ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಬಿಸಿಲ ತಾಪ: ದೇಶಿ ‘ಫ್ರಿಜ್‌’ಗಳಿಗೆ ಹೆಚ್ಚಿದ ಬೇಡಿಕೆ

ಮಹಾರಾಷ್ಟ್ರ, ರಾಜಸ್ತಾನ ಹಾಗೂ ಹೈದರಾಬಾದ್‌ನಿಂದ ಬಂದಿರುವ ವ್ಯಾಪಾರಿಗಳು
Last Updated 15 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಬಿಸಿಲ ತಾಪ ಹೆಚ್ಚುತ್ತಿದ್ದಂತೆನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿ ತರಹೇವಾರಿ ಮಣ್ಣಿನ ಮಡಿಕೆಗಳ ರಾಶಿ ಗಮನ ಸೆಳೆಯುತ್ತಿದ್ದು, ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಸ್ಥಳೀಯ ಹಾಗೂ ಹೊರರಾಜ್ಯಗಳ ಮಣ್ಣಿನ ಮಡಿಕೆ ವ್ಯಾಪಾರಿಗಳು ನಾಲ್ಕು ತಿಂಗಳು ನಡೆಯುವ ವ್ಯಾಪಾರಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ತಂದುಕೊಂಡಿದ್ದಾರೆ. ಮಡಿಕೆಗಳ ಗಾತ್ರವನ್ನು ಆಧರಿಸಿ ದರ ನಿಗದಿ ಮಾಡಲಾಗಿದೆ. ಕನಿಷ್ಠ ₹150 ರಿಂದ ₹400 ವರೆಗೂ ದರವಿದೆ. ಒಂದು ಲೀಟರ್‌ನಿಂದ 30 ಲೀಟರ್‌ವರೆಗೂ ನೀರು ಹಿಡಿದುಕೊಳ್ಳುವ ಸಾಮರ್ಥ್ಯದ ಮಡಿಕೆಗಳಿವೆ.

ಈ ಮೊದಲು ಕೈ ಕುಸುರಿಯಿಂದ ಮಣ್ಣಿನ ಮಡಿಕೆಗಳನ್ನು ತಯಾರಿಸಲಾಗುತ್ತಿತ್ತು. ಇದೀಗ ಹೈದರಾಬಾದ್‌ ಹಾಗೂ ರಾಜಸ್ತಾನಗಳಲ್ಲಿ ತರಹೇವಾರಿ ಮಣ್ಣಿನ ಗಡಿಗೆ, ಮಡಿಕೆ, ಪಾತ್ರೆಗಳು, ಒಂದು ಲೀಟರ್‌ ನೀರು ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುವ ಬಾಟಲ್‌ ಆಕಾರದ ಮಣ್ಣಿನ ಕುಡಿಕೆಗಳು ಸೇರಿದಂತೆ ಹತ್ತಾರು ಬಗೆಯ ಮಣ್ಣಿನ ಸಾಧನಗಳನ್ನು ಕಾರ್ಖಾನೆ ಯಂತ್ರಗಳಲ್ಲಿ ತಯಾರಿಸಿ ರವಾನಿಸುತ್ತಿವೆ. ಸಗಟು ರೂಪದಲ್ಲಿ ಅಲ್ಲಿ ಖರೀದಿಸಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಎಲ್ಲವೂ ತುಂಬಾ ಸುಂದರ, ಚಿತ್ತಾಕರ್ಷಕವಾಗಿವೆ. ಕುಸುರಿ ಕೆಲಸ ಹೆಚ್ಚಾಗಿರುವ ಮಣ್ಣಿನ ಮಡಿಕೆಗಳ ದರ ಸ್ವಲ್ಪ ಹೆಚ್ಚಾಗಿದೆ.

ಕೆಂಪು ಮಣ್ಣು ಹಾಗೂ ಕಪ್ಪು ಮಣ್ಣು ಎರಡು ಬಣ್ಣದ ಮಡಿಕೆಗಳಿವೆ. ಕಪ್ಪು ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸುವ ನೀರು ಬೇಗನೆ ಹಾಗೂ ಹೆಚ್ಚು ತಂಪಾಗಿರುತ್ತದೆ. ಆದರೆ, ಮಡಿಕೆಯಿಂದ ನೀರು ಜಿನುಗುತ್ತದೆ. ಕೆಂಪು ಬಣ್ಣದ ಮಡಿಕೆಗಳಲ್ಲಿ ನೀರು ಜಿನುಗುವುದಿಲ್ಲ. ಆದ್ದರಿಂದ ಕೆಂಪು ಬಣ್ಣದ ಮಡಿಕೆಗಳಿಗೆ ಹೆಚ್ಚು ಬೇಡಿಕೆ ಇದೆ.

ರಾಯಚೂರಿನ ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ, ಚಂದ್ರಮೌಳೇಶ್ವರ ವೃತ್ತಗಳಲ್ಲಿ ಮಡಿಕೆ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಸಿಲಿನ ತಾಪಮಾನ ಸಹಿಸಿಕೊಳ್ಳಲು ಜನರು ತಂಪು ನೀರು ಬಯಸುತ್ತಾರೆ. ಇದಕ್ಕಾಗಿಯೇ ನೀರಿನ ದಾನಿಗಳು ಸಾಮಾನ್ಯವಾಗಿ ಮಣ್ಣಿನ ಅರವಟಿಗೆಗಳನ್ನು ಅಲ್ಲಲ್ಲಿ ಸ್ಥಾಪಿಸಿ, ತಂಪು ನೀರು ಒದಗಿಸುತ್ತಾರೆ.

ಬಣ್ಣ ಬಳಿದಿರುವ, ಚಿತ್ರಬಿಡಿಸಿದ ಮಣ್ಣಿನ ಮಡಿಕೆಗಳಿಗೆ ಹೆಚ್ಚು ದರವಿದೆ. ಇವು ನೋಡುವುದಕ್ಕೆ ಚೆಂದವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಮತ್ತು ಖಾಸಗಿ ಕಚೇರಿಗಳಲ್ಲಿ ನೀರು ಸಂಗ್ರಹಿಸಿಕೊಳ್ಳಲು ಇಂತಹ ಮಡಿಕೆಗಳನ್ನು ಖರೀದಿಸುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT