ಮಂಗಳವಾರ, ಸೆಪ್ಟೆಂಬರ್ 17, 2019
27 °C
ಲಿಂಗಸುಗೂರು ತಾಲ್ಲೂಕಿನ ಕುಪ್ಪಿಗುಡ್ಡ, ಹನುಮನಗುಡ್ಡ, ಜಲದುರ್ಗ, ಚಿಕ್ಕಹೆಸರೂರು

ಮುಸ್ಲಿಮರಿಲ್ಲದ ಊರುಗಳಲ್ಲಿ ಮೊಹರಂ ಸಂಭ್ರಮ

Published:
Updated:
Prajavani

ಲಿಂಗಸುಗೂರು: ಮೊಹರಂ ಅಂದಾಕ್ಷಣ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಎಂಬುದು ವಾಡಿಕೆ. ಆದರೆ, ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಹಿಂದು ಸಮುದಾಯದವರೇ ಮೊಹರಂ ಆಚರಣೆ ಮಾಡುತ್ತಿರುವುದು ವಿಶೇಷ.

ಮುದಗಲ್ಲ ಮತ್ತು ಆನೆಹೊಸೂರು ಗ್ರಾಮಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು ಹೀಗಾಗಿ ಮೊಹರಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಬಂದಿದೆ. ಮೊಹರಂ ಹಬ್ಬದ ಸಾಂಪ್ರದಾಯಿಕ ಆಚರಣೆಗಳನ್ನು ಮುಸ್ಲಿಂ ಕುಟುಂಬಸ್ಥರೆ ವಹಿಸುವುದು ವಾಡಿಕೆ. ಆದರೆ, ಉಳಿದಂತೆ ಪ್ರತಿಯೊಂದು ಕಾರ್ಯಕ್ರಮಗಳನ್ನು ಹಿಂದು, ಮುಸ್ಲಿಮರು ಸಾಮರಸ್ಯದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿರುವುದು ನಿದರ್ಶನವಾಗಿದೆ.

ಇದನ್ನೂ ಓದಿ: ಮುಸ್ಲಿಮರೇ ಇಲ್ಲದ ಊರಿನಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ..!

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ಇಲ್ಲದೆ ಹೋಗಿದ್ದರು ಕೂಡ ಕುಪ್ಪಿಗುಡ್ಡ, ಹನುಮನಗುಡ್ಡ, ಜಲದುರ್ಗ, ಚಿಕ್ಕಹೆಸರೂರು, ಫೂಲಭಾವಿ, ಯರಗೋಡಿ, ಹಾಲಭಾವಿ, ಹಿರೆಉಪ್ಪೇರಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮೌಲ್ವಿ ಸಹಕಾರದಿಂದ ಹಿಂದುಗಳೆ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಮೇಲ್ಕಾಣಿಸಿದ ಗ್ರಾಮಸ್ಥರು ತಾಲ್ಲೂಕಿನ ಅಕ್ಕಪಕ್ಕದ ಗ್ರಾಮದ ಮುಸ್ಲಿಂ ಸಮುದಾಯದ ಮೌಲ್ವಿಗಳನ್ನು ಓದಿಕೆ ಮಾಡಲು ನೇಮಿಸಿಕೊಂಡಿದ್ದಾರೆ. ಉಳಿದಂತೆ ಅಲಾಯಿ ದೇವರ ಪ್ರತಿಷ್ಠಾಪನೆ, ದಟ್ಟೆ (ಬಟ್ಟೆ) ಉಡಿಸುವುದು, ಅಲಾಯಿಗಳನ್ನು ಒತ್ತೊಯ್ಯುವುದು ಸೇರಿದಂತೆ ಪ್ರತಿಯೊಂದು ಆಚರಣೆಗಳನ್ನು ಕೆಲ ಕುಟುಂಬಸ್ಥರು ಸಾಂಪ್ರದಾಯಿಕ ಆಚರಣೆ ಎಂಬಂತೆ ಹಂಚಿಕೊಂಡು ಕ್ರಮಬದ್ಧವಾಗಿ ಆಚರಿಸುತ್ತಾರೆ.

ಕುಪ್ಪಿಗುಡ್ಡ ಗ್ರಾಮದ 300ಕ್ಕೂ ಹೆಚ್ಚು ಕುಟುಂಬಗಳ ಪೈಕಿ ಶೇ 95ರಷ್ಟು ಉಪ್ಪಾರ ಜನಾಂಗ ಇದ್ದಾರೆ. ಹಲವು ವರ್ಷಗಳಿಂದ ಮುಸ್ಲಿಂ ಧರ್ಮದ ಕೆಲ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಆ ಪೈಕಿ ಮೊಹರಂ ಆಚರಣೆಗೆ ಮಸೀದಿ ನಿರ್ಮಿಸಿಕೊಂಡು ಎಲ್ಲಾ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಓದಿಕೆ ಮಾಡುವ ಮೌಲ್ವಿಗೆ ಬೆಳೆಗಳ ರಾಶಿ ಮಾಡುವಾಗ ಭಕ್ಷಿಸ ರೂಪದಲ್ಲಿ ಕಾಣಿಕೆ ನೀಡುವುದು ವಾಡಿಕೆ.

ಪ್ರಜಾವಾಣಿ’ ಈ ಕುರಿತು ಕುಪ್ಪಿಗುಡ್ಡ ಸಾಬಣ್ಣ ನೆಲೋಗಿ, ಚಿಕ್ಕಹೆಸರೂರ ಶಾಂತಕುಮಾರ ಪಟ್ಟೇದ ಅವರನ್ನು ಸಂಪರ್ಕಿಸಿದಾಗ, ‘ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಡಿ ದೇವರಿಗೆ ಜಾತಿ, ಧರ್ಮಗಳ ಸಂಕೋಲೆ ಹಾಕದೆ, ಹಿಂದು, ಮುಸ್ಲಿಂರೆಲ್ಲ ಒಂದು ಎಂಬ ಭಾವನೆಯಿಂದ ಆಚರಣೆ ಮುಂದುವರೆಸಿಕೊಂಡು ಬಂದಿದ್ದೇವೆ. ನಮ್ಮಲ್ಲಿ ಮುಸ್ಲಿಂ ಜನಾಂಗ ಇಲ್ಲದೆ ಹೋದರು ಆಚರಣೆ ಸ್ಥಗಿತಗೊಳಿಸಿಲ್ಲ’ ಎಂದು ಹರ್ಷ ಹಂಚಿಕೊಂಡರು.

Post Comments (+)