ್ಯ ಅನುದಾನ ಮೀಸಲು ಇಡುತ್ತಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯವರು ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆಯುವುದು ದಾಖಲೆಗೆ ಸಿಮೀತವಾಗಿದೆ. ಲಾರ್ವಾ ಸಮೀಕ್ಷೆ, ಅಭಿಯಾನ ಕೈಗೊಳ್ಳುವುದು ದಾಖಲೆಗಳನ್ನು ಒದಗಿಸುವುದಕ್ಕೆ ಸೀಮಿತವಾಗಿದೆ. ವಾಸ್ತವದಲ್ಲಿ ಸಮಸ್ಯೆ ಹಾಗೆಯೇ ಇದೆ. ಆರೋಗ್ಯ ಇಲಾಖೆಯ ಸಲಹೆಗಳನ್ನು ಪರಿಣಾಮಕಾರಿ ಜಾರಿಗೊಳಿಸಬೇಕಾದ ಸ್ಥಳೀಯ ಸಂಸ್ಥೆಗಳು, ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಇಲಾಖೆಯ ಅಧಿಕಾರಿಗಳಲ್ಲೇ ಇದೆ.

ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಬಸವರಾಜ ಭೋಗಾವತಿ, ಡಿ.ಎಚ್‌.ಕಂಬಳಿ, ಯಮನೇಶ ಗೌಡಗೇರಾ, ಮಂಜುನಾಥ ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT