ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಾವಣೆ ಹೆಸರುಗಳನ್ನು ಗುಟ್ಟಾಗಿಟ್ಟ ನಗರಸಭೆ!

ಫಲಕಗಳನ್ನು ಅಳವಡಿಸಲು ಇನ್ನೂ ಸಿದ್ಧವಾಗದ ಯೋಜನೆ
Last Updated 13 ಜನವರಿ 2019, 19:32 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ನೂರಾರು ಬಡಾವಣೆಗಳು ಅಭಿವೃದ್ಧಿ ಆಗಿರುವುದು ನಗರಸಭೆ ಕಡತಗಳಲ್ಲಿದೆ. ಆದರೆ, ಯಾವ ಬಡಾವಣೆ ಎಲ್ಲಿದೆ ಎಂಬುದು ಮಾತ್ರ ಜನಸಾಮಾನ್ಯರಿಗೆ ತಿಳಿಯುವುದಿಲ್ಲ.

ಮಾರ್ಗಗಳಲ್ಲಿ ಸಂಚರಿಸುವ ಬಡಾವಣೆ ನಿವಾಸಿಗಳನ್ನು ಈ ಬಗ್ಗೆ ವಿಚಾರಿಸಬೇಕು. ಇಲ್ಲದಿದ್ದರೆ ವ್ಯಾಪಾರಿ ಮಳಿಗೆಗಳ ಫಲಕಗಳಲ್ಲಿ ಬರೆದ ವಿಳಾಸವನ್ನು ನೋಡಿಯೇ ತಿಳಿದುಕೊಳ್ಳುವ ಅನಿವಾರ್ಯತೆ ಇದೆ. ನಗರಕ್ಕೆ ಹೊಸದಾಗಿ ಬರುವ ಜನರು ಹಾಗೂ ಇನ್ನೊಂದು ಬಡಾವಣೆಗೆ ವಿಳಾಸ ಹುಡುಕಿಕೊಂಡು ಹೋಗುವ ಸ್ಥಳೀಯ ಜನರು ಕೂಡಾ ಗೊಂದಲಕ್ಕೀಡಾಗುತ್ತಾರೆ. ಜನರ ತಿಳಿವಳಿಕೆಗಾಗಿ ಮಾರ್ಗಸೂಚಿ ಫಲಕಗಳನ್ನು ಹಾಕಿ ಅನುಕೂಲ ಮಾಡಿಕೊಡುವ ಕೆಲಸವನ್ನು ನಗರಸಭೆ ಇವರೆಗೂ ಮಾಡಿಲ್ಲ.

ಯಾವುದೇ ಬಡಾವಣೆಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳುವ ಮೊದಲು ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಅನುಮತಿ ನೀಡುವಾಗ, ಆಯಾ ಬಡಾವಣೆಯ ಮೂಲನಕ್ಷೆಯನ್ನು ಆಧರಿಸಿ ಅನುಮತಿ ನೀಡಲಾಗುತ್ತದೆ. ಪ್ರತಿಯೊಂದು ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಇಂತಹ ನಕ್ಷೆಯನ್ನೊಳಗೊಂಡ ಫಲಕ ಅಳವಡಿಸುವ ಕೆಲಸವನ್ನು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಒಟ್ಟಾಗಿ ಮಾಡಬೇಕಿತ್ತು.

ಈಚೆಗೆ ಅಭಿವೃದ್ಧಿ ಆಗಿರುವ ಖಾಸಗಿ ಬಡಾವಣೆಗಳಲ್ಲಿ ಮಾತ್ರ ಫಲಕಗಳನ್ನು ಕಾಣಬಹುದು. ಆದರೆ, ಬಹುತೇಕ ಬಡಾವಣೆಗಳ ಗಡಿಗಳು ಎಲ್ಲಿವೆ ಎಂಬುದನ್ನು ತಿಳಿಯಲು ನಗರಸಭೆಯ ಕಡತಗಳು ಅಥವಾ ಸ್ಮಾರ್ಟ್‌ ಫೋನ್‌ ಮೊರೆ ಹೋಗಬೇಕಾಗಿದೆ.

‘ಪ್ರತಿ ವರ್ಷ ಪ್ರತಿ ಕಟ್ಟಡಗಳಿಂದ ನಗರಸಭೆ ಕರ ವಸೂಲಿ ಮಾಡುತ್ತದೆ. ಸಂಗ್ರಹಿಸಿರುವ ಕರವನ್ನು ಜನರಿಗೆ ಅನುಕೂಲ ಮಾಡಿಕೊಡುವ ಕೆಲಸಕ್ಕೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಒಂದೇ ಒಂದು ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಕನಿಷ್ಠಪಕ್ಷ ಬೇರೆ ಊರುಗಳಿಂದ ನಗರಕ್ಕೆ ಬರುವ ಜನರಿಗೆ ದಾರಿ ತೋರಿಸುವ ಕೆಲಸವನ್ನೂ ಮಾಡುತ್ತಿಲ್ಲ. ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಕೂಡಾ ಈ ಬಗ್ಗೆ ಗಮನ ಹರಿಸುವುದಿಲ್ಲ. ಪ್ರತಿ ಬಡಾವಣೆಗೆ ಹಾಗೂ ರಸ್ತೆಗಳಿಗೆ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು’ ಎನ್ನುತ್ತಾರೆ ಎಲ್‌ಬಿಎಸ್‌ ನಗರದ ಸುಧೀಂದ್ರಪ್ರಸಾದ್‌ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT