ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ತರಹೇವಾರಿ ಮಣ್ಣಿನ ಮಡಿಕೆಗಳ ಭರಾಟೆ

ನೈಸರ್ಗಿಕವಾಗಿ ನೀರು ತಂಪಾಗಿಸಲು ಸಾಂಪ್ರದಾಯಕ ಪದ್ಧತಿಯ ಮೊರೆ
Last Updated 27 ಫೆಬ್ರುವರಿ 2023, 2:58 IST
ಅಕ್ಷರ ಗಾತ್ರ

ರಾಯಚೂರು: ಫೆಬ್ರುವರಿ ಎರಡನೇ ವಾರದಿಂದ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಜನರು ತಂಪು ಕೊಡುವ ಸಾಮಗ್ರಿಗಳತ್ತ ಗಮನ ಹರಿಸತೊಡಗಿದ್ದಾರೆ. ಮುಖ್ಯವಾಗಿ ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದು ಎಲ್ಲೆಡೆ ಕಾಣಿಸುತ್ತಿದೆ.

ಇದಕ್ಕೆ ಪೂರಕವಾಗಿ ಬೇಸಿಗೆ ಆರಂಭವಾಗುವ ಮೊದಲೇ ತರಹೇವಾರಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವವರು ಕಾಣಿಸುತ್ತಿದ್ದಾರೆ. ರಾಯಚೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಹೆದ್ದಾರಿಯ ಎರಡು ಬದಿಗಳಲ್ಲಿ ಮಣ್ಣಿನ ಮಡಿಕೆಗಳನ್ನು ವ್ಯಾಪಾರಿಗಳು ರಾಶಿ ಹಾಕಿದ್ದಾರೆ. ಬಹುತೇಕ ವ್ಯಾಪಾರಿಗಳು ರಾಜಸ್ತಾನದಿಂದಲೆ ಮಡಿಕೆಗಳನ್ನು ಸಗಟು ರೂಪದಲ್ಲಿ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದಾರೆ.

ಒಂದು ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಮಣ್ಣಿನ ಬಾಟಲಿ ಚಿತ್ತಾಕರ್ಷಕವಾಗಿದೆ. ನೀರು ಕುಡಿಯುವುದಕ್ಕೆ ಬಳಕೆ ಮಾಡುವ ಜಗ್ಗ ಕೂಡಾ ಮಣ್ಣಿನದ್ದು ಲಭ್ಯವಿದೆ. ಕೆಂಪು ಜೇಡಿ ಮಣ್ಣಿನಿಂದ ಮಡಿಕೆಗಳನ್ನು ಕಲಾತ್ಮಕವಾಗಿ ಸಿದ್ಧಪಡಿಸಲಾಗಿದೆ. ಒಂದಕ್ಕಿಂತ ಇನ್ನೊಂದು ಸುಂದರವಾಗಿ ಕಾಣುತ್ತಿವೆ. ಎಂಟು ಲೀಟರ್‌ ಸಾಮರ್ಥ್ಯದ ಹರಿವೆಯಿಂದ ಹಿಡಿದು 40 ಲೀಟರ್‌ವರೆಗೂ ತುಂಬಿಸಿಡುವಷ್ಟು ಹರಿವೆಗಳಿವೆ.

ಬಣ್ಣಬಣ್ಣದ ಚಿತ್ರ ಬಿಡಿಸಿದ ಮಡಿಕೆಗಳ ದರ ಸ್ವಲ್ಪ ಹೆಚ್ಚು. 10 ಲೀಟರ್‌ ಸಾಮರ್ಥ್ಯದ ಕೆಂಪು ಮಣ್ಣಿನ ಹರಿವೆಯ ದರ ₹400 ರಿಂದ ಆರಂಭ. ಇದು ಮಾಮೂಲಿಗಿಂತ ಸ್ವಲ್ಪ ದಪ್ಪಗಾಗಿರುತ್ತದೆ. ಹೀಗಾಗಿ ಕೆಂಪು ಬಣ್ಣದ ಮಡಿಕೆಯ ಗಾತ್ರ ಹೆಚ್ಚಾಗಿದಷ್ಟು ದರ ಹೆಚ್ಚಳವಿದೆ. ಇದರಲ್ಲೇ ತೆಳ್ಳಗಿನ ಮಡಿಕೆಗಳ ದರ ಅರ್ಧದಷ್ಟು ಕಡಿಮೆ. ಕಪ್ಪು ಬಣ್ಣದ ಮಡಿಕೆಗಳ ದರ ಕೂಡಾ ಕಡಿಮೆಯೆ ಇದೆ. ಕಳೆದ ವರ್ಷದಲ್ಲಿದ್ದ ದರಕ್ಕೆ ಹೋಲಿಸಿದರೆ ಈ ವರ್ಷ ಶೇ 30 ರಷ್ಟು ದರಗಳು ಏರಿಕೆಯಾಗಿವೆ.

‘ಬೇಸಿಗೆ ಆರಂಭದಲ್ಲಿ ಪ್ರತಿವರ್ಷ ರಾಜಸ್ತಾನದಿಂದ ಮಣ್ಣಿನ ಮಡಿಕೆಗಳನ್ನು ಸಗಟು ಲೆಕ್ಕದಲ್ಲಿ ಒಂದು ಲಾರಿ ಖರೀದಿಸಿ ತಂದು ಮಾರಾಟ ಮಾಡುತ್ತೇನೆ. ಮೂರು ತಿಂಗಳಲ್ಲಿ ₹50 ಸಾವಿರವರೆಗೂ ಲಾಭ ಸಿಗುತ್ತದೆ. ಸಾರಿಗೆ ವೆಚ್ಚ ಹೆಚ್ಚಾಗಿರುವುದು ಈ ಸಲ ಹೊಡೆತ ಬಿದ್ದಿದೆ. ಮೊದಲಿಗಿಂತಲೂ ಹೆಚ್ಚು ದಿನ ಬಾಳಿಕೆ ಬರುವ ಮಡಿಕೆಗಳು ಈ ವರ್ಷ ಸಿಗುತ್ತಿವೆ’ ಎಂದು ರಾಯಚೂರಿನ ಮಲ್ಲದಗುಡ್ಡ ಗ್ರಾಮದ ವೀರೇಶ ’ಪ್ರಜಾವಾಣಿ‘ಗೆ ತಿಳಿಸಿದರು.

ಮಡಿಕೆಗಳ ದರವು ಎಲ್ಲ ವ್ಯಾಪಾರಿಗಳದ್ದು ಒಂದೇ ರೀತಿಯಾಗಿಲ್ಲ. ಎಲ್ಲರ ಕಡೆಗೂ ವಿಚಾರಿಸಿ ಖರೀದಿಸಿದರೆ ₹100 ರವರೆಗೂ ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಬೇಸಿಗೆಯಲ್ಲಿ ಮಾಮೂಲಿ ನೀರು ಬಿಸಿಯಾಗುವುದನ್ನು ತಪ್ಪಿಸಲು ಜನರು ಮಡಿಕೆಗಳ ಮೊರೆ ಹೋಗುವುದು ಅನಿವಾರ್ಯ. ರೆಫ್ರಿಜಿರೇಟರ್‌ಗಿಂತ ನೈಸರ್ಗಿಕವಾಗಿ ನೀರನ್ನು ತಂಪಾಗಿಸಿಕೊಂಡು ಸೇವಿಸುವುದು ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದಲೂ ಉತ್ತಮ ವಿಧಾನ ಎಂಬುದು ಜನರ ಅನಿಸಿಕೆ.

ಈ ಮಧ್ಯೆ ಸ್ಥಳೀಯ ಮಣ್ಣಿನ ಮಡಿಕೆಗಳಿಗೆ ಅಷ್ಟೊಂದು ಬೇಡಿಕೆ ಇಲ್ಲ. ರಾಜಸ್ತಾನ ಮಡಿಕೆಗಳಿಗೆ ನಲ್ಲಿಗಳನ್ನು ಜೋಡಿಸಿದ್ದು, ಕಲಾತ್ಮಕವಾಗಿರುವುದರಿಂದ ಅವುಗಳನ್ನೆ ಜನರು ಖರೀದಿಸುತ್ತಿದ್ದಾರೆ. ಅಡುಗೆ ಮಾಡುವುದಕ್ಕೆ, ಹಬ್ಬ ಹರಿದಿನ, ತಿಥಿ ಕಾರ್ಯಕ್ರಮಗಳಿಗೆ ಮಾತ್ರ ಸ್ಥಳೀಯರು ತಯಾರಿಸುವ ಮಡಿಕೆಗಳನ್ನು ಜನರು ಖರೀದಿಸುತ್ತಿದ್ದಾರೆ.

ಬೇಸಿಗೆ ಜೊತೆ ಮಡಿಕೆ ಮಾರಾಟವೂ ಪ್ರಾರಂಭ

ಸಿರವಾರ: ಬೇಸಿಗೆ ಬಿಸಿಲು ಏರಿಕೆಯಾಗುತ್ತಿದ್ದು, ನೀರಿನ ದಾಹ ತಣಿಸಲು ಫ್ರಿಜ್ ನೀರಿಗಿಂತಲೂ ಮಣ್ಣಿನ ಮಡಿಕೆಯಲ್ಲಿನ ನೀರೇ ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಸಾರ್ವಜನಿಕರು ಮಣ್ಣಿನ ಮಡಿಕೆ ಕೊಳ್ಳಲು ಪ್ರಾರಂಭಿಸಿದ್ದಾರೆ.

ಪಟ್ಟಣದಲ್ಲಿ ಬಯಲು ಆಂಜನೇಯ ದೇವಸ್ಥಾನ ಮತ್ತು ಪೊಲೀಸ್ ಠಾಣೆ ಎದುರುಗಡೆ ಮಾರಾಟ ಅಂಗಡಿಗಳಿದ್ದು, ಈಗಾಗಲೇ ಅಗತ್ಯ ಮಡಿಕೆಗಳನ್ನು ಮಾರಾಟಕ್ಕೆ ಸಂಗ್ರಹಿಸಲಾಗಿದೆ.

ಅಳತೆಗೆ ತಕ್ಕಂತೆ ಒಂದು ಮಣ್ಣಿನ ಮಡಿಕೆಗೆ ₹100, ₹200, ₹400 ದರವನ್ನು ನಿಗದಿಪಡಿಸಲಾಗಿದೆ.

ಮಾರಾಟ ಮತ್ತು ಸಂಗ್ರಹಿಸುವಾಗ ಮಡಿಕೆಗಳು ಒಡೆಯುವ ಸಾಧ್ಯತೆ ಇದ್ದರೂ ಮನೆತನದ ವ್ಯಾಪಾರ ಆಗಿರುವುದರಿಂದ ಹೆಚ್ಚಿನ ಲಾಭದ ನಿರೀಕ್ಷೆ ಇಲ್ಲದೇ ಪ್ರತಿವರ್ಷ ವ್ಯಾಪಾರವನ್ನು ಕೈಬಿಟ್ಟಿಲ್ಲ ಎನ್ನುತ್ತಾರೆ ವ್ಯಾಪಾರಿ ಅಮರೇಶ ಕುಂಬಾರ್.

ಹೊರರಾಜ್ಯದ ಮಡಿಕೆಗಳ ಮಾರಾಟ ಜೋರು

ಮಾನ್ವಿ: ಬೇಸಿಗೆ ಸಮೀಪಿಸುತ್ತಿದ್ದಂತೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದಲ್ಲಿ ‌ಮಣ್ಣಿನ ಗಡಿಗೆ( ಮಡಿಕೆ)ಗಳ ಮಾರಾಟದ ಭರಾಟೆ ಜೋರಾಗಿದೆ. ಪಟ್ಟಣದ ರಿಕ್ರಿಯೇಶನ್ ಕ್ಲಬ್ ಹಾಗೂ ಕೋರ್ಟ್ ಹತ್ತಿರ ಮಾರಾಟಕ್ಕಿಟ್ಟಿರುವ ಮಡಿಕೆಗಳು ಗಮನ ಸೆಳೆಯುತ್ತಿವೆ. ಈ ಬಾರಿ ವಿಶೇಷವಾಗಿ ರಾಜಸ್ತಾನ ಹಾಗೂ ಆಂಧ್ರಪ್ರದೇಶದ ಕೋಸಗಿ ಪಟ್ಟಣದಲ್ಲಿ ತಯಾರಿಸಲಾದ ಆಕರ್ಷಕ ಮಡಿಕೆಗಳು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿವೆ.

ಸಾಮಾನ್ಯ ಗಡಿಗೆ ₹250ರಿಂದ ₹300, ಹೊರರಾಜ್ಯದಿಂದ ತರಿಸಲಾದ ಮಡಿಕೆಗಳು₹650ರಿಂದ ₹700 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಣ್ಣಿನಲ್ಲಿ ಆಕರ್ಷಕವಾಗಿ ತಯಾರಿಸಲಾದ ನೀರಿನ ಬಾಟಲ್, ಜಗ್, ಹಾಗೂ ಗ್ಲಾಸ್ ಗಳನ್ನು ಸಹ ಮಾರಾಟಕ್ಕಿಡಲಾಗಿದೆ. ‘ಈಗ‌ ಪ್ರತಿ ದಿನ ಸುಮಾರು 50 ಮಡಿಕೆಗಳು ‌ಮಾರಾಟವಾಗುತ್ತಿವೆ .‌ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಡಿಕೆಗಳು ಪ್ರತಿದಿನ ಮಾರಾಟವಾಗಬಹುದು' ಎಂದು ‌ಮಡಿಕೆ ವ್ಯಾಪಾರಿ ಅಂಬಿಕಾ ತಿಳಿಸಿದರು.

ಮಡಿಕೆಗಳಿಗೆ ಭಾರಿ ಬೇಡಿಕೆ

ದೇವದುರ್ಗ: ಬೇಸಿಗೆ ಪ್ರಾರಂಭದಲ್ಲಿಯೇ ತಾಪದಿಂದ ತತ್ತರಿಸಿ ಹೋಗಿರುವ ಪಟ್ಟಣದ ಜನರು ತಂಪು ಪಾನೀಯ, ಹಣ್ಣಿನ ರಸದ ಮೊರೆ ಹೋಗಿದ್ದಾರೆ. ಸುಡು ಬೇಸಿಗೆಯ ದಿನಗಳಲ್ಲಿ ಬಡವರ ಪ್ರಿಡ್ಜ್‌ ಎಂದೇ ಕರೆಯುವ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಬಂದಿದೆ.

ಪಟ್ಟಣದ ಹೊಸ ಬಸ ನಿಲ್ದಾಣ ಮುಂಭಾಗದಲ್ಲಿ, ಕುಂಬಾರ ಓಣಿಯಲ್ಲಿ ಮಣ್ಣಿನ ಮಡಿಕೆಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.

20 ಲೀಟರ್‌ನಿಂದ 30 ಲೀಟರ್ ನೀರು ಸಂಗ್ರಹದ ಮಡಿಕೆಗಳು ₹450ರವರೆಗೂ ಮಾರಾಟಕ್ಕಿವೆ. 10 ಲೀಟರ್ ನಿಂದ 15 ಲೀಟರ್ ಮಡಿಕೆ ₹200 ರಿಂದ ₹350 ರವರೆಗೆ ಬೆಲೆ ಇದೆ ಎಂದು ಸೂಗಪ್ಪ ಕುಂಬಾರ ಹೇಳಿದರು.

‘ಕೆಂಪು ಮಣ್ಣಿನಲ್ಲಿ ಮಡಿಕೆ ಪಟ್ಟಣದಲ್ಲಿ ತಯಾರಿಸಲಾಗುತ್ತದೆ. ಈ ಮಡಿಕೆಗಳಲ್ಲಿ ನೀರು ಇಟ್ಟರೆ ತಣ್ಣಗೆ ಇರುತ್ತದೆ. ಹೆಚ್ಚಿನ ಜನರು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಪ್ರತಿ ನಿತ್ಯ 20ರಿಂದ 25 ಮಡಿಕೆಗಳು ಮಾರಾಟವಾಗುತ್ತವೆ. ಮನೆಯಲ್ಲಿ ತಯಾರಿಸಿದ ಮಡಿಕೆಗೆ ಹೆಚ್ಚು ಬೇಡಿಕೆ ಇದೆ. ಹಲವು ಆಧುನಿಕ ಶೈಲಿಯ ಮಡಿಕೆಗಳನ್ನು ಕಲಬುರಗಿಯಿಂದ ತಂದು ಮಾರಾಟ ಮಾಡಲಾಗುತ್ತಿದೆ. ಸಾರಿಗೆ ವೆಚ್ಚ ತೆಗೆದು ಒಂದು ಮಡಿಕೆಗೆ ₹50ರಿಂದ ₹100 ಉಳಿಯುತ್ತದೆ ಎಂದು ಹೇಳಿದರು.

ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಜನರು ಕೂಡಾ ಇಲ್ಲಿಂದ ಮಡಿಕೆ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ.

-ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಬಸವರಾಜ ಭೋಗಾವತಿ, ಕೃಷ್ಣಾ ಪಿ., ಯಮನೇಶ ಗೌಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT