ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌದಿ ಹೊಲಿಯುವ ಮುಮ್ತಾಜ್‌ಗೆ ಸಂಕಷ್ಟದ ಸಮಯ

ವರ್ಷವಿಡೀ ಊರಿಂದ ಊರಿಗೆ ಅಲೆಯುವುದೇ ಜೀವನ
Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ರಾಯಚೂರು: ಪ್ರತಿನಿತ್ಯ ಒಂದೂರಿನಿಂದ ಇನ್ನೊಂದು ಊರಿಗೆ ಅಲೆದು ಮನೆ ಅಂಗಳದಲ್ಲೇ ಕುಳಿತು ಕೌದಿ ಹೊಲೆದು ಕೊಡುವ ಮುಮ್ತಾಜ್‌ಗೆ ಕೊರೊನಾ ಲಾಕ್‌ಡೌನ್‌ ಸಂಕಷ್ಟ ಸಮಯ ತಂದೊಡ್ಡಿದೆ.

ಈಗ ಕೌದಿ ಹೊಲೆದು ಕೊಡುವಂತೆ ಗ್ರಾಮದಲ್ಲಿ ಯಾರೂ ಕೇಳುವುದಿಲ್ಲ ಎನ್ನುವ ಆತಂಕ ಮುಮ್ತಾಜ್‌ ಅವರಿಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ, ಊರಿನ ಶಾಲೆ ಅಥವಾ ದೊಡ್ಡ ಮರದ ಕೆಳಗೆ ಅಥವಾ ದೇವಸ್ಥಾನಗಳ ಪಕ್ಕದಲ್ಲಿ ಉಳಿದುಕೊಳ್ಳುವುದಕ್ಕೆ ಪೊಲೀಸರು ಬಿಡುತ್ತಿಲ್ಲ ಎನ್ನುವ ಚಿಂತೆ ಕಾಡುತ್ತಿರುವುದಾಗಿ ಹೇಳಿದರು.

ರಾಯಚೂರು ತಾಲ್ಲೂಕಿನ ಕಮಲಾಪುರದಲ್ಲಿ 10 ಕೌದಿಗಳನ್ನು ಹೊಲೆದು ಕೊಟ್ಟು, ಅಲ್ಲಿಯೇ ಉಳಿದುಕೊಂಡು, ಮರುದಿನ ಉಡುಮಗಲ್‌–ಖಾನಾಪುರ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಜೊತೆಯಲ್ಲಿ ಮುಮ್ತಾಜ್‌ ಹಿರಿಯಕ್ಕ ಹುಸೇನಬೀ, ಪುತ್ರ ಮೌಲಾಲಿ ಇದ್ದರು. ಸೂಜಿ, ದಾರ, ಒಂದಿಷ್ಟು ಬಟ್ಟೆಗಳಿದ್ದ ಗಂಟು ಇಬ್ಬರ ತಲೆ ಮೇಲಿತ್ತು. ಕೈಯಲ್ಲಿ ನೀರಿನ ಕೊಡ ಹಿಡಿದುಕೊಂಡಿದ್ದ ಮೌಲಾಲಿ, ಇಬ್ಬರಿಗೂ ಸಹಾಯಕ. ಮೂವರು ಅಕ್ಷರಜ್ಞಾನದಿಂದ ದೂರ. ಮೊಬೈಲ್‌ ಅಗತ್ಯವೇ ಇಲ್ಲದ ಸಂಚಾರಿ ಬದುಕು ಇವರದ್ದು.

ತಾಯಿ ಕಾಲದಿಂದಲೂ ಕೌದಿ ಹೊಲೆಯುವ ಕೆಲಸವನ್ನು ನೆಚ್ಚಿಕೊಂಡಿರುವ ಮುಮ್ತಾಜ್‌, ಹುಸೇನಬೀ ಅವರು ರಾಯಚೂರಿನ ಜಲಾಲ್‌ನಗರದಲ್ಲಿ ಒಂದು ಜೋಪಡಿ ಕಟ್ಟಿಕೊಂಡಿದ್ದಾರೆ. ಆದರೆ, ವರ್ಷವಿಡೀ ಸಂಚಾರದಲ್ಲೇ ಕಳೆಯುವುದಾಗಿ ಹೇಳಿದರು. ರಾಯಚೂರಿನ ಹಳ್ಳಿಗಳು, ಸಿರವಾರ, ಮಸ್ಕಿ, ಬಳಗಾನೂರ, ಗಂಗಾವತಿ, ಚಿನ್ನೂರು, ಕಲಬಂಗಿ, ಬಂಗಾರಟ್ಟಿ... ಹೀಗೆ ದೇಶಾಂತರ ತಿರುಗುವವರು.

‘ಯಾವುದೋ ಹುಳಾ ಬಂದೈತಿ ಅಂಥ. ಎಲ್ಲರೂ ಮನಿಯೊಳಗ ಅದಾರ್‌. ಊಟ ಇಲ್ಲಂದ್ರು ನೀರು ಕುಡ್ಕೊಂಡು ಜೀವನಾ ಮಾಡ್ತೀವಿ. ಒಂದು ಕೌದಿ ಹೊಲ್ದು ಕೊಡಾಕ್‌ ₹160 ತಗೋಂತಿನಿ. ಬಂದ್‌ ಆಗಿದ್ದು ಯಾವಾಗ ಮುಗಿತೈತೋ ಏನೋ. ಊರಾಗ ಹೋಗಬೇಕಂಥ ಅನಿಸಿಲ್ಲ. ಹಳ್ಳಿಯೊಳಗ ಇದ್ರ, ಯಾರಾದ್ರೂ ಊಟಾ ಕೊಡ್ತಾರ’ ಎಂದು ಮುಮ್ತಾಜ್‌ ಅಳಲು ತೋಡಿಕೊಂಡರು.

ಪತಿ ತೀರಿಕೊಂಡು ಐದು ವರ್ಷಗಳಾಗಿದೆ. ಒಬ್ಬರು ಪುತ್ರಿಯನ್ನು ರಾಯಚೂರಿನ ಮಾವಿನಕೆರೆ ಬೀಗರಿಗೆ ಮದುವೆ ಮಾಡಿಕೊಟ್ಟಿರುವುದಾಗಿ ಹೇಳಿದರು. ‘ಈ ರೋಗ ಹೋದಮ್ಯಾಲ್‌ ನಾವು ಆರಾಮ ಇರ್ತೀವಿ. ಜನರೆಲ್ಲ ಆರಾಮ ಇದ್ರ್‌.. ನಾವೂ ಅವರ ಜೊತೆ ಇರ್ತೀವಿ. ಇಲ್ಲಂದ್ರ ಭಾಳ್‌ ಕಷ್ಟ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT