ಗುರುವಾರ , ಮೇ 6, 2021
24 °C
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೇಳಿಕೆ

ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್ ನಿಲ್ಲಿಸಲಿ: ಎಂ.ಪಿ.ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ‘ಸಾರಿಗೆ ನೌಕರರ ಮುಷ್ಕರದ ವಿಷಯದಲ್ಲಿ ಕಾಂಗ್ರೆಸ್‌ನವರು ಬೆಂಕಿ ಹಚ್ಚಿ ರಾಜಕೀಯ ಮಾಡಿಕೊಳ್ಳುವುದನ್ನು ನಿಲ್ಲಿಸಿ, ಸಮಸ್ಯೆ ಬಗೆಹರಿಸಲು ಸರ್ಕಾರ ಜೊತೆ ಕೈಜೊಡಿಸಬೇಕು’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮುಖಂಡರು ಪೆಟ್ರೋಲ್‌ ಹಾಗೂ ಬೆಂಕಿ ಪಟ್ಟಣವನ್ನು ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ. ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೋ ಅಲ್ಲಿ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚುವ ಕೆಲಸ ಮಾಡಿಕೊಂಡು ಬಂದಿದ್ದಾರೆ‘ ಎಂದು ಅವರು ಆರೋಪಿಸಿದರು.

‘ಕಾಂಗ್ರೆಸ್ ಸರ್ಕಾರದಲ್ಲಿ ಸಾರಿಗೆ ನೌಕರರ ಸಮಸ್ಯೆ ಏಕೆ ಬಗೆಹರಿಯಲಿಲ್ಲ? ಕೊಡಿಹಳ್ಳಿ ಚಂದ್ರಶೇಖರ ಹಾಗೂ ಕಾಂಗ್ರೆಸ್ ಚಿತಾವಣೆಯಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಸಾರಿಗೆ ನೌಕರರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಅದಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕೊಡಿಹಳ್ಳಿ ಚಂದ್ರಶೇಖರ ಅವರೇ ನೇರ ಹೊಣೆ‘ ಎಂದು ದೂರಿದರು.

‘ಕೋವಿಡ್‌ ವಿಷಯದಲ್ಲೂ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಲಿಲ್ಲ. ಪ್ರತಿಪಕ್ಷವಾದ ಕಾಂಗ್ರೆಸ್ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ’ ಎಂದು ಟೀಕಿಸಿದರು.

‘ಮಸ್ಕಿ ಕ್ಷೇತ್ರದ ಪ್ರತಿ ಬೂತ್‌ನಲ್ಲಿಯೂ ಬಿಜೆಪಿ ಹೆಚ್ಚಿನ ಮತ ಪಡೆಯಲಿದೆ. ಪ್ರತಾಪಗೌಡ ಪಾಟೀಲ ಹಣಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಸ್ಪಂದಿಸದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದಾರೆ.  ಕ್ಷೇತ್ರದಾದ್ಯಂತ ಉತ್ತಮ ವಾತಾವರಣ ಇದ್ದು ಪ್ರತಾಪಗೌಡ ಪಾಟೀಲ 25 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಲಿದ್ದಾರೆ ಎಂದರು.  

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಾನಂದ ಯಾದವ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಇದ್ದರು.

ಬಣ್ಣದ ಓಕುಳಿ ಆಡಿದ ರೇಣುಕಾಚಾರ್ಯ: ಯುಗಾದಿ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಬುಧವಾರ ನಡೆದ ಬಣ್ಣದ ಓಕುಳಿಯಲ್ಲಿ ಯುವಕರೊಂದಿಗೆ ಎಂ.ಪಿ.ರೇಣುಕಾಚಾರ್ಯ ಸೇರಿಕೊಂಡು ಬಣದ ಓಕುಳಿ ಆಡಿ ಎಲ್ಲರ ಗಮನ ಸೆಳೆದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರ ಪರವಾಗಿ ಮತಯಾಚನೆ ಮಾಡುತ್ತಿದ್ದ ವೇಳೆ ಕಾರಿನಿಂದ ಕೆಳಗೆ ಇಳಿದ ರೇಣುಕಾಚಾರ್ಯ ಯುವಕರ ಜೊತೆ ಬಣ್ಣದ ಹಬ್ಬ ಆಚರಿಸುವ ಮೂಲಕ ಯುಗಾದಿ ಹಬ್ಬದ ಶುಭ ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು