ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಮಾಹಿತಿ ನೀಡಲು ಸಂಸದರಿಂದ ಸೂಚನೆ

ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ
Last Updated 14 ನವೆಂಬರ್ 2019, 16:51 IST
ಅಕ್ಷರ ಗಾತ್ರ

ರಾಯಚೂರು: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಗಾಗಿ ನೋಂದಾಯಿಸಿಕೊಂಡ ರೈತರಿಗೆ ವಿಮೆ ಪಾವತಿ ಕುರಿತಂತೆ ರೈತ ಸಂಪರ್ಕ ಕೇಂದ್ರದಲ್ಲಿ ಸಮರ್ಪಕ ಮಾಹಿತಿ ಒದಗಿಸುವಂತೆ ಸಂಸದ ಸಂಗಣ್ಣ ಕರಡಿ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಫಸಲ್ ಭೀಮಾ ಯೋಜನೆಯಡಿ 2018–19 ರ ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ₹5.40 ಕೋಟಿ ಪ್ರೀಮಿಯಮ್ ಪಾವತಿಸಿ 86,229 ರೈತರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 59,205 ರೈತರಿಗೆ ₹132.44 ಕೋಟಿ ವಿಮಾ ಮೊತ್ತ ಪಾವತಿಯಾಗಿದೆ.2019–20ನೇ ಸಾಲಿನಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 1,31,506 ರೈತರು ಈವರೆಗೆ ನೋಂದಣಿಯಾಗಿದ್ದಾರೆ. ಬೆಳೆ ವಿಮೆಗೆ ನೋಂದಾಯಿಸಲು ಮುಂಬರುವ ಡಿಸೆಂಬರ್ 16 ರವರೆಗೆ ಕಾಲಾವಕಾಶವಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

‘2018–19ನೇಸಾಲಿನಲ್ಲಿ ಒಟ್ಟಾರೆಯಾಗಿ 34,024 ರೈತರಿಗೆ ಬೆಳೆ ವಿಮೆ ಪಾವತಿಯಾಗಿಲ್ಲ, ಇದಕ್ಕೆ ಕಾರಣವೇನು? ಈ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಹಾಗೂ ಬೆಳೆ ವಿಮೆ ಯೋಜನೆ ಅಡಿ ನೋಂದಾಯಿಸಿಕೊಂಡರೂ, ಅವರಿಗೆ ಬೆಳೆ ವಿಮೆ ನೀಡದಿರುವ ಕುರಿತು ಮಾಹಿತಿ ನೀಡಬೇಕು’ ಎಂದು ಅಧಿಕಾರಿಗೆ ಸಂಸದರು ಸೂಚಿಸಿದರು

ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ‘ಬೆಳೆವಿಮೆ ಯೋಜನೆಯು ವಿವಿಧ ಮಾನದಂಡಗಳಿಗೆ ಒಳಪಟ್ಟಿರುತ್ತದೆ. ಆದ ಕಾರಣ ವಿಮಾ ನಿಯಮಾವಳಿ ಅನ್ವಯ ಬೆಳೆ ವಿಮೆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ’ ಎಂದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ, ಸಮಗ್ರ ನೀರಾವರಿ ಜಲಾನಯನ ಅಭಿವೃದ್ಧಿ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಹಾಗೂ ಮಣ್ಣು ಆರೋಗ್ಯ ಅಭಿಯಾನ ಅಡಿ ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆಯಿಂದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಂಸದರು ನಿರ್ದೇಶನ ನೀಡಿದರು.

ಭಾರತೀಯ ರೈಲ್ವೆ ಇಲಾಖೆ ವತಿಯಿಂದ ನಗರದ ರೈಲು ನಿಲ್ದಾಣದಲ್ಲಿ ಹಲವಾರು ಜನೋಪಯೋಗಿ ಹಾಗೂ ಪ್ರಯಾಣ ಸ್ನೇಹಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾನೈಟ್ ನೆಲಹಾಸು, ಪ್ಲಾಟ್‌ಫಾರಂಗಳಲ್ಲಿ ಶೌಚಾಲಯ ನಿರ್ಮಾಣ, ಟಿಕೆಟ್ ಬುಕಿಂಗ್ ಸೆಂಟರ್‌ಗಳ ನವೀಕರಣ,26 ಕೋಚ್‌ಗಳ ರೈಲು ನಿಲ್ಲುವಷ್ಟು ಪ್ಲಾಟ್‌ಫಾರಂ ಉದ್ದ, ಗಾರ್ಡನ್‌ನಲ್ಲಿ ವಾಟರ್ ಫೌಂಟೇನ್ ಸೇರಿದಂತೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಇನ್ನೋರ್ವ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ನಗರದ ರೈಲು ನಿಲ್ದಾಣದಲ್ಲಿ ಮತ್ತೊಂದು ಟಿಕೆಟ್ ಕೌಂಟರ್ ಸ್ಥಾಪಿಸುವಂತೆ ಹಾಗೂ ಪ್ಲಾಟ್‌ಫಾರಂ ಬಳಿ ಲಿಫ್ಟ್‌ನ್ನು ನಿರ್ಮಿಸುವಂತೆ ಸೂಚಿಸಿದರು.

ಡಿಜಿಟಲ್ ಇಂಡಿಯಾಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಜಿಲ್ಲೆಯ 185 ಗ್ರಾಮ ಪಂಚಾಯಿತಿ ಪೈಕಿ 182 ರಲ್ಲಿ ಆಪ್ಟಿಕಲ್ ಫೈಬರ್, ಬ್ರಾಡ್ ಬಾಂಡ್ ಸಂಪರ್ಕ ಕಲ್ಪಿಸಲಾಗಿದೆ. ದೇವದುರ್ಗ ತಾಲ್ಲೂಕಿ ಜಾಗಟಕಲ್, ಮಲ್ಲದೇವರಗುಡ್ಡ ಹಾಗೂ ಅಮರಾಪೂರ್ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಅಳವಡಿಸಬೇಕಿದೆ. ಅಲ್ಲಿ ಕಟ್ಟಡಗಳು ಲಭ್ಯವಾಗುತ್ತಿಲ್ಲ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ಪಂಚಾಯಿತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು, ಈಗಾಗಲೇ 23 ಕಡೆ ನಿವೇಶನ ದೊರೆತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಸಭೆಗೆ ತಿಳಿಸಿದರು.

ಹೆಚ್ಚುವರಿಜಿಲ್ಲಾಧಿಕಾರಿ ದುರಗೇಶ್ ಇದ್ದರು. ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಯೂಸೂಫ್ ಖಾನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT